Friday, 28 June 2013

ಒಂದು ಅನಿರೀಕ್ಷಿತ ಭೇಟಿ ಮತ್ತು ಮಾತುಕತೆ!


`ಮ್ಯಾನ್ ಬುಕರ್' ಅಂತರಾಷ್ಟ್ರೀಯ ಪ್ರಶಸ್ತಿಗೆ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ ಭಾರತೀಯ ಲೇಖಕರು ಹಾಗೂ ಪ್ರತಿಷ್ಠಿತ ಜ್ಞಾನಪೀಠ ಪುರಸ್ಕೃತರು ಆದಂತಹ ಯು.ಆರ್. ಅನಂತಮೂರ್ತಿಯವರನ್ನು  ಭೇಟಿ ಮಾಡುತ್ತೇನೆ ಅನ್ನುವ ನಿರೀಕ್ಷೆ ಮಾತ್ರ ನನಗೆ ಇರಲಿಲ್ಲ. ಅನಿರೀಕ್ಷತೆಗೆ ಕಾರಣವಾದವರು ನನ್ನ ಆತ್ಮೀಯರಲ್ಲೊಬ್ಬರಾಗಿರುವ  ಚನ್ನಗಿರಿ ಕೇಶವಮೂರ್ತಿ ಎಂಬ ಹಿರಿಯ ಚೇತನ.

ಕನ್ನಡದ ಹಿರಿಯ ಕಾದಂಬರಿಕಾರ ಹಾಗೂ ಕ್ರಿಕೇಟ್ ಅಂಕಶಾಸ್ತ್ರಜ್ಞರಾಗಿರುವ ಸಿ.ಚನ್ನಗಿರಿ ಕೇಶವಮೂರ್ತಿಯವರು ಅನಂತ ಮೂರ್ತಿಯವರ ಶಿಷ್ಯರು. ಶಿವಮೊಗ್ಗದಲ್ಲಿ ಅನಂತಮೂರ್ತಿಯವರು ಪ್ರಾಧ್ಯಾಪಕರಾಗಿದ್ದಾಗ ಕೇಶವ ಮೂರ್ತಿ ಅವರ ಶಿಷ್ಯರಾಗಿದ್ದವರು. ಈಗ ಕೇಶವಮೂರ್ತಿಯವರಿಗೆ 75 ವರ್ಷ. ಕ್ರಿಕೇಟ್ ಅಂಕಿಅಂಶಗಳು ಹಾಗೂ ಸಾಹಿತ್ಯವಲಯದಲ್ಲಿ ಕೇಶವಮೂರ್ತಿಯವರದ್ದು ಕಣ್ಣಿಗೆ ಕಾಣದ ದೊಡ್ಡ ಸಾಧನೆ.

`ಅನಂತಮೂರ್ತಿಯವರ ಮನೆಗೆ ಹೋಗುತ್ತಿದ್ದೇನೆ  ಶ್ರೀಧರ್, ನೀವು ಬನ್ನಿ ಅವರ ಪರಿಚಯ ಮಾಡಿಸುತ್ತೇನೆ, ಹಾಗೆ ನೀವು ಬರೆದ ಪುಸ್ತಕವನ್ನು ಕೂಡ ಅವರಿಗೆ ನೀಡಬಹುದು, ಅವರ ಜೊತೆ ವೈಯಕ್ತಿಕವಾಗಿ ಮಾತನಾಡಬಹುದು' ಅಂತ ಫೋನ್ ಮಾಡಿದ್ದ ಕೇಶವಮೂರ್ತಿಯವರು, ಸಾಯಂಕಾಲ ಐದು ಗಂಟೆಗೆ ಅವರನ್ನು ಭೇಟಿ ಮಾಡುವ ಸಮಯ ಕೊಟ್ಟಿದ್ದಾರೆ ಅಂತ ಹೇಳಿದ್ದರು. ಅನಂತಮೂರ್ತಿಯವರನ್ನು ಭೇಟಿಮಾಡುವ, ಅವರ ಜೊತೆ ಮಾತನಾಡುವ ಅವಕಾಶ ಸಿಕ್ಕಿರುವುದು  ನನಗೆ ಸುದೈವ ಅಂತಂದುಕೊಂಡು, ದಿನದ ನನ್ನ ಎಲ್ಲ ಕೆಲಸಗಳನ್ನು ಕ್ಯಾನ್ಸೆಲ್ ಮಾಡಿಕೊಂಡು ಕೇಶವಮೂರ್ತಿಯವರ ಜೊತೆಗೆ ಡಾಲರ್ಸ್ ಕಾಲೋನಿಯಲ್ಲಿದ್ದ ಅವರ ಮನೆಗೆ ಹೋಗಿದ್ದೇವು ನಡುವೆ ಅನಾರೋಗ್ಯವು ನನ್ನನ್ನು ಕಾಡುತ್ತಿತ್ತು.

ದಿನಕ್ಕೆ ನಾಲ್ಕು ಬಾರಿ ಡಯಾಲಿಸೀಸ್ ಮಾಡಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಅವರಿಗಿದ್ದಿದುದರಿಂದ ನಾವು ಹೋದ ಸಮಯದಲ್ಲಿ, ಅವರ ಮನೆ `ಸುರಗಿಯಲ್ಲೇ  ಡಯಾಲಿಸೀಸ್ ನಡೆಯುತ್ತಿತ್ತು. ಮೊದಲು ನಮ್ಮನ್ನು ಬರಮಾಡಿಕೊಂಡ ಅನಂತಮೂರ್ತಿಯವರ ಶ್ರೀಮತಿ ಎಸ್ತರ್ ನಮ್ಮನ್ನು ಅವರ ಆಫೀಸ್ನಲ್ಲಿ ಕೂರಿಸಿದ್ದರು. ಡಯಾಲಿಸೀಸ್ ಮುಗಿದ ಮೇಲೆ ನಮ್ಮನ್ನು ಅವರಿದ್ದಲ್ಲಿಗೆ ಕರೆಸಿಕೊಂಡ ಮೂರ್ತಿಯವರು ತುಂಬ ಪ್ರೀತಿಪೂರ್ವಕವಾಗಿ ಬರಮಾಡಿಕೊಂಡರು. ಆಗಷ್ಟೇ ಡಯಾಲಿಸೀಸ್ ಮಾಡಿಸಿಕೊಂಡಿದ್ದರೂ, ಅವರಲ್ಲಿನ ಪ್ರೀತಿಪೂರ್ವಕವಾದಂತಹ ಮಾತುಗಳಿಗೇನು ಕಡಿಮೆ ಇರಲಿಲ್ಲ. ಅವರ ಜೊತೆ ಸುಮಾರು 10-15 ನಿಮಿಷ ಮಾತನಾಡಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯವೆನ್ನಬಹುದು. ನಮ್ಮ ಬಗ್ಗೆ, ನಾವು ಮಾಡುತ್ತಿರುವ ಕೆಲಸದ ಬಗ್ಗೆ, ಪ್ರಸ್ತುತ ಟೀವಿ ವಾಹಿನಿಗಳು ಸಾಗುತ್ತಿರುವ ಬಗ್ಗೆ ಅವರಲ್ಲಿನ ಅಸಮಾಧಾನವನ್ನು ನಮ್ಮುಂದೆ  ಹೇಳಿಕೊಂಡರು.
ನನಗೆ ಬಹಳ ದಿನಗಳಿಂದಲೂ ಬನವಾಸಿಯನಾದ ನನಗೆ ಕದಂಬೋತ್ಸವವನ್ನು ಕಾಟಾಚಾರದ ರೀತಿ ಮಾಡುತ್ತಿರುವ ಬಗ್ಗೆ ಅಸಮಾಧಾನವಿತ್ತು. ಅದನ್ನು ಅವರ ಮುಂದೆ ತೋಡಿಕೊಂಡೆಬನವಾಸಿಯಲ್ಲಿ ಕದಂಬೋತ್ಸವನ್ನು ಆಚರಿಸುವುದನ್ನೇ ಬಿಟ್ಟುಬಿಟ್ಟಿದ್ದಾರೆ ಅಂತ ನೋವನ್ನು ಹೇಳಿಕೊಂಡೆ.

ನನ್ನ ಪ್ರಶ್ನೆಗೆ ಅವರು ಕೊಟ್ಟ ಉತ್ತರ ಸರಳವಾಗಿತ್ತು. `ಮೊದಲೆಲ್ಲಾ ಪಂಪಪ್ರಶಸ್ತಿಯನ್ನು ಸಾಹಿತ್ಯವಲಯದಲ್ಲಿ ತುಂಬಾ ಜನಪ್ರಿಯರಾಗಿದ್ದ ಹಿರಿಯ ಸಾಹಿತಿಗಳಿಗೆ ಮಾತ್ರ ನೀಡಲಾಗುತ್ತಿತ್ತು. ಹಾಗಾಗಿ ತುಂಬಾ ವಿಜ್ರಂಭಣೆಯಿಂದ ಕದಂಬೋತ್ಸವವನ್ನು 3-4  ದಿನಗಳ ಮಾಡಲಾಗುತ್ತಿತ್ತು. ನಂತರ ಆಯ್ಕೆ ಮಾನದಂಡ ಸ್ವಲ್ಪ ಅಷ್ಟೊಂದು ಸರಿಯಾಗಿ ಸಾಗದೇ, ಹೇಗೋ ವರ್ಷಕ್ಕೆ ಒಬ್ಬರನ್ನು ಆಯ್ಕೆ ಮಾಡುವ ಪರಿಸ್ಥಿತಿಗೆ ಬಂದಿತು. ಇದು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಹೋಯಿತು. ಕದಂಬೋತ್ಸವದ ಆಚರಣೆಯಲ್ಲಿ ಮೊದಲಿದ್ದ ಉತ್ಸಾಹ ಕಡಿಮೆಯಾಗಿ ರೀತಿಯ ಪರಿಸ್ಥಿತಿಗೆ ಬಂದಿರಬಹುದು ಅನ್ನುವ ಉತ್ತರವನ್ನು ನೀಡಿದರು. ನನಗೆ ಅವರ ಉತ್ತರ ಸರಿ ಅನಿಸಿತು. ಕಳೆದ ವರ್ಷ ಪಂಪಪ್ರಶಸ್ತಿಗೆ ಆಯ್ಕೆಯಾಗಿದ್ದ ಹಿರಿಯ ವಿಮರ್ಶಕ ಜಿ.ಹೆಚ್.ನಾಯಕರವರು ಕೂಡ ಕೊನೆಯ ಕ್ಷಣದಲ್ಲಿ ತಮ್ಮನ್ನು ಕಾರ್ಯಕ್ರಮಕ್ಕೆ ಕರೆದಿದ್ದಕ್ಕೆ ಸಿಟ್ಟಾಗಿ ಪಂಪಪ್ರಶಸ್ತಿ ಪಡೆಯಲು ಹೋಗದೇ ಇರುವುದಾಗಿ ಹೇಳಿದ್ದನ್ನು ಈಗ ಸ್ಮರಿಸಬಹುದು. ಇದು ಕದಂಬೋತ್ಸವ ಆಚರಣೆಯ ಹಿಂದಿನ ತಾಂತ್ರಿಕ ತೊಂದರೆಗಳು.

ವೈಯಕ್ತಿಕವಾಗಿ ನಾನು ಅನಂತಮೂರ್ತಿಯವರ ಸಾಹಿತ್ಯದಷ್ಟೇ ಅವರ ಸಾಮಾಜಿಕ ಚಿಂತನೆಗಳು, ವಿಮರ್ಷೆಗಳನ್ನು ತುಂಬಾ ಇಷ್ಟಪಟ್ಟು ಓದುತ್ತೇನೆ. ಅವರ ರಾಜಕೀಯ ನಿಲುವುಗಳ ಮೇಲೆ ನನಗೆ ಅಷ್ಟೋಂದು ನಂಬಿಕೆ ಇಲ್ಲ. ಮೂರ್ನಾಲ್ಕು ತಿಂಗಳ ಹಿಂದೆಯಷ್ಟೇ ಓದಿದ್ದ 50 ವರ್ಷದ ಹಿಂದಿನ ಅವರ 'ಸಂಸ್ಕಾರ' ಕೃತಿ ಇಂದಿಗೂ ಪ್ರಸ್ತುತವಾಗಿದೆ. ಏಷ್ಟು ಸಲ ಓದಿದರೂ, ಇನ್ನೊಮ್ಮೆ ಓದಿಸಿಕೊಂಡು ಹೋಗುತ್ತದೆ. ಇದೇ ಕೃತಿ ಅವರನ್ನು ಮ್ಯಾನ್ ಬುಕರ್ ಅಂತರಾಷ್ಟ್ರೀಯ ಪ್ರಶಸ್ತಿಯ ಅಂತಿಮ ಸುತ್ತಿಗೆ ಕರೆದುಕೊಂಡು ಹೋಗಿತ್ತು
ಸಾಹಿತ್ಯಕ್ಷೇತ್ರದಲ್ಲಿ ಅನಂತಮೂರ್ತಿಯವರದ್ದು ಅವರದ್ದು ಅದ್ಭುತ ಸಾಧನೆ. ಅವರಿಗಿರುವ ಹೆಸರು, ವರ್ಚಸ್ಸು, ಗೌರವ ಅದು ಅವರಿಗೆ ಮಾತ್ರ.

ಇನ್ನೊಮ್ಮೆ ಖಂಡಿತ ಬನ್ನಿ, ಸಿಗೋಣ, ಮಾತನಾಡುವ ಅಂತ ಹೇಳಿ ಅವರ ಆಶೀರ್ವಾದದ ಪಡೆದು ಮನೆಯಿಂದ ಹೊರಬಂದೆವು. ಮುಂದಿನ ಅವರ ಭೇಟಿಗಾಗಿ ಎದುರುನೋಡುತ್ತಿರುವೆ.

Sunday, 23 June 2013

ಭ್ರಷ್ಟಾಚಾರಕ್ಕೆ ಬೆಲೆ ಏರಿಕೆಯೇ ಮೂಲ ಕಾರಣ!

(ಹೊಸ ದಿಗಂತ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ) 

ಕಾಂಗ್ರೆಸ್ ಸರ್ಕಾರದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡು ಓಟು ಕೊಟ್ಟು ಗೆಲ್ಲಿಸಿದ  ಕರ್ನಾಟಕದ ಜನರಿಗೆ ಆರಂಭದಲ್ಲೇ ಮುಖ್ಯಮಂತ್ರಿಗಳ ನಿರ್ಧಾರಗಳು ಅಪಾರ ಬೇಸರವನ್ನು ಮೂಡಿಸಿವೆ. ಒಂದು ರೂಪಾಯಿಗೆ ಅಕ್ಕಿ ಕೊಡುವ ಯೋಜನೆ ಎಂತಹ ಅನಾಹುತವನ್ನು ಮುಂದಿನ ದಿನಗಳಲ್ಲಿ ಸೃಷ್ಟಿ ಮಾಡಲಿದೆ ಅನ್ನುವುದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಅರ್ಥವಾಗುತ್ತಿಲ್ಲ. ಇಡೀ ಕರ್ನಾಟಕದಾದ್ಯಂತ ಹಲವು ಲಕ್ಷಕ್ಕೂ ಹೆಚ್ಚು ಬೋಗಸ್ ರೇಷನ್  ಕಾರ್ಡ್ ಗಳಿವೆ. ಸರ್ಕಾರಿ ಸಂಬಳ  ಮಾತ್ರ ಇಲ್ಲ ಅನ್ನುವುದೊಂದು ಬಿಟ್ಟು, 5-6 ಎಕರೆ ಜಮೀನು ,ಮನೆ, ಇತರ ಆದಾಯ ಇರುವ ಜನರು ಕೂಡ ಬಿಪಿಎಲ್ ಕಾರ್ಡ್ ಗಳನ್ನು ಹೊಂದಿದ್ದಾರೆ. ಹುಡುಕುತ್ತಾ ಹೋದರೆ ಅನುಕೂಲಸ್ಥ ಜನರೇ ಬಿಪಿಎಲ್ ಕಾರ್ಡ್ ಗಳನ್ನು ಹೆಚ್ಚಿಗೆ ಹೊಂದಿದ್ದಾರೆ, ಇವರ ಸಂಖ್ಯೆ ಕೂಡ ಲಕ್ಷ ಮುಟ್ಟಬಹುದು. ಇನ್ನೊಂದು ವಿಷಯವೇನಂದರೆ, ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಜನರು ಅಕ್ಕಿಗಿಂತ ಹೆಚ್ಚಾಗಿ ಜೋಳವನ್ನು ಹೆಚ್ಚಾಗಿ ಬಳಸುತ್ತಾರೆ, ಅಲ್ಲಿ  ಅನ್ನಕ್ಕಿಂತ ಹೆಚ್ಚಾಗಿ ಜೋಳದ ರೊಟ್ಟಿ, ಅಂಬಲಿಯನ್ನು ಊಟ ಮಾಡುವವರೆ ಹೆಚ್ಚು. ಹಾಗಾಗಿ ಅಕ್ಕಿಯ ಅನಿವಾರ್ಯತೆ ಅಲ್ಲಿಯ ಜನರಿಗೆ ಅಷ್ಟೊಂದು ಎದ್ದುಕಾಣುವುದಿಲ್ಲ.  ಉತ್ತರ ಕರ್ನಾಟಕದ ಜನರಿಗೆ ಅಕ್ಕಿಗಿಂತ ಹೆಚ್ಚಾಗಿ ಜೋಳ, ಗೋಧಿಯ ಅನಿವಾರ್ಯತೆ ಹೆಚ್ಚಾಗಿ ಇದೆ.

3 ರೂಪಾಯಿಗೆ  ಒಂದು ಕೇಜಿ ಅಕ್ಕಿ ಇರುವಾಗಲೇ ಸೊಸೈಟಿಯಿಂದ ಅಕ್ಕಿ, ಗೋಧಿಯನ್ನು ಪಡೆದು, ಅದನ್ನು ದಿನಸಿ ಅಂಗಡಿಗಳಿಗೆ ಮಾರುತ್ತಿದ್ದ  ಅನೇಕ ಘಟನೆಗಳು ಹಿಂದೆ ವರದಿಯಾಗಿವೆ. ಇದು ಪ್ರತಿ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಾಣುವಂತಹದ್ದು. ಸೊಸೈಟಿಯ ಅಕ್ಕಿಯನ್ನು ಅಲ್ಲಿಯವರೇ ಕದ್ದು ಮಾರಿ ಸಿಕ್ಕಿ ಬಿದ್ದ ಘಟನೆಗಳು ಕೂಡ ಕಡಿಮೆ ಏನಿಲ್ಲ.  ಹೀಗೆ ಕರ್ನಾಟಕದಾದ್ಯಂತ ಪಡಿತರ ಚೀಟಿಯಲ್ಲಿ ಆಗುತ್ತಿರುವ  ಇಂತಹ ಹಗಲು ದರೋಡೆಗಳ ಬಗ್ಗೆ ಸರ್ಕಾರ ಮೊದಲು ಗಮನ ಹರಿಸಿ, ಮೂಲ ಸಮಸ್ಯೆಗಳನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಿ, ಆಮೇಲೆ ಒಂದು ರೂಪಾಯಿಗೆ ಒಂದು ಕೇಜಿ ಅಕ್ಕಿ ಕೊಡಬಹುದಿತ್ತು.  ಬೋಗಸ್ ಕಾರ್ಡ್ ಗಳನ್ನು ಮೊದಲು ಪತ್ತೆ ಹಚ್ಚಿ. ಅವುಗಳನ್ನು ತೆಗೆದುಹಾಕಿ ಅರ್ಹರಿಗೆ ಮಾತ್ರ ಈ ರೀತಿಯ ಸೌಲಭ್ಯವನ್ನು ನೀಡಿದ್ದರೆ ಖಂಡಿತ ಈಗಿನ ಸರ್ಕಾರದ ನಿರ್ಧಾರವನ್ನು ಮೆಚ್ಚುತ್ತಿದ್ದರೇನೋ! ಇದರ ಜೊತೆಗೆ ಎಪಿಎಲ್ ಕಾರ್ಡ್ ಗಳನ್ನು ಹೊಂದಿದವರು  ಕೂಡ ಹೆಚ್ಚಿನ ಅನುಕೂಲಸ್ಥರಲ್ಲ ಅನ್ನುವುದನ್ನು ಮೊದಲು  ಸರ್ಕಾರ  ಅರ್ಥಮಾಡಿಕೊಳ್ಳಬೇಕು. ಎಪಿಎಲ್ ಕಾರ್ಡ್ ದಾರರನ್ನು ಈ ಸೌಲಭ್ಯದಿಂದ ದೂರವಿಟ್ಟಿರುವುದು ಕೂಡ ಸಮಂಜಸವಲ್ಲ. ಖಾಸಗಿ ಹಾಗೂ ಒಳ್ಳೆಯ ಜಮೀನುದಾರನಿಗೆ ಬಿಪಿಎಲ್ ಕಾರ್ಡ್  ತುಂಬಾ ಬೇಗ ಸಿಗುವಾಗ, ಅತಿ ಕಡಿಮೆ ಸರ್ಕಾರಿ ಸಂಬಳ ಪಡೆಯುವನಿಗೆ ಬಿಪಿಎಲ್ ಬದಲು ಎಪಿಎಲ್ ಕಾರ್ಡ್ ಗಳನ್ನು ನೀಡಲಾಗುತ್ತಿದೆ. ಹಾಗಾಗಿ ಸರ್ಕಾರದ ಕೆಳ ದರ್ಜೆಯ ಕೆಲಸಗಾರರು ಲಂಚ ತೆಗೆದುಕೊಳ್ಳಲಿಕ್ಕೆ ಒಳ್ಳೆಯ ಕಾರಣ ಸಿಕ್ಕಹಾಗಾಯಿತು. ಇದನ್ನೆಲ್ಲ ನೋಡಿದಾಗ ಸರ್ಕಾರವು ಈ ಯೋಜನೆಗೆ ವಾರ್ಷಿಕ 4000 ಕೋಟಿ ರೂಪಾಯಿಗಳನ್ನು ವಿನಿಯೋಗ ಮಾಡುವುದಕ್ಕಿಂತ ಮೊದಲು ಇದರಲ್ಲಿ ಸ್ವಲ್ಪ ಭಾಗವನ್ನು ಕೆಟ್ಟು ನಾರುತ್ತಿರುವ ಈ ವ್ಯವಸ್ಥೆಯನ್ನು ಸರಿ ಪಡಿಸಲು ಬಳಸಿಕೊಂಡರೆ ನಿಜಕ್ಕೂ ಒಳ್ಳೆಯದಿತ್ತು. ತಿಂಗಳಿಗೆ 3-4 ಸಾವಿರ ಹಣ ಸರ್ಕಾರದಿಂದ ಸಂಬಳ ಪಡೆಯುತ್ತಿದ್ದಾರೆ ಅಂದ ಮೇಲೆ ಅವರು ಅನುಕೂಲಸ್ಥರಾಗಿದ್ದಾರೆ ಅಂತ ಹೇಳಲಾಗದು. ಈಗಾಗಲೆ ಗುತ್ತಿಗೆ ಆಧಾರದ ಮೇಲೆ ಬೇರೆ ಬೇರೆ ವಿಭಾಗಗಳಲ್ಲಿ ಬೆಂಗಳೂರು ಮತ್ತು ಇತರ ಜಿಲ್ಲೆಗಳಲ್ಲಿ ದುಡಿಯುತ್ತಿರುವ ಅರೆಕಾಲಿಕ ಕೆಲಸಗಾರರು ಕೂಡ ಸರ್ಕಾರದ ನಿರ್ಧಾರದಿಂದ ಕೆಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಬಡವರಲ್ಲಿ ಅತಿ ಕಡು ಬಡವರನ್ನು ಹುಡುಕಿ ಅವರಿಗೆ ಈ ಯೋಜನೆ ನೀಡಿದರೆ ತುಂಬಾ ಚೆನ್ನ. ಅದರಲ್ಲೂ ಅತಿ ಕಡಿಮೆ ಸಂಬಳದಲ್ಲಿ ದುಬಾರಿ ನಗರವಾದ ಬೆಂಗಳೂರಿನಲ್ಲಿ ಜನಸಾಮಾನ್ಯರು ಬದುಕಲು ಸಾಧ್ಯವೇ?

ಎರಡನೇಯದಾಗಿ ಸರ್ಕಾರವು ಖಾಸಗಿ ಸಾರಿಗೆಯವರಿಗೆ ಅನುಕೂಲವಾಗುವ ಹಾಗೆ  ಮೇಲ್ನೋಟಕ್ಕೆ ಕಾಣುವಂತೆ  ಬಿಎಮ್ಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ ದರವನ್ನು  ಏಕಾ ಏಕಿ ಏರಿಸಿ ಜನರ ಜೇಬಿಗೆ ನೇರವಾಗಿ ಕತ್ತರಿಹಾಕಿದೆ. ತಿಂಗಳಿಗೆ 5-6ಸಾವಿರಕ್ಕೆ ದುಡಿಯುವವರು  ಎಲ್ಲ ಕ್ಷೇತ್ರಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಿಗುತ್ತಾರೆ. ಅವರೆಲ್ಲಾ ಸಿಗುವ ಸಂಬಳದಲ್ಲಿ ಬಸ್ ಜಾರ್ಜ್  ಓಡಾಟಕ್ಕೆ ಇಂತಿಷ್ಟು ಹಣವನ್ನು ಮೀಸಲಾಗಿಟ್ಟಿರುತ್ತಾರೆ. ತಿಂಗಳ ಆತನ ಬಜೆಟ್ನಲ್ಲಿ ಈ ರೀತಿಯ ಏರಿಕೆ ಆದರೆ, ಆತ ಉಳಿದ ಖರ್ಚು,  ಸಂಸಾರ ನಿರ್ವಹಣೆಗೆ ಬೇರೊಂದು ರೀತಿಯಲ್ಲಿ ಹಣ ಮಾಡಲಿಕ್ಕೆ ನಿಲ್ಲುತ್ತಾನೆ.  ಏಷ್ಟೋ ಬಾರಿ ಬಿಎಮ್ಟಿಸಿ ಬಸ್ಗಳಲ್ಲಿ ಕಂಡಕ್ಟರ್ಗಳು ಕೇವಲ 5 ರೂಪಾಯಿಯನ್ನು  ಜೇಬಿಗೆ ಉಳಿಸಿಕೊಳ್ಳಲು ಹೋಗಿ, ಟಿಕೆಟ್ ಕೊಡದೇ ಸಿಕ್ಕಿಬಿದ್ದು ಸಾವಿರ ರೂಪಾಯಿಯನ್ನು  ಮೇಲಾಧಿಕಾರಿಗಳಿಗೆ ದಂಡ ಕಟ್ಟಿದ  ಘಟನೆಗಳು ಕೂಡ ಸಾಮಾನ್ಯವಾಗಿದೆ. ಒಬ್ಬ ಸಾಮಾನ್ಯ  ಬಿಎಮ್ಟಿಸಿ ಕಂಡಕ್ಟರ್, ಡ್ರೈವರ್ಗಳು ಸಂಸ್ಥೆ ನೀಡುವ ಸಂಬಳದಲ್ಲಿ ಸಂಸಾರ ನಡೆಸಲಿಕ್ಕೆ ಸಾಧ್ಯವಾಗದೇ, ಯಾರಿಗೂ ಗೊತ್ತಾಗದ ಹಾಗೆ ಖಾಸಗಿ ಟ್ರಾವೆಲ್ಗಳಲ್ಲಿ, ಎಲ್ಐಸಿ ಎಜೆಂಟಗಳಾಗಿ ಕೂಡ ಕೆಲಸ ಮಾಡುತ್ತಾ ಸಂಸಾರವನ್ನು ಹೇಗೋ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಅನೇಕರು ಉದ್ಯೋಗದ ಜೊತೆಗೆ ಉಪ ಉದ್ಯೋಗಗಳನ್ನು ಕೂಡ ಮಾಡುವುದು ಎಲ್ಲ ಕ್ಷೇತ್ರಗಳಲ್ಲಿ ಸಾಮಾನ್ಯ. ಬೆಂಗಳೂರಿನಂತಹ  ನಗರದಲ್ಲಿ ಈ ರೀತಿ ದುಡಿಯದಿದ್ದರೆ ನ್ಯಾಯವಾಗಿ ಬದುಕುವುದು ತುಂಬಾ ಕಷ್ಟ ಅಂತ ಈ ರೀತಿ ಮೂರ್ನಾಲ್ಕು ಕಡೆ ದುಡಿದು ಸಂಸಾರದೂಗಿಸುವವರ ಮಾತು.  ಮುಖ್ಯವಾಗಿ ಬಸ್ಗಳ ದರವನ್ನು ಏಕಾಏಕೀ ಈ ರೀತಿ ಏರಿಸಿದರೆ, ಜನರು ಸರ್ಕಾರಿ  ಬಸ್ಗಳಲ್ಲಿ ಹೇಗೆ ತಾನೇ ಪ್ರಯಾಣಿಸಿಯಾರು? ಖಾಸಗಿಯವರು ಸರ್ಕಾರಿ  ಬಸ್ಗಳಿಗಿಂತ ಇನ್ನು ಹೆಚ್ಚಿನ ಸೌಲಭ್ಯ ನೀಡಿ, ಅವರಿಗಿಂತ ಕಡಿಮೆ ದರಕ್ಕೆ ಸುಖಕರ ಪ್ರಯಾಣವನ್ನು ನೀಡುವಾಗ ಜನರು ಸಕರ್ಾರಿ ಬಸ್ಗಳ ಕಡೆಗೆ ಮುಖಮಾಡುವುರೇ? ಅಷ್ಟಕ್ಕೂ ಸರ್ಕಾರ  ಬಸ್ಗಳು ಜನರಿಗೆ ಕೊಡುವ ಅಷ್ಟು ಹಣದಲ್ಲಿ ಅಂತಹ ಸೌಲಭ್ಯವನ್ನಾದರೂ ನೀಡುತ್ತವೆಯೇ?. ಅಕಸ್ಮಾತ್ ಉತ್ತಮ ಎಸಿ ಪ್ರಯಾಣ ಬೆಂಗಳೂರಿನಿಂದ ಹುಬ್ಬಳ್ಳಿಗೆ ಸರ್ಕಾರಿ  ಬಸ್  600 ರೂಪಾಯಿ ಇಟ್ಟರೆ, ಖಾಸಗಿಯವರು ಕೇವಲ 400 ರೂಪಾಯಿಯಲ್ಲಿ ಅದೇ ಸೌಲಭ್ಯ ನೀಡಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಕರೆದುಕೊಂಡುಹೋಗುತ್ತಾರೆ. ಎರಡು ದರಗಳು ಮತ್ತು ನೀಡುವ ಬಸ್ಗಳ ವ್ಯವಸ್ಥೆಯನ್ನು ನೋಡಿದಾಗ, ಖಾಸಗಿ ಬಸ್ಗಳು, ನಮ್ಮ ಸಕರ್ಾರಿ ಬಸ್ಗಳಿಗಿಂತ ಉತ್ತಮ ಕಂಡಿಷನ್ ಹೊಂದಿರುವುದರ ಜೊತೆಗೆ ಒಳ್ಳೆಯ  ಗ್ರಾಹಕ ಸೇವೆ ನೀಡುತ್ತಿವೆ.. ಕೆಎಸ್ಆರ್ಟಿಸಿ, ಬಿಎಮ್ಟಿಸಿ ಬಸ್ಗಳಲ್ಲಿ ಓಡಾಡಲಿಕ್ಕೆ ಹೆಚ್ಚು ಹಣ ಕೊಡುವುದಕ್ಕಿಂತ, ಖಾಸಗಿ ಬಸ್ಗಳಲ್ಲಿ ಅದಕ್ಕಿಂತ ಕಡಿಮೆ ಹಣ ಕೊಟ್ಟು ಓಡಾಡಿ ಒಂದಿಷ್ಟು ಹಣ ಉಳಿಸಬಹುದಲ್ಲ ಅನ್ನುವ ಯೋಚನೆ ಪ್ರತಿ ಸಾಮಾನ್ಯ ಜನರಿಗೂ ಬಂದೇ ಬರುತ್ತೆ. ಬೆಲೆ ಏರಿಕೆಯಿಂದ ಖಂಡಿತ ಕೆಎಸ್ಆರ್ಟಿಸಿ, ಬಿಎಮ್ಟಿಸಿ ಬಸ್ಗಳು ಗ್ರಾಹಕರನ್ನು ಕಳೆದುಕೊಳ್ಳುತ್ತವೆ.  ಖಾಸಗಿಯವರಿಗೆ ಹೆಚ್ಚಿನ ಗ್ರಾಹಕರು ಹೋಗುವುದರಿಂದ ಎಲ್ಲ ರೀತಿಯಿಂದಲೂ ಆದಾಯವನ್ನು ಅವರೇ ಪಡೆದುಕೊಳ್ಳುತ್ತಾರೆ. ಬಸ್ಗಳ ದರ ಏರಿಕೆ ಲಾಭಕ್ಕಿಂತ ಹೆಚ್ಚಿನ ನಷ್ಟವನ್ನುಂಟು ಮಾಡುತ್ತದೆ.  ಕೇಂದ್ರ ಹಾಗೂ  ಕರ್ನಾಟಕದಲ್ಲಿ ಕಾಂಗ್ರೆಸ್ ಸಕರ್ಾರ ಇರುವುದರಿಂದ ಡಿಸೇಲ್ ಸಮಸ್ಯೆ ಸಾಧ್ಯವಾದಷ್ಟು ಬೇಗ ಪರಿಹಾರವಾದರೆ ತುಂಬಾ ಒಳ್ಳೆಯದು. ಇಲ್ಲವಾದರೆ ಒಂದು ರೂಪಾಯಿ ಕೇಜಿ ಅಕ್ಕಿ ನೀಡಲು 4000 ಕೋಟಿ ರೂಪಾಯಿ ಖಚರ್ು ಮಾಡುವ ಸಕರ್ಾರ, ಸಾರಿಗೆ ಸಂಸ್ಥೆ ಈಗಾಗಲೇ ಮನವಿ ಮಾಡಿಕೊಂಡಂತೆ 200 ಕೋಟಿ ರೂಪಾಯಿಗಳ ಅನುದಾನವನ್ನು ನೀಡಿದರೆ, ಸಂಸ್ಥೆಗೂ ಒಳ್ಳೆಯದಾಗುತ್ತದೆ, ಜನಸಾಮಾನ್ಯರಿಗೂ ಕೂಡ ತುಂಬಾ ಹಗುರವಾಗುತ್ತದೆ.  ಎಲ್ಲಡೆ ಭ್ರಷ್ಟಚಾರ ತಾಂಡವವಾಡುತ್ತಿದೆ. ದೊಡ್ಡ ಹುದ್ದೆಯ ಅಧಿಕಾರಿಗಳಿಂದ ಹಿಡಿದು ಸಾಮಾನ್ಯ ಸಕರ್ಾರಿ ಅಧಿಕಾರಿಗಳೆಲ್ಲಾ, ಜನಸಾಮಾನ್ಯರ ಹಣವನ್ನು ಕಿತ್ತು ತಿನ್ನುತ್ತಿದ್ದಾರೆ, ಲಂಚ ಕೊಡದೇ ಏನೂ ಕೆಲಸ ಆಗುವುದಿಲ್ಲ ಅನ್ನುವ ಮಾತು ಸಾಮಾನ್ಯವಾಗಿದೆ. ಇಂತಹ ವಾತಾವರಣ ಈಗಾಗಲೇ ಇರುವಾಗ ಸಕರ್ಾರದ ಇಂತಹ ಸಣ್ಣಪುಟ್ಟ ಸಮಸ್ಯೆಗಳು ಇನ್ನಷ್ಟು   ಭ್ರಷ್ಟಾಚಾರಕ್ಕೆ ಈಡು ಮಾಡುತ್ತವೆ.  50 ರೂಪಾಯಿ ಕೊಟ್ಟು ಒಂದು ಕೇಜಿ ಟೊಮೋಟೋ ಕೊಳ್ಳದೇ ಇದ್ದರೂ ಬದುಕಬಹುದು, ಆದರೆ  ಪ್ರತಿ ಮನೆಯಲ್ಲಿ ಒಂದು ಕೇಜಿ ಅಕ್ಕಿ ಇಲ್ಲದೇ ಇದ್ದರೆ ಬೆಂಗಳೂರಿನಂತಹ ನಗರದಲ್ಲಿ ಬದುಕುವುದು ತುಂಬಾ ಕಷ್ಟ.  ತಿಂಗಳ ಸಂಸಾರ, ಮಕ್ಕಳ ಖಚರ್ು, ದುಬಾರಿ ಶಿಕ್ಷಣಕ್ಕೆ ಖಂಡಿತ ಟೇಬಲ್ ಕೆಳಗಿನ ವ್ಯವಹಾರಗಳನ್ನು ಜನರು ಮುಂದುವರೆಸಿಕೊಂಡು ಹೋಗುವ ಸಂದರ್ಭಗಳು ಆಶ್ಚರ್ಯವೇನಿಲ್ಲ ! ಸಾಧ್ಯವಾದಷ್ಟು ಬೆಲೆಏರಿಕೆಗೆ ನಿಯಂತ್ರಣ ಹಾಕಿದರೆ, ಖಂಡಿತ ಭ್ರಷ್ಟಾಚಾರವನ್ನು ಸ್ವಲ್ಪ ಕಡಿಮೆ ಮಾಡಬಹುದು. ಸಕರ್ಾರವೇ ಕೈತುಂಬ ಸಂಬಳ, ಅದರಲ್ಲೇ ಇಡೀ ಸಂಸಾರ ತೂಗಿಸಿಕೊಂಡು ಹೋಗುವಷ್ಟು ವಾತಾವರಣ ನಿರ್ಮಾಣ ಮಾಡಿಕೊಟ್ಟರೆ, ಅನಿವಾರ್ಯತೆ ಇರುವವರು ಖಂಡಿತ ಲಂಚ ಮುಟ್ಟುವುದಿಲ್ಲ. ಮುಖ್ಯವಾಗಿ ಜನವಿರೋಧಿ ಸರ್ಕಾರದ ಪಾಲಿಸಿಗಳು ಮೊದಲು ಬದಲಾಗಬೇಕು.