Monday, 9 December 2013

‘ನಟರಂಗ್’ ಎಂಬ ಅದ್ಭುತ ಮರಾಠಿ ಸಿನಿಮಾ



ಇತ್ತೀಚಿನ ದಿನಗಳಲ್ಲಿ ನಾನು ನೋಡಿದ ಕೆಲವು ಸಿನಿಮಾಗಳಲ್ಲಿ ನನ್ನನ್ನು ಅತ್ಯಂತ ಕಾಡಿದ ಸಿನಿಮಾವೆಂದರೆ ಮರಾಠಿಯ ನಟರಂಗ್’ ಚಿತ್ರ. ಸಿನಿಮಾವನ್ನು ಕಳೆದ ಒಂದು ವಾರದಲ್ಲೇ ನಾಲ್ಕೈದು ಬಾರಿ ನೋಡಿಬಿಟ್ಟೆ. ಚಿತ್ರದ ಒಂದೊಂದು ಸನ್ನಿವೇಶಗಳು, ನಾಯಕನ ಅಭಿನಯ, ಸಂಗೀತವು ನೋಡುಗರನ್ನು ಸೆಳೆದುಕೊಂಡು ನೋಡಿಸಿಕೊಂಡು ಹೋಗುತ್ತದೆ. ಅದ್ಭುತ ಹಾಗೂ ಮನಸ್ಸಿಗೆ ತುಂಬಾ ನಾಟುವಂತಹ, ಬದುಕಿಗೆ ತುಂಬಾ ಹತ್ತಿರವಾದಂತಹ ಸಿನಿಮಾ ಅಂತ ಹೇಳಬಹುದು. ಇಡೀ ಸಿನಿಮಾ ನೋಡಿದ ಮೇಲೆ ಯಾರಿಗೇ ಆಗಲಿ ಒಂದು ಅಮೂರ್ತವಾದಂತಹ ಅನುಭವ ನಿಮ್ಮನ್ನು ಕಾಡದೇ ಬಿಡದು. ‘ನಟರಂಗ್’ ಚಿತ್ರದಲ್ಲಿ ಯಾವ ವಿಭಾಗ ಚೆನ್ನಾಗಿಲ್ಲ ಅಂತ ಹೇಳಲು ಸಾಧ್ಯವೇ ಇಲ್ಲ.  ನಟಿಸಿದ ಎಲ್ಲ ನಾಯಕ ನಾಯಕಿಯರು, ಕಲಾವಿದರು, ಸಹಕಲಾವಿದರು, ನಿರ್ದೇಶನ, ಕಥೆ, ಸಂಭಾಷಣೆ, ಛಾಯಾಗ್ರಹಣ, ಸಂಗೀತ ನಿರ್ದೇಶನ, ಸಂಕಲನ, ಮೇಕಪ್ ಉಡುಗೆತೊಡುಗೆ ಹೀಗೆ ಎಲ್ಲರೂ ಎಲ್ಲ ರೀತಿಯಿಂದಲೂ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಮುಖ್ಯವಾಗಿ ಚಿತ್ರದ ಕಥೆಯೇ ಅಂತಹ ದೊಡ್ಡ ಶಕ್ತಿಯನ್ನು ಹೊಂದಿದೆ. 
 
ಸಿನಿಮಾದ ಬಗ್ಗೆ ಹೇಳುವುದಕ್ಕಿಂತ ಮುಂಚೆ ಮರಾಠಿ ಚಿತ್ರರಂಗದ ಬಗ್ಗೆ ಎರಡು ಮಾತನ್ನು ಹೇಳಲೇಬೇಕು. ಮರಾಠಿ ಚಿತ್ರರಂಗ ಬಾಂಬೆಯಲ್ಲೇ ನೆಲೆಸಿದ್ದರೂ, ಬಾಲಿವುಡ್‌ನ ಅಬ್ಬರದ ನಡುವೆ ಅದು ತನ್ನ ಅಸ್ಥಿತ್ವಕ್ಕಾಗಿ ಇಂದಿಗೂ ತುಂಬಾ ಹೆಣಗಾಡುತ್ತಿದೆ. ಮರಾಠಿ ಚಿತ್ರರಂಗ ಸತ್ತೇ ಹೋಯಿತು ಅಂತ  ಹೆಚ್ಚಿನವರು ಮಾತನಾಡಿದ್ದು ಕೂಡ ಉಂಟು. ಈ ಹಿಂದೆ ಮರಾಠಿ ಚಿತ್ರರಂಗದಲ್ಲಿ ಮೂಡಿ ಬರುತ್ತಿದ್ದ ಹೆಚ್ಚು ಸಿನಿಮಾಗಳು ಈಗ ನಿರ್ಮಾಣವಾಗುತ್ತಿಲ್ಲ. ಸಿನಿಮಾಗಳ ನಿರ್ಮಾಣ ವರ್ಷದಿಂದ ವರ್ಷಕ್ಕೆ ಕುಂಠಿತವಾಗುತ್ತಿದೆ ಅಂತ ಹೇಳುವುದುಂಟು. ಮರಾಠಿ ಸಿನಿಮಾಗಳ ಬೆಳವಣಿಗೆಗೆ ಹಿಂದಿ ಸಿನಿಮಾಗಳೇ ನೇರ ಕಾರಣ ಅನ್ನುವವರಿದ್ದಾರೆ. ಇದರ ನಡುವೆಯೂ ಒಳ್ಳೆಯ ಮರಾಠಿ ಚಿತ್ರಗಳಿಗೆ ಥಿಯೇಟರ್‌ಗಳು, ಜನರ ಪ್ರೋತ್ಸಾಹ ಸಿಗದೇ ನಿರ್ಮಾಪಕರು, ನಿರ್ದೇಶಕರು ನಷ್ಟ ಅನುಭವಿಸಿದ್ದರು. ಪ್ರಸ್ತುತ ಮರಾಠಿ ಚಿತ್ರರಂಗದಲ್ಲಿ ಪ್ರತಿವರ್ಷ ಸುಮಾರು ೪೦-೫೦ರಷ್ಟು ಸಿನಿಮಾಗಳು ನಿರ್ಮಾಣವಾಗುತ್ತಿವೆ. ಕೆಲವೊಮ್ಮೆ ಇವುಗಳ ಸಂಖ್ಯೆ ಕಡಿಮೆಯಾದದ್ದು ಕೂಡ ಉಂಟು. ಇಂತಹ ಹತ್ತು ಹಲವು ಸವಾಲುಗಳ ನಡುವೆಯೂ ರಾಷ್ಟ್ರಮಟ್ಟದ
ಲ್ಲಿ ಗುರುತಿಸಿಕೊಳ್ಳುವಂತಹ ಅದ್ಭುತ ಸಿನಿಮಾಗಳು ನಿರ್ಮಾಣವಾಗುವುದುಂಟು. ಮರಾಠಿ ಸಿನಿಮಾಗಳು ಆಸ್ಕರ್‌ಗೆ ನಾಮಿನೇಟ್ ಕೂಡ ಆಗಿವೆ. ಈ ವರ್ಷ ಕೂಡ ಹೀಗೆ ಮರಾಠಿ ಚಿತ್ರರಂಗದಲ್ಲಿ ಅರಳಿದ ಅತಿಶ್ರೇಷ್ಟ ಚಿತ್ರಗಳಲ್ಲಿ ಅತುಲ್ ಕುಲಕರ್ಣಿ ಅಭಿನಯದ ‘ನಟರಂಗ್’ ಚಿತ್ರ ಕೂಡ ಒಂದು.
ಮೊದಲೇ ಹೇಳಿದಾಗೆ ಚಿತ್ರದ ಕಥೆಯೆ ಅಷ್ಟು ಚೆನ್ನಾಗಿದೆ. ನಮ್ಮ ಕರ್ನಾಟಕದಂತೆಯೇ, ಮರಾಠಿ ರಂಗಭೂಮಿ ಕೂಡ ಅತ್ಯಂತ ಶ್ರೀಮಂತಿಕೆಯಿಂದ ಕೂಡಿದೆ. ಚಿತ್ರದ ಕಾಲಘಟ್ಟ ಕೂಡ ಸುಮಾರು ೫೦ ವರ್ಷಗಳ ಹಿಂದೆಯೇ ತೆರೆದುಕೊಳ್ಳುತ್ತೆ. ಚಿತ್ರದ ಆರಂಭದಲ್ಲಿ ಅಸಂಖ್ಯ ಜನರ ಚಪ್ಪಾಳೆ, ಕೂಗಾಟದ ನಡುವೆ ದೊಡ್ಡ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿಯಿಂದ ಪ್ರಾರಂಭವಾಗುವ ಸನ್ನಿವೇಶ, ಇಷ್ಟು ದೊಡ್ಡ ಗೌರವವನ್ನು ಪಡೆದಂತಹ ವ್ಯಕ್ತಿ ಯಾರು, ಆತನಿಗೆ ಯಾಕೆ ಈ ಪ್ರಶಸ್ತಿ ನೀಡುತ್ತಿದ್ದಾರೆ ಅನ್ನುವ ಕುತೂಹಲದಿಂದ ಕಥೆ ಪ್ರಾರಂಭವಾಗುತ್ತದೆ. ಹಳ್ಳಿಯ ಕೂಲಿ ಕೆಲಸದವನಾಗಿದ್ದ ಗುಣನಿಗೆ ದಿನದಲ್ಲಿ ಮೂರೂತ್ತೋ ಹೊಲಗದ್ದೆಗಳಿಗೆ ನೀರನ್ನು ಹೊತ್ತು ಹಾಕುವುದೇ ಕೆಲಸ. ಆಗೆಲ್ಲಾ ಹಳ್ಳಿಗಳಲ್ಲಿ ಮೋಟಾರ್‌ಗಳು ಇರದೇ ಇರುವುದರಿಂದ ಕೂಲಿಗಳೆ ನೀರು ಹೊತ್ತು ಗದ್ದೆಗಳಿಗೆ ಹಾಕುತ್ತಿದ್ದರು. ನಾಯಕ ಗುಣ ನೋಡಲು ಪೈಲ್ವಾನನ ರೀತಿ ಇರುತ್ತಾನೆ. ದಷ್ಟಪುಷ್ಟವಾಗಿ ಬೆಳೆದಿರುತ್ತಾನೆ. ಇಡೀ ಹಳ್ಳಿಯಲ್ಲಿ ಅವನ ರೀತಿ ಯಾರು ಇರುವುದಿಲ್ಲ. ಅವನ ಅಜಾನುಬಾಹುವಂತಹ ದೇಹ,ನಾಯಕಮೀಸೆಗೆ ಮನಸೋಲದವರು ಆ ಹಳ್ಳಿಯಲ್ಲೇ ಇರುವುದಿಲ್ಲ. ಅಂತಹ ಆಳ್ತನ ನಾಯಕನದ್ದು.  ಹೀಗೆ ಕೂಲಿ ಕೆಲಸದಿಂದ ಹೆಂಡತಿ ಮಕ್ಕಳ ಜೊತೆ ಸಂಸಾರ ಮಾಡುತ್ತಿದ್ದ ಗುಣನಿಗೆ ವಿಪರೀತ ನಾಟಕ ಹುಚ್ಚು, ತಾನು ನಾಟಕದಲ್ಲಿ ಅಭಿನಯಿಸಬೇಕು, ರಾಜನ ಪಾತ್ರ, ಮಹಾಭಾರತದ ಅರ್ಜುನನ ಪಾತ್ರ ಮಾಡಬೇಕೆಂಬ ಅದಮ್ಯ ಆಸೆ ಅವನಿಗೆ. ಎಲ್ಲಾದರೂ ನೃತ್ಯ, ನಾಟಕ ಇದೆಯೆಂದರೆ ಸಾಕು, ತನ್ನ ಸ್ನೇಹಿತರೊಡನೆ ಹೋಗಿ ನೋಡಿಕೊಂಡು ಬರುವ ವ್ಯಕ್ತಿ. ಅಷ್ಟೊಂದು ನಾಟಕದ ಹುಚ್ಚು ಅವನಿಗೆ.  
  ಒಮ್ಮೆ ನಾಯಕ ಗುಣ ವಾಸಿಸುತ್ತಿದ್ದ ಹಳ್ಳಿಯ ಹೊಲಗಳಿಗೆ ನೀರು ಹಾಕುವ ಮೋಟಾರುಗಳು ಬಂದ ಮೇಲೆ, ಕೂಲಿ ಮಾಡುವ ಗುಣನಿಗೆ ಕೆಲಸವಿಲ್ಲದಂತಾಗುತ್ತದೆ. ಎಲ್ಲಿಯೂ ಕೂಲಿ ಕೆಲಸ ಸಿಗುವುದಿಲ್ಲ. ಆಗ ಆತನ ಜೊತೆ ಕೂಲಿ ಕೆಲಸ ಮಾಡುತ್ತಿದ್ದವರೆಲ್ಲಾ ನಾಟಕದಲ್ಲಿ ಆಸಕ್ತಿ ಇದ್ದವರೇ, ತಾವೇ ಯಾಕೆ ಒಂದು ನಾಟಕ ಕಂಪನಿ ಪ್ರಾರಂಭ ಮಾಡಬಾರದು ಅಂತಂದುಕೊಂಡು ನಾಟಕ ಕಂಪನಿ ಶುರುಮಾಡುತ್ತಾರೆ. ಅವರ ತಂಡಕ್ಕೆ ಆಗಲೇ ನಾಟಕದಲ್ಲಿ ಕೆಲಸ ಮಾಡಿದ್ದ ಅದೇ ಊರಿನ ವ್ಯಕ್ತಿ ಸೇರಿಕೊಳ್ಳುತ್ತಾನೆ. ನಾಟಕ ಮಂಡಳಿ ಕಟ್ಟಲು ಹಣವಿರುವುದಿಲ್ಲ. ನಾಟಕದ ಪರಿಕರಗಳಿಗಾಗಿ ಅವರವರ ಮನೆಯಿಂದ ಅದು ಇದು ಕದಿಯಲಿಕ್ಕೆ ಪ್ರಾರಂಭಿಸುತ್ತಾರೆ. ಬರೀ ಗಂಡಸರೇ ಇದ್ದ ಮಂಡಳಿಗೆ ಒಂದು ಹೆಣ್ಣು ಬೇಕೆ ಬೇಕು ಅಂತ ನಿರ್ದೇಶಕ ಹೇಳುತ್ತಾನೆ. ಇಡೀ ಊರು ಅಲಿಯುತ್ತಾರೆ. ಯಾವ ಮನೆಯ ಹೆಣ್ಣುಮಕ್ಕಳು ಅವರ ನಾಟಕದಲ್ಲಿ ಅಭಿನಯಿಸಲು ಬರುವುದಿಲ್ಲ. ದೊಡ್ಡ ನಿರಾಸೆ ಕಾಡತೊಡಗುತ್ತದೆ. ನಾಯಕ ಗುಣನಿಗೆ ಹೇಗಾದರೂ ಮಾಡಿ ನಾಟಕ ಮಂಡಳಿ ಕಟ್ಟಿ ಅಭಿನಯಿಸಬೇಕೆಂಬ ಆಸೆ ಇರುತ್ತದೆ. ಕೊನೆಗೂ ಕೊಲ್ಲಾಪುರದಲ್ಲಿ ನಾಟಕ, ನೃತ್ಯದ ಹಿನ್ನಲೆ ಇರುವ ಹುಡುಗಿ ಸಿಗುತ್ತಾಳೆ. ಆಕೆ ಇವರ ತಂಡದಲ್ಲಿ ಸೇರಲಿಕ್ಕೆ ಒಪ್ಪುತ್ತಾಳೆ. ಸೇರುವುದಕ್ಕೂ ಮುನ್ನ ಆಕೆಯ ತಾಯಿ ಎರಡು ಕಂಡಿಷನ್ ಹಾಕುತ್ತಾಳೆ. ಮೊದಲನೇ ಕಂಡೀಷನ್ ಪ್ರಕಾರ ನಾಟಕದ ಲಾಭದಲ್ಲಿ ಆಕೆಗೂ ಒಂದು ಪಾಲು ನೀಡಬೇಕು, ಎರಡನೇಯದ್ದು ನಾಟಕದಲ್ಲಿ ಯಾರಾದರೂ ಒಬ್ಬರು ಹಿಜಡಾ ಪಾತ್ರಧಾರಿಯಾಗಿ ಅಭಿನಯಿಸಬೇಕು. ಎಲ್ಲರಿಗೂ ಆಶ್ಚರ್‍ಯ. ಮೊದಲನೆಯ ಕರಾರಿಗೆ ಒಪ್ಪಿದರಾದರೂ, ಎರಡನೇ ಕರಾರಿನಂತೆ ಯಾರೋಬ್ಬರು ನಾಟಕದಲ್ಲಿ ಹಿಜಡಾ ಪಾತ್ರ  ಮಾಡಲು ಒಪ್ಪಲಿಲ್ಲ. ಯಾರು ಮಾಡದಿದ್ದರೆ ನಾವು ವಾಪಾಸ್ ಹೋಗುತ್ತೇವೆ ಅಂತ ಆಕೆಯ ತಾಯಿ ಹೇಳುತ್ತಾಳೆ. ನಾಯಕ ಗುಣನಿಗೆ ತನ್ನ ಕನಸು ಸತ್ತು ಹೋಗುತ್ತಿದೆಯೆಲ್ಲ ಅನ್ನುವ ಚಿಂತೆ ಕಾಡಲಾರಂಬಿಸುತ್ತದೆ. ತಂಡದಲ್ಲಿ ಯಾರೋಬ್ಬರೂ ಹಿಜಡಾ ಪಾತ್ರಧಾರಿಯಾಗಿ ಅಭಿನಯಿಸಲಿಕ್ಕೆ ಒಪ್ಪುವುದಿಲ್ಲ. ಕೊನೆಗೆ ನಾಯಕಿಯನ್ನು ಕರೆದುಕೊಂಡು ಬಂದಿದ್ದ ನಿರ್ದೇಶಕ ಮಾತ್ರ ಗುಣನಿಗೆ ನೀನೇ ಆ ಪಾತ್ರ ಮಾಡು ಅಂತ ಬಲವಂತ ಮಾಡುತ್ತಾನೆ. ಇಲ್ಲವಾದರೆ ನಾಟಕ ಕಂಪನಿ ಕಟ್ಟಬೇಕೆಂಬ ಆಸೆ ಬಿಟ್ಟು ಬಿಡು ಅಂತ ಹೇಳುತ್ತಾನೆ. ನಾಯಕ ಗುಣನಿಗೆ ನಾಟಕದಲ್ಲಿ ರಾಜ, ಅರ್ಜುನ ಪಾತ್ರ ಮಾಡಬೇಕೆಂಬ ಆಸೆ ಇರುತ್ತದೆ. ಆದರೆ ಈಗ ಅದು ಕೂಡ ಆಗುವುದಿಲ್ಲವಲ್ಲ ಅನ್ನುವ ನೋವು ಕಾಡಲಾರಂಭಿಸುತ್ತದೆ. ಕೊನೆಗೆ ತನ್ನ ಕನಸಿನ ನಾಟಕ ಕಂಪನಿಯನ್ನು ಉಳಿಸಿಕೊಳ್ಳಬೇಕೆಂಬ ಆಸೆಯಿಂದ ತನ್ನೆಲ್ಲಾ ಆಸೆನೋವುಗಳನ್ನು ಬದಿಗಿಟ್ಟು ಹಿಜಡಾ ಪಾತ್ರಧಾರಿಯಾಗಿ ಅಭಿನಯಿಸಲು ಒಪ್ಪಿಕೊಳ್ಳುತ್ತಾನೆ. ಗುಣ ನೋಡಲಿಕ್ಕೆ ಬಲಭೀಮನಂತೆ ಆಜಾನುಬಾಹು ದೇಹದ ಪೈಲ್ವಾನನಂತೆ ಇರುತ್ತಾನೆ. ಹಿಜಡಾ ಪಾತ್ರಧಾರಿಗೆ ಬೇಕಾಗಿರುವುದು ಕೃಶ ದೇಹ, ಹೆಣ್ಣುಮಕ್ಕಳ ಸೊಂಟದಂತೆ ದೇಹವನ್ನು ಬದಲಾಯಿಸಿಕೊಳ್ಳುವುದು. ನಾಯಕ ಗುಣ ತನ್ನ ಕನಸಿಗಾಗಿ ಹಿಜಡಾ ಆಗಿ ಪರಿವರ್ತಿತನಾಗುತ್ತಾನೆ. ಹೆಣ್ಣುಮಕ್ಕಳ ಹಾವಭಾವ, ನೃತ್ಯ, ಹಿಜಡಾಗಳು ವರ್ತಿಸುವ ರೀತಿ, ಮಾತನಾಡುವ ಶೈಲಿ, ಅವರಂತೆ ದನಿ ಎಲ್ಲವನ್ನೂ ರೂಢಿಸಿಕೊಳ್ಳುತ್ತಾನೆ. ನೋಡಲು ಪೈಲ್ವಾನನಂತೆ ಇದ್ದವನು ಪಾತ್ರದ ಆಳಕ್ಕೆ ಹೋದಂತೆ ಸಂಪೂರ್ಣವಾಗಿ ಬದಲಾಗಿ ಕೃಶ ದೇಹದವನಾಗಿ, ಮೀಸೆ ಬೋಳಿಸಿಕೊಂಡು, ಅತ್ತ ಗಂಡಸು ಅಲ್ಲದ, ಹೆಣ್ಣು ಅಲ್ಲದ ವ್ಯಕ್ತಿಯ ಪಾತ್ರಧಾರಿಯಾಗಿ ಬದಲಾಗುತ್ತಾನೆ. ಪಾತ್ರಕ್ಕಾಗಿ ನಾಯಕಿಯಿಂದ ನೃತ್ಯ ಕಲಿಯುತ್ತಾನೆ. ಚಿತ್ರದ ನಾಯಕಿ ಎಲ್ಲ ರೀತಿಯಿಂದಲೂ ಆತನನ್ನು ತಯಾರಿ ಮಾಡುತ್ತಾಳೆ. ಅವರ ಮೊದಲ ನಾಟಕ ಪ್ರಾರಂಭವಾಗುವುದರೊಳಗೆ ನಾಯಕ ಗುಣ, ನಾಟಕದಲ್ಲಿ ಬರುವ ಪ್ರಮುಖ ಹಿಜಡಾ ಪಾತ್ರಧಾರಿಯಾಗಿ ಬದಲಾಗುತ್ತಾನೆ. ಅವರ ಹಳ್ಳಿಯಲ್ಲೇ ಅಭಿನಯಿಸಿದ ಮೊದಲ ನಾಟಕ ಎಲ್ಲರ ಮನಸೂರೆಗೊಳ್ಳುತ್ತದೆ. ಅಕ್ಕ ಪಕ್ಕದ ಹಳ್ಳಿ, ಊರುಗಳಿಂದ ಇವರ ನಾಟಕ ಕಂಪನಿಗೆ ಆಹ್ವಾನ ಸಿಗತೊಡಗುತ್ತದೆ. 
ಗುಣನ ನಾಟಕ ಕಂಪನಿಗೆ ಒಳ್ಳೆಯ ಹೆಸರು ಬರುವುದರೊಳಗೆ ಆತನ ವೈಯಕ್ತಿಕ ಬದುಕು ಮೂರಾಬಟ್ಟೆಯಾಗಿರುತ್ತದೆ. ತನ್ನ ಗಂಡ ನಾಟಕದಲ್ಲಿ ಹಿಜಡಾ ಪಾತ್ರ ಮಾಡುತ್ತಿದ್ದಾನೆ ಅನ್ನುವ ನೋವು ಆಕೆಯನ್ನು ವಿಪರೀತ ಕಾಡುತ್ತಿರುತ್ತದೆ. ಊರಲ್ಲಿರುವ ಹೆಂಗಸರು, ಗಂಡಸರು, ಮಕ್ಕಳು ಆಕೆಯನ್ನು ಅವಮಾನ ಮಾಡುತ್ತಿರುತ್ತಾರೆ. ಗುಣನ ತಂದೆಗೂ ಕೂಡ ಮಗ ನಾಟಕದ ಹುಚ್ಚು ಅಂಟಿಸಿಕೊಂಡು ಹಾಳಾಗುತ್ತಿದ್ದಾನೆ ಅಂತ ನೋವನ್ನು ಅನುಭವಿಸುತ್ತಿರುತ್ತಾನೆ. ಅದೇ ಕೊರಗಿನಲ್ಲಿ ಹಾಸಿಗೆ ಹಿಡಿಯುತ್ತಾನೆ. ಆತನ ಮಾವ ಕೂಡ ನಾಟಕ ಬಿಟ್ಟು ಬೇರೆ ಬದುಕು ಮಾಡು ಅಂತ ಕಾಲು ಹಿಡಿಯುತ್ತಾನೆ, ಮನೆಯಲ್ಲಿ ಇಷ್ಟೇಲ್ಲಾ ವಿರೋಧ ಬಂದರೂ, ಗುಣ ಮಾತ್ರ ನಾಟಕದ ಮೇಲಿನ ಹುಚ್ಚಿನಿಂದ ಯಾವುದಕ್ಕೂ ಒಪ್ಪುವುದಿಲ್ಲ. ಇದರ ಪ್ರತಿಫಲವಾಗಿ ಕಟ್ಟಿಕೊಂಡ ಹೆಂಡತಿ ಆತನ ಮುಖಕ್ಕೆ ಕಟ್ಟಿದ ತಾಳಿ ಎಸೆದು ಹೊರಗೆ ಹಾಕುತ್ತಾಳೆ.  ಹುಟ್ಟಿಸಿದ ಮಗ ಕೂಡ ಅಪ್ಪನ ಮುಖಕ್ಕೆ ಉಗುಳಿ, ನೀನು ನನ್ನ ಅಪ್ಪನೇ ಅಲ್ಲ ಅಂತ ಹೇಳುತ್ತಾನೆ. ಮಗ ನಾಟಕ ಸೇರಿ ಹಾಳಾದನಲ್ಲ ಅನ್ನುವ ಕೊರಗಿನಲ್ಲೇ ತಂದೆ ಕೂಡ ತೀರಿಕೊಳ್ಳುತ್ತಾನೆ.  ತಂದೆ ತೀರಿಕೊಂಡ ಸಮಯದಲ್ಲಿಯೂ ಅಪ್ಪನ ಅಂತ್ಯಕ್ರಿಯೆಗೆ ಹೋಗದೇ ಇರೋ ಪರಿಸ್ಥಿತಿಯಲ್ಲಿ ನಾಯಕ ಸಿಕ್ಕಿಹಾಕಿಕೊಳ್ಳುತ್ತಾನೆ.  ಹೀಗೆ ನಾಟಕದ ಹುಚ್ಚಿನಿಂದಾಗಿ ವೈಯಕ್ತಿಕ ಬದುಕು ಹಾಳಾಗಿ ಹೋಗುತ್ತದೆ. ಒಳಗೊಳಗೆ ದೊಡ್ಡ ನೋವನ್ನು ಅನುಭವಿಸತೊಡಗುತ್ತಾನೆ. 
ಒಳಗೊಳಗೆ ತಾನೊಬ್ಬ ಗಂಡಸು ಅನ್ನುವ ಭಾವದೊಂದಿಗೆ ಆತ ಇದ್ದರೂ, ಕೆಲವು ಸಂದರ್ಭಗಳಲ್ಲಿ ಆತನ ಹಿಜಡಾಗಳಂತಯೇ ವರ್ತಿಸಬೇಕಾದ ಪರಿಸ್ಥಿತಿ ಆತನಿಗೆ ಒದಗುತ್ತದೆ. ಈತನ ನಾಟಕ ಕಂಪನಿಯ ಪ್ರದರ್ಶನದ ವಿಚಾರದಲ್ಲಿ ಎರಡು ರಾಜಕೀಯ ನಾಯಕರುಗಳ ನಡುವೆ ಗಲಾಟೆ ಆಗುತ್ತದೆ. ತನಗೆ ಗುಣ ಅವಮಾನ ಮಾಡಿದ ಅನ್ನುವ ಸೇಡಿನಲ್ಲಿ ಇನ್ನೊಬ್ಬ ರಾಜಕೀಯ ವ್ಯಕ್ತಿ ಈತನ ನಾಟಕ ಕಂಪನಿಗೆ ಬೆಂಕಿ ಹಚ್ಚುತ್ತಾನೆ. ಆತನ ಕಂಪನಿ ಸಂಪೂರ್ಣವಾಗಿ ಭಸ್ಮವಾಗುತ್ತದೆ. ಅದೇ ನೋವಿನಲ್ಲಿರುವಾಗಲೇ ಆತನ ಮೇಲೆ ರಾಜಕೀಯ ವ್ಯಕ್ತಿ ಮತ್ತು ಆತನ ಬೆಂಬಲಿಗರು ಬಲಾತ್ಕಾರ ಮಾಡುತ್ತಾರೆ.  ಈತನ ಮೇಲೆ ಮಾನಭಂಗ ಮಾಡಿದ ಸುದ್ದಿ ಎಲ್ಲ ಪತ್ರಿಕೆಗಳಲ್ಲಿ ಸುದ್ದಿಯಾಗುತ್ತದೆ. ಆಗಲೇ ಈತನ ಹೆಂಡತಿ, ಮಗ ಇವನಿಂದ ದೂರವಾಗುತ್ತಾರೆ. ಒಂದು ಹಂತದಲ್ಲಿ ಎಲ್ಲವನ್ನೂ ಕಳೆದುಕೊಂಡು ಒಂಟಿಯಾಗುತ್ತಾನೆ. ಕಂಪನಿಯಲ್ಲಿದ್ದ ಆತನ ಜೊತೆಗಾರರೆಲ್ಲಾ ದೂರವಾಗುತ್ತಾರೆ. ಬನ್ನಿ ಮತ್ತೊಮ್ಮೆ ನಾಟಕ ಕಂಪನಿ ಮಾಡೋಣ ಅಂತ ಹೇಳುತ್ತಾನೆ ಯಾರು ಆತನ ಹಿಂದೆ ಬರುವುದಿಲ್ಲ. ಇಡೀ ಪ್ರಪಂಚವೇ ತನ್ನ ವಿರುದ್ಧವಾಗಿದೆ ಅಂತಂದುಕೊಳ್ಳುತ್ತಾನೆ. ಅಂತಹ ಕೊನೆ ಕ್ಷಣದಲ್ಲಿ ಆತನ ಕೈಹಿಡಿಯುವಳೊಬ್ಬಳೇ ಕತೆಯ ನಾಯಕಿ ನೈನಾ. ಗುಣನಿಗೆ ಗುರುವಾಗಿ ನೃತ್ಯ, ಅಭಿನಯವನ್ನು ಕಲಿಸಿಕೊಟ್ಟಿದ್ದ ಆಕೆಯನ್ನು ಆಂತರಂಗಿಕವಾಗಿ ಗುಣ ತುಂಬಾ ಪ್ರೀತಿಸುತ್ತಿದ್ದ. ಆಕೆಯೂ ಕೂಡ ಈತನ ಮೇಲೆ ಅಷ್ಟೇ ಪ್ರೀತಿಯನ್ನು ಇಟ್ಟುಕೊಂಡಿರುತ್ತಾಳೆ. ಅವರಿಬ್ಬರ ನಡುವೆ ದೇಹಸಂಬಂಧ ಕೂಡ ಬೆಳೆದಿರುತ್ತದೆ. ನನ್ನನ್ನು ಮದುವೆಯಾಗು ಅಂತ ಕೇಳಿರುತ್ತಾಳೆ. ನಾಟಕದಲ್ಲಿ ಹಿಜಡಾ ಪಾತ್ರ ಮಾಡುವ ನಿನ್ನನ್ನು ಮದುವೆಯಾಗಿ ಇಡೀ ಸಮಾಜವನ್ನು ನಾನು ಎದುರಿಸಲಾರೆ ಅಂತ ಹೇಳುತ್ತಾನೆ. ತನ್ನ ಇಷ್ಟೆಲ್ಲಾ ನೋವುಗಳಿಗೆ ತನಗಿರುವ ನಾಟಕದ ಹುಚ್ಚು ಮತ್ತು ಮಾಡುತ್ತಿದ್ದ ಹಿಜಡಾ ಪಾತ್ರವೇ ಕಾರಣ ಅನ್ನುವುದು ಆತನಿಗೆ ಮನವರಿಕೆಯಾಗಿರುತ್ತದೆ. ಆದರೂ ನಿಸ್ಸಾಹಯಕನಂತೆ ಬದುಕುವ ಪರಿಸ್ಥಿತಿಯಲ್ಲಿ ಇರುತ್ತಾನೆ.  
ಕಥೆಯ ಕೊನೆಯಲ್ಲಿ ನಾಯಕಿ ನೈನಾಳೇ ಆತನ ಕನಸುಗಳಿಗೆ ಹೆಗಲು ಕೊಡುತ್ತಾಳೆ. ಇವರಿಬ್ಬರೇ ಸೇರಿ ಎರಡೇ ಪಾತ್ರಗಳನ್ನು ಇಟ್ಟುಕೊಂಡು ನಾಟಕಗಳನ್ನು, ನೃತ್ಯಗಳನ್ನು ಮಾಡುತ್ತಾ ದೊಡ್ಡ ಹೆಸರು ಮಾಡತೊಡಗುತ್ತಾರೆ. ನೋಡ ನೋಡುತ್ತಿದ್ದಂತಯೇ ಗುಣನ ಹೆಸರು ನಾಟಕ, ನೃತ್ಯರಂಗದಲ್ಲಿ ದೊಡ್ಡ ಹೆಸರು ಆಗುತ್ತದೆ. ಅನೇಕಾನೇಕ ಪ್ರತಿಷ್ಟಿತ ಪ್ರಶಸ್ತಿಗಳು ಆತನನ್ನು ಅರಸಿ ಬರುತ್ತವೆ. ನೈನಾ ಮತ್ತು ಗುಣ ಇವರಿಬ್ಬರೂ ಸೇರಿ ಸಾವಿರಾರು ಪ್ರದರ್ಶನಗಳನ್ನು ಮಾಡುತ್ತಾರೆ. ಅಲ್ಲಿಯರೆಗೂ ಕೇವಲ ಹಿಜಡಾ ಪಾತ್ರವನ್ನು ಮಾಡುತ್ತಿದ್ದ ಗುಣ, ತನಗಿರುವ ಇಮೇಜನ್ನು ಬದಲಿಸಿಕೊಳ್ಳಲು ಎಲ್ಲ ರೀತಿಯ ಪಾತ್ರಗಳನ್ನು, ವೇಷಭೂಷಣಗಳನ್ನು ಹಾಕಿಕೊಳ್ಳತೊಡಗುತ್ತಾನೆ. ಜನರು ಎಲ್ಲ ಪಾತ್ರದಲ್ಲೂ ಆತನನ್ನು ಇಷ್ಟಪಡತೊಡಗುತ್ತಾರೆ. ಯಾವ ಕಲೆಯನ್ನು ನಂಬಿ, ಹೆಂಡತಿ, ಮಕ್ಕಳು ಎಲ್ಲ ರಕ್ತಸಂಬಂಧಗಳಿಂದ ದೂರವಾಗಿದ್ದನೋ, ಅದೇ ಗುಣ ಸಾವಲ್ಕರ್ ಮುಂದೊಂದು ದಿನ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸುತ್ತಾರೆ. ದೊಡ್ಡ ಸಾಧಕನೆಂದು ಬಿರುದಾಂಕಿತರಾಗುತ್ತಾನೆ.
ಇಡೀ ಚಿತ್ರದ ಕೇಂದ್ರಬಿಂದುವೇ ಗುಣನ ಪಾತ್ರದಲ್ಲಿ ಮಿಂಚಿದ ಅತುಲ್ ಕುಲಕರ್ಣಿ. ಇಡೀ ಪಾತ್ರದ ಅಂತರಂಗವನ್ನು ಹೊಕ್ಕು ಅಭಿನಯಿಸಿದ್ದಾರೆ. ಪೈಲ್ವಾನನ ಪಾತ್ರಕ್ಕೆ ಅವರ ದೇಹವನ್ನು ಹೊಂದಿಸಿಕೊಂಡಿದ್ದಕ್ಕೂ, ಹಿಜಡಾ ಪಾತ್ರಕ್ಕೆ ತಮ್ಮ ದೇಹವನ್ನು ಮೌಲ್ಡ್ ಮಾಡಿಕೊಂಡಿದ್ದು ಅವರು ಪಾತ್ರಕ್ಕೆ ಎಷ್ಟು ಬದ್ಧರಾಗಿದ್ದಾರೆ ಅನ್ನುವುದನ್ನು ತೋರಿಸುತ್ತದೆ. ಪೈಲ್ವಾನನಂತೆ ಇರುವಾಗ ಪೈಲ್ವಾನನಂತೆಯೂ, ಹಿಜಡಾ ಆಗಿ ಅಭಿನಯಿಸುವಾಗ ಅವರಂತಯೇ ಕಾಣುವಂತೆ ತಮ್ಮ ದೇಹವನ್ನು ದಂಡಿಸಿಕೊಂಡಿದ್ದಾರೆ. ಅತುಲ್ ಕುಲಕರ್ಣಿ ನಟರಂಗ್ ಚತ್ರದಲ್ಲಿನ ತಮ್ಮ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ. ೨೦೧೦ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಮಹಾರಾಷ್ಟ್ರದಲ್ಲಿ ಸುಮಾರು ೨೦ ಕೋಟಿ ರೂಪಾಯಿಗಳನ್ನು ಸಂಪಾದಿಸಿದೆ. ಚಿತ್ರದ ಸಂಗೀತವು ಕೂಡ ಅತುಲ್ ಕುಲಕರ್ಣಿಯ ಅಭಿನಯದಷ್ಟೇ ಇಷ್ಟವಾಗುತ್ತದೆ. ಸಾಂಪ್ರದಾಯಿಕ ಮರಾಠಿ ನೃತ್ಯಗಳಿಗೆ ಹೊಂದುವ ಹಾಡುಗಳು, ರಂಗಗೀತೆಗಳು, ಹಾಡುಗಳ ಒಂದಕ್ಕೊಂದು ಚೆನ್ನಾಗಿವೆ. ಎಲ್ಲ ಹಾಡುಗಳು ಕೇಳಲು ಇಂಪಾಗಿವೆ. ಹಿನ್ನಲೆ ಸಂಗೀತ ಕೂಡ ಪ್ರತಿ ಸನ್ನಿವೇಶವನ್ನು ಎತ್ತಿ ಹಿಡಿಯುತ್ತದೆ. 
ಒಟ್ಟಾರೆಯಾಗಿ ನಟರಂಗ್ ಸಿನಿಮಾ ವಿಭಿನ್ನ ಅನುಭವವನ್ನು ನೀಡುವಂತಹ ಸಿನಿಮಾ. ಸಾಧ್ಯವಾದರೆ ಈ ಸಿನಿಮಾವನ್ನು ತಪ್ಪದೇ ನೋಡಿ.

Sunday, 20 October 2013

ತಿರುಪತಿಯಲ್ಲಿ ಈಬಾರಿಯ ವೈಭವದ ಬ್ರಹ್ಮೋತ್ಸವ

ಮೊದಲಬಾರಿಗೆ ತಿರುಪತಿಯ ಬ್ರಹ್ಮೋತ್ಸವದಲ್ಲಿ ಪಾಲ್ಗೊಂಡಿದ್ದು ನನ್ನ ಸುದೈವವೆನ್ನಬಹುದು.  ವರ್ಷಕ್ಕೊಮ್ಮೆ ನಡೆಯುವ ತಿರುಪತಿ ತಿಮ್ಮಪ್ಪನ ಬ್ರಹ್ಮೋತ್ಸವ ನೋಡಲೇಂದೇ ದೇಶದ ಮೂಲೆ ಮೂಲೆಯಿಂದ ಭಕ್ತಾದಿಗಳು ಬರುತ್ತಾರೆ. ತಿರುಪತಿ, ತಿರುಮಲದಲ್ಲಿ ನಿಲ್ಲಲೂ ಕೂಡ ಆಗದಷ್ಟು ಜನ ಸೇರುವುದು ಪ್ರತಿವರ್ಷದ ಸಹಜ. ಬಾಲಾಜಿಯ ವೈಭವದ ಬ್ರಹ್ಮೋತ್ಸವವನ್ನು ನೋಡುವುದೇ ಅದ್ಭುತ ಅನುಭವವೆನುತ್ತಾರೆ ನೋಡಿದವರು. ಆ ದಿನ ಬಾಲಾಜಿಯನ್ನು ಚಿನ್ನದ ರಥದಲ್ಲಿ ಎಳೆಯುತ್ತಾರೆ. ಇಂತಹ ಅದ್ಭುತ ಕ್ಷಣಕ್ಕೆ ಪ್ರತಿವರ್ಷ ಲಕ್ಷ ಲಕ್ಷ ಜನ ಸಾಕ್ಷಿಯಾಗುತ್ತಾರೆ.
ಬ್ರಹ್ಮೋತ್ಸವದ ದಿವಸ ತಿರುಪತಿ ಹಾಗೂ ತಿರುಮಲ ಬೆಟ್ಟವು ಕಣ್ಣುಕೊರೈಸುವ  ದೀಪಾಲಂಕಾರಗಳಿಂದ ಕಂಗೋಳಿಸುತ್ತಿರುತ್ತದೆ. ಹೂವು ಹಣ್ಣುಗಳ ವೈಭೋಗದ ಸರಮಾಲೆ ಎಲ್ಲೆಡೆ ಆವರಿಸಿರುತ್ತದೆ. ತಿರುಮಲ ಬೆಟ್ಟವು ಭೂಲೋಕದ ವೈಕುಂಠವೆಂಬಂತೆ ಭಾಸವಾಗಿರುತ್ತದೆ.  ಆ ದಿನ ಅಸಂಖ್ಯ ಭಕ್ರರು ತಿಮ್ಮಪ್ಪನನ್ನು ನೋಡಲು ಬಂದಿರುವುದರಿಂದ ಎಲ್ಲರಿಗೂ  ಉಳಿಯಲಿಕ್ಕೆ ವ್ಯವಸ್ಥೆ, ಉಚಿತವಾದ ಊಟದ ವ್ಯವಸ್ಥೆ ಮಾಡಿರುತ್ತಾರೆ. ತಿರುಪತಿ ದೇವಸ್ಥಾನವು ಬ್ರಹ್ಮೋತ್ಸವವನ್ನು ಪ್ರತಿವರ್ಷ ಅಷ್ಟೊಂದು ವೈಭೋಗದಿಂದ ಪ್ರತಿವರ್ಷ ಮಾಡುತ್ತಾ ಬಂದಿದೆ.
ಈ ಬಾರಿಯೂ ತಿರುಪತಿ ಮತ್ತು ತಿರುಮಲದಲ್ಲಿ ಅಂತಹ ಸಮೃದ್ಧದ ದೀಪಾಲಂಕಾರ ಎಲ್ಲೆಡೆ ಆಕರ್ಷಿತವಾಗಿತ್ತು. ಎಲ್ಲೆಲ್ಲಿ ನೋಡಿದರೂ ಅಲಂಕಾರದ ಸಿರಿಸಿಂಗಾರವೇ ತುಂಬಿ ತುಳುಕುತ್ತಿತ್ತು. ಅಲಂಕರಿಸಿದ ಇಡೀ ತಿರುಮಲ ಬೆಟ್ಟವನ್ನು ನೋಡಲು ಎರಡು ಕಣ್ಣುಗಳು ಸಾಲುವುದಿಲ್ಲ. ಅಂತಹ ಸುಂದರತೆಯಿಂದ ತಿರುಪತಿ ದೇವಸ್ಥಾನ ಅಂದು ಕಾಣುತ್ತಿತ್ತು.  ಮ್ಯೂಸಿಯಂ, ಪುಷ್ಟಮೇಳ, ಪುಸ್ತಕ ಮೇಳ ಇನ್ನು ಹಲವಾರು ಎಕ್ಸಿಬೀಷನ್ಗಳನ್ನು ಹಮ್ಮಿಕೊಳ್ಳಲಾಗಿತ್ತು. ರಾತ್ರಿಯಾದರಂತೂ ತಿರುಪತಿ ಬೆಟ್ಟವು ಭೂಲೋಕದ ವೈಕುಂಠವೇ ಅನ್ನುವಂತೆ ಭಾಸವಾಗುತ್ತಿತ್ತು. ಬ್ರಹ್ಮೋತ್ಸವನ್ನು ನಾನು ಮೊದಲ ಬಾರಿ ನೋಡಿದ್ದರಂದ ನನಗಿದು ಸೋಜಿಗವೆನಿಸಿತ್ತು.
ಆದರೆ ಈ ವರ್ಷದ ಬ್ರಹ್ಮೋತ್ಸವಕ್ಕೆ ತೆಲಂಗಾಣದ ಬಿಸಿ ಏರಿತ್ತು. ತಿರುಪತಿಗೆ ಹೋಗುವ ಎಲ್ಲ ಬಸ್ಸುಗಳು, ವಾಹನಗಳನ್ನು ಪ್ರತಿಭಟನೆಕಾರರು ತಡೆಯುತ್ತಿದ್ದರಿಂದ ಈ ವರ್ಷದ ಬ್ರಹ್ಮೋತ್ಸವವನ್ನು ಅಸಂಖ್ಯ ಭಕ್ತರು ಮಿಸ್ ಮಾಡಿಕೊಂಡರು. ತಿರುಮಲದಲ್ಲಿ ಬ್ರಹ್ಮೋತ್ಸವ ನೋಡಲು ಜನರೇ ಇರಲಿಲ್ಲ. ಭಕ್ತರಿಗಾಗಿ ಊಟ,ವಸತಿ, ಅನ್ನದಾನದಂತಹ ಅನೇಕ ಕಾರ್ಯಕ್ರಮಗಳು ಬೆಟ್ಟದಲ್ಲಿ ಇದ್ದರೂ, ಜನರು ಮಾತ್ರ ಕಡಿಮೆ ಸಂಖ್ಯೆಯಲ್ಲಿ ಇದ್ದರು.  ಕೆಲವು ಸೆಕೆಂಡುಗಳ ಕಾಲ ತಿಮ್ಮಪ್ಪನನ್ನು ನೋಡುವ ದಿನಗಟ್ಟಲೆ, ಕೆಲವೊಮ್ಮೆ ವಾರಗಟ್ಟಲೇ ಕಾಯುವ ಜನರು ಅಂದು 2-3 ತಾಸಿನೊಳಗೆ ದೇವರ ದರ್ಶನ ಮಾಡಿಕೊಂಡು ಬರುತ್ತಿದ್ದರು. ಈ ವರ್ಷ  ಬಾಲಾಜಿ ದೇಗುಲದ ಹುಂಡಿಗೆ ಅಪಾರ ನಷ್ಟವಾಗದೆ ಅಂತ ಹೇಳುತ್ತಿದ್ದರು. ತೆಲಂಗಾಣದ ಹೋರಾಟದ ನಡುವೆಯೇ ಆ ದಿನ ಉಗ್ರರು ಬ್ರಹ್ಮೋತ್ಸವಕ್ಕೆ ತಿರುಪತಿ ಬೆಟ್ಟಕ್ಕೆ ಬರುವ ಭಕ್ತರನ್ನು ಟಾರ್ಗೆಟ್ ಮಾಡಿಕೊಂಡು ತಿರುಪತಿ ಬೆಟ್ಟ ಏರಲು ಸಜ್ಜಾಗಿ ಬಂದಿದ್ದರು. ಶಸ್ತ್ರ, ಮದ್ದುಗುಂಡುಗಳಿಂದ ಬಂದಿದ್ದ ಉಗ್ರಗಾಮಿಗಳನ್ನು ಪೋಲಿಸರು ಅರೆಸ್ಟ್ ಮಾಡುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದರು. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ತಿರುಪತಿ ಬೆಟ್ಟದ ಮೇಲೆ ಕಳೆದ ಎರಡು ದಿನಗಳು ಮಾತ್ರ ಅವಿಸ್ಮರಣೀಯ.
ಬ್ರಹ್ಮೋತ್ಸವದಂದು ತಿರುಮಲ ಬೆಟ್ಟದ ಮೇಲೆ ಅಲಂಕಾರಗೊಂಡ ದೇವರ ಅಂಗಣ ಕ್ಯಾಮೆರಾದಲ್ಲಿ ಸೆರೆಸಿಕ್ಕಾಗ



Sunday, 8 September 2013

ಗಣೇಶ ಚತುರ್ಥಿ ಹಬ್ಬದ ನೆನಪಿನ ಜೊತೆ ಅಂತ್ಯಗೊಂಡ ಮನೆತನದ ಕಲೆ…!


ಪ್ರತಿವರ್ಷದ ಗಣೇಶನ ಹಬ್ಬ ಎಲ್ಲರಿಗೂ ಒಂದು ಸಡಗರ. ಚಿಕ್ಕದು, ದೊಡ್ಡದು ಅನ್ನದೇ ತಮ್ಮ ಆಸೆಗನುಸಾರವಾಗಿ ಗಣೇಶನ ಮೂರುತಿಗಳನ್ನು ಮಾರುಕಟ್ಟೆಯಿಂದ ತಂದು ಪೂಜೆ ಮಾಡಿ, ಗಣಪತಿಗೆ ಲಡ್ಡು, ಮೋದಕ, ಪಾಯಸಗಳ ಎಡೆ ಇಟ್ಟು, ಸಾಯಂಕಾಲ ಊರ ದೇವಸ್ಥಾನ, ಅಕ್ಕಪಕ್ಕದ ಮನೆ, ಕೇರಿಗಲ್ಲಿಗಳಲ್ಲಿ ಇಟ್ಟ ಗಣಪತಿಗಳನ್ನು ನೋಡಿ ಪಂಚಗಜ್ಜಾಯ ಮಿಂದು, ಚಂದ್ರ ಕಾಣುವ ಎಂಬ ಭಯದೊಂದಿಗೆ, ರಾತ್ರಿಯಾದೊಡೆ ಲಘುಬಗೆಯ ಪಟಾಕಿ ಸಿಡಿಮದ್ದುಗಳ ಆಚರಣೆಯೊಂದಿಗೆ ಮತ್ತೆ ಸಿಹಿಯೂಟದೊಂದಿಗೆ ಅಂತ್ಯವಾಗುವ ಗಣೇಶ ಚತುರ್ಥಿ ಹಬ್ಬ, ಜೋರಾಗಿ ಮಾಡುವವರಿಗೆ ನಿಜಕ್ಕೂ ದೊಡ್ಡ ಹಬ್ಬವೇ ಸರಿ. ಆದರೆ ಎಲ್ಲರೂ ಮಾಡುವ ಗಣೇಶನ ಹಬ್ಬದಂತೆ ನಮ್ಮ ಮನೆಯ ಹಬ್ಬ ವಿಭಿನ್ನವಾಗಿರಲಿಲ್ಲ. ಹೆಚ್ಚಿನವರಿಗೆ ಹಬ್ಬದಂದು ಹೊರಗಡೆಯಿಂದ ಹಣ ಕೊಟ್ಟು ಗಣೇಶನನ್ನು ತಂದು ಪೂಜೆ ಮಾಡುವುದು ದೊಡ್ಡ ಖುಷಿಯ ಸಂಗತಿಯಾಗಿದ್ದರೆ, ನಮ್ಮ ಮನೆತನದವರಿಗೆ, ಮನೆಯಲ್ಲಿ ಗಣಪತಿ ಇಟ್ಟು ಪೂಜೆಮಾಡುವವರಿಗೆ ಮಣ್ಣಿನಲ್ಲಿ ಗಣಪತಿಯನ್ನು ಮಾಡಿಕೊಡುವುದೇ ಪ್ರವೃತ್ತಿಯಾಗಿತ್ತು, ಅದೇ ದೊಡ್ಡ ಹಬ್ಬವಾಗಿತ್ತು ನಮಗೆ. ಬನವಾಸಿಯ ಸುತ್ತಮುತ್ತಲಿನ ಹತ್ತೂರ ಹಳ್ಳಿಯಿಂದ ಹಬ್ಬದ ದಿನ ನಮ್ಮ ಮನೆಗೆ ಗಣಪತಿ ಕೊಳ್ಳಲು ಜನರು ಬರುವುದೇ ದೊಡ್ಡ ಆಚರಣೆಯಾಗಿತ್ತು.

ಹಬ್ಬ ಮಾಡುವವರಿಗೆ ಗಣಪತಿಗಳನ್ನು ಮಣ್ಣಿನಲ್ಲಿ ಮಾಡಿಕೊಡುವುದು ನಮಗೂ ಕೂಡ ದೊಡ್ಡ ಖುಷಿಯ ಸಂಗತಿಯಾಗಿತ್ತು. ಇತ್ತೀಚೆಗೆ ತೀರಿಕೊಂಡ ನಮ್ಮ ಮಾವ ಕುಂಬಾರ ಶಿವಾನಂದಪ್ಪನವರೊಂದಿಗೆ ನಾಲ್ಕೈದು ದಶಕಗಳೊಂದಿಗೆ ಮಾಡುತ್ತಿದ್ದ ಮಣ್ಣಿನಿಂದ ಗಣಪತಿ ಮಾಡುವ ಪ್ರವೃತ್ತಿಯ ಜೊತೆಗೆ ಕಲೆಯೂ ಅವರೊಂದಿಗೆ ಹಾಗೆಯೇ ಕಣ್ಣು ಮುಚ್ಚಿತು. ಇದಕ್ಕೂ ಮೊದಲು ನಾವು ಮಾಡುತ್ತಿದ್ದ ಕುಂಬಾರಿಕೆಯ ವೃತ್ತಿಯೂ ಕೂಡ ನಮ್ಮ ತಾತ ಕುಂಬಾರ ಮಂಜಣ್ಣ, ಅಜ್ಜಿ ಹಿರಿಗಮ್ಮರು ತೀರಿಕೊಂಡ ಮೇಲೆ ಅದು ಕೂಡ ಮಣ್ಣು ಸೇರಿತು. ಈಗ ಮನೆತನದ ಕಲೆಯನ್ನು ಮುಂದುವರೆಸಿಕೊಂಡು ಹೋಗುವ ಮೊಮ್ಮಕ್ಕಳು ಯಾರೂ ಇಲ್ಲ. ಎಲ್ಲರೂ ಅವರವರ ಕೆಲಸಗಳೊಂದಿಗೆ ಬ್ಯುಸಿಯಾಗಿದ್ದಾರೆ. ಇವರಲ್ಲಿ ನಾನು ಕೂಡ ಸೇರುತ್ತೇನೆ. ನಾನು ಮನೆತನದ ಕಲೆಯನ್ನು ಕಲಿತಿದ್ದರೂ ಊರಿಗೆ ಹೋಗಿ ಮಾಡುವ ಪರಿಸ್ಥಿತಿಯಲ್ಲಿ ನಾನು ಇಲ್ಲ. ಎರಡು ತಿಂಗಳುಗಳ ಹಿಂದೆ ತೀರಿಕೊಂಡ ನಮ್ಮ ಮಾವನೊಂದಿಗೆ ವರ್ಷದ ಗಣೇಶ ಹಬ್ಬವೂ, ಹಿಂದಿನ ಅನೇಕ ವರ್ಷಗಳನ್ನು ನೆನಪು ಮಾಡುತ್ತಿತ್ತು.

ಮಣ್ಣಿನಿಂದ ಮಡಿಕೆ, ಕುಡಿಕೆ, ಗಣಪತಿಯ ಮೂರ್ತಿಗಳನ್ನು ಸುಮಾರು 40 ವರ್ಷಗಳಿಂದ ಮಾಡುತ್ತಾ ಬಂದಿರುವ ನಮ್ಮ ಕುಟುಂಬದವರಿಗೆ ಇದೊಂದು ವಿಶಿಷ್ಟ ಕಲೆಯಾಗಿತ್ತು ಅಂತ ಹೇಳಬಹುದು. ನಮ್ಮ ತಾತ ಕುಂಬಾರ ಮಂಜಣ್ಣರು ಪ್ರಾರಂಭಿಸಿದ್ದ ಮಣ್ಣಿನ ಕಲೆಯ ಕೆಲಸವನ್ನು ನಮ್ಮ ಮಾವ ಶಿವಾನಂದಪ್ಪನವರು ಮುಂದುವರೆಸಿಕೊಂಡಿದ್ದರು. ನಮ್ಮ ಮಾವನ ನಂತರ ಮನೆತನದ ಕಲೆಯನ್ನು ನನ್ನ ಹೊರತಾಗಿ ಬೇರೆ ಯಾವ ಮೊಮ್ಮಕ್ಕಳು ಕಲಿಯಲಿಲ್ಲ. ನಾನು ಕೂಡ ನನ್ನ ಮಾವನ ಜೊತೆಗೆ ಸುಮಾರು 16 ವರ್ಷಗಳಿಂದ  ಮಣ್ಣಿನ ಕೆಲಸದಲ್ಲಿ ಭಾಗಿಯಾಗಿ, ಪ್ರತಿವರ್ಷ ಗಣಪತಿಗಳನ್ನು  ಮಾಡಿ ಬರುತ್ತಿದ್ದೆ. ನಾನು ಮಣ್ಣಿನಲ್ಲಿ ಗಣಪತಿಗಳನ್ನು ಮಾಡಲಿಕ್ಕೆ, ಕಲೆ ನನಗೆ ಒಲಿಯಲಿಕ್ಕೆ ನನ್ನ ಮಾವ  ನನಗೆ ನೀಡಿದ ತರಬೇತಿಯೇ ಕಾರಣ. ಇದರ ಜೊತೆಗೆ ನನಗೂ ಚಿತ್ರಕಲೆ, ಮಣ್ಣಿನ ಕೆಲಸದಲ್ಲಿ ವಿಪರೀತ ಆಸಕ್ತಿಯಿದ್ದುದರಿಂದ ನಾನು ಮನೆತನದ ಕಲೆಯನ್ನು ಕಲಿತಿದ್ದೆ. ಬನವಾಸಿಯಲ್ಲಿ ಇರುವವರೆಗೂ ನಾನು ಪ್ರತಿವರ್ಷ ನಾನು ಮಾವನ ಜೊತೆ ಗಣಪತಿ ಮಾಡುವ ಕೆಲಸದಲ್ಲಿ ಭಾಗಿಯಾಗಿರುತ್ತಿದ್ದೆ ನಂತರ ನನ್ನ ವಿದ್ಯಾಭ್ಯಾಸ, ಉದ್ಯೋಗ ಅಂತ ಊರು ಬಿಟ್ಟ ಮೇಲೆ ಬನವಾಸಿಯಿಂದ ದೂರ ಇದ್ದರೂ, ಪ್ರತಿವರ್ಷ ಗಣೇಶನನ್ನು ಮಾಡಲೆಂತಲೇ ಊರಿಗೆ ಹೋಗಿ ಮಣ್ಣಿನಿಂದ ಕೆಲವು ಮೂರ್ತಿಗಳನ್ನು ಮಾಡಿ ಬರುತ್ತಿದ್ದೆ. ಮಣ್ಣಿನ ಮೂರ್ತಿಗಳಿಗೆ ಬಣ್ಣ ಹಚ್ಚುವಾಗಲೂ ನಾನು ಇರುತ್ತಿದ್ದೆ. ನನಗೆ ಬುದ್ದಿ ಬಂದಾಗಿನಿಂದಲೂ ಕಳೆದ ವರ್ಷದವರೆಗೂ ನಾನು ಮಣ್ಣಿನಿಂದ ಗಣಪತಿಯನ್ನು ಮಾಡುವುದನ್ನು ಬಿಟ್ಟಿರಲಿಲ್ಲ. ಕಳೆದ ಎರಡು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಮ್ಮ ಮಾವನಿಗೆ ಮೊದಲಿನಂತೆ ಕುಳಿತು ಮಣ್ಣಿನಿಂದ ಗಣಪತಿಗಳನ್ನು ಮಾಡಲು ಆಗುತ್ತಿರಲಿಲ್ಲ. ಕಳೆದ ವರ್ಷವೇ ಗಣಪತಿ ಮಾಡುವುದನ್ನು ನಿಲ್ಲಿಸಿಬಿಡೋಣ ಅಂತ ಹೇಳುತ್ತಲೇ ಇದ್ದ ಅವರಿಗೆ ನಾವೇ ಬಲವಂತವಾಗಿ ಕೊನೆ ವರ್ಷದವರೆಗೂ ಮಾಡುವಂತೆ ಮಾಡಿದ್ದೇವು. ವರ್ಷ ಸಾಧ್ಯವಾದರೆ ಮಾಡೋಣ, ಇಲ್ಲವಾದರೆ ಬಿಟ್ಟುಬಿಡೋಣ ಅಂತ ಹೇಳಿದ್ದ, ಅವರಿಗೆ ಕಳೆದ 6 ತಿಂಗಳಿಂದ ವಿಪರೀತ ಅನಾರೋಗ್ಯ ಕಾಡಿ, ಸಾವಿನೊಂದಿಗೆ ಅಂತ್ಯವಾಗಿತ್ತು. ನಮ್ಮ ಮಾವನ ನಂತರ ವೃತ್ತಿಯನ್ನು ಗಂಭೀರವಾಗಿ ಯಾರು ತೆಗೆದುಕೊಳ್ಳಲಿಲ್ಲ. ನನಗೆ ಆಸಕ್ತಿ ಇದೆ, ಆಸಕ್ತಿಯ ಶಕ್ತಿ ನಮ್ಮ ಮಾವನೊಂದಿಗೆ ಮಣ್ಣು ಸೇರಿತು

ನಮ್ಮ ಮಾವ, ಅಜ್ಜ ಗಣಪತಿ ಮಾಡುವಾಗ ಬನವಾಸಿಯ ಸುತ್ತಮುತ್ತಲಿನ ಹಳ್ಳಿಗಳಾದ ಕೆರೆಕೊಪ್ಪ, ಭಾಸಿ, ಎಡೂರಬೈಲು, ತಿಗಣಿ, ತೆಕ್ಕೂರು, ಜಡ್ಡಳ್ಳಿ, ನರೂರು, ಮದ್ರಳ್ಳಿ, ಸಂಪಗೋಡು, ಗುಡ್ನಾಪುರ, ಕಪಗೇರಿ ಹೀಗೆ ಇನ್ನು ಹಲವು ಹಳ್ಳಿಗಳಿಂದ ಜನರು ಬಂದು ಗಣಪತಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಪ್ರತಿವರ್ಷ ಗಣಪತಿ ಮಾಡುವಾಗ ಅವರೆಲ್ಲಾ ಬಂದು ಗಂಟೆಗಟ್ಟಲೇ ಹರಟುತ್ತಿದ್ದರು. ರೀತಿಯ ಲೋಕಾಭಿರೂಢಿ ಮಾತುಕತೆಯ ನಡುವೆ ಸಾಗುತ್ತಿದ್ದ ನಮ್ಮ ಕೆಲಸವನ್ನು ಈಗ ನೆನಪಿಸಿಕೊಂಡರೆ ತುಂಬಾ ಖುಷಿಯಾಗುತ್ತದೆಹೀಗೆ ಸುತ್ತಮುತ್ತಲೂ ಹಳ್ಳಿಗಳಿಂದ ಬರುತ್ತಿದ್ದವರು ನಮ್ಮ ಅಜ್ಜನ ಕಾಲದಿಂದಲೂ ಖಾಯಂ ಆಗಿ ನಮ್ಮ ಮನೆಯಿಂದ ಗಣಪತಿಗಳನ್ನು ಮಾಡಿಸಿಕೊಂಡು ಹೋಗುತ್ತಿದ್ದವರು.



ಮಣ್ಣಿನಿಂದ ಗಣಪತಿ ಮಾಡುವ ಕೆಲಸ ತಪಸ್ಸಿನಂತೆ

ಬನವಾಸಿಯಲ್ಲಿ ಮಣ್ಣಿನಿಂದ ಗಣಪತಿ ಮೂರ್ತಿಗಳನ್ನು ಮಾಡುವ ಒಳ್ಳೆಯ ಕಲಾವಿದರ ಕುಟುಂಬದವರಿದ್ದಾರೆ. ಮುಖ್ಯವಾಗಿ ಗುಡಿಗಾರರ ಕುಟುಂಬದವರನ್ನು ಮೊದಲನೆಯಾಗಿ ಹೆಸರಿಸಬಹುದು. ಇಂದು ಬಹಳಷ್ಟು ಕಲಾವಿದರು ಗಣಪತಿಗಳನ್ನು ಮಾಡುತ್ತಿದ್ದರೂ, ಅವರೆಲ್ಲಾ ಗುಡಿಗಾರರ ಹತ್ತಿರವೇ ಪಳಗಿದರು. ನಮ್ಮ ಮಾವ ಕೂಡ 40 ವರ್ಷಗಳ ಹಿಂದೆ ಗುಡಿಗಾರರಲ್ಲೇ ಪಳಗಿ, ನಂತರ ಸ್ವಂತವಾಗಿ ತಾವೇ ಗಣಪತಿ ಮಾಡುತ್ತಾ ಬಂದವರು. ನನ್ನ ಪ್ರಕಾರ ಈಗಲೂ ಗುಡಿಗಾರರೇ ಬನವಾಸಿಯಲ್ಲಿ ಹೆಚ್ಚು ಗಣಪತಿಗಳನ್ನು  ಮಾಡುತ್ತಿರಬಹುದುಹಳೆಯ ಕುಟುಂಬಗಳ ಹೊರತಾಗಿ ಮೈಸೂರಿನಲ್ಲಿ ಫೈನ್ ಆರ್ಟ್ಸ್ ಮತ್ತು ಆರ್ಟ್ ಕ್ರಾಫ್ಟ್ ತರಬೇತಿಯನ್ನು ಪಡೆದುಕೊಂಡು ಬಂದಿರುವ ಶ್ರೀಪಾದ ಪುರೋಹಿತ್ ಚಿಕ್ಕ ವಯಸ್ಸಿನಲ್ಲೇ ಬನವಾಸಿಯ ಸುತ್ತಮುತ್ತಲೂ ವಿಶಿಷ್ಟ ರೀತಿಯಲ್ಲಿ ಗಣಪತಿಗಳನ್ನು ಮಾಡುವ ಮೂಲಕ ತುಂಬಾ ಹೆಸರುವಾಸಿಯಾದವರು. ಸಾಂಪ್ರದಾಯಿಕ ಶೈಲಿಯಲ್ಲಿ ಕಾಣುವಂತೆಮಣ್ಣಿನಿಂದ ಗಣಪತಿ ಮೂರ್ತಿಗಳನ್ನು ಮಾಡುತ್ತಿದ್ದವರ ನಡುವೆ, ಶ್ರೀಪಾದ ಪುರೋಹಿತ್, ಆಧುನಿಕ ಶೈಲಿಯಲ್ಲಿ ಸುಂದರವಾದ ಪುಟ್ಟ ಪುಟ್ಟ ಗಣೇಶಗಳಿಂದ ಹಿಡಿದು ಹತ್ತು ಅಡಿ ಗಣೇಶನವರೆಗೂ ಮಾಡಿ ಎಲ್ಲರಿಂದ ಭೇಷ್ ಅನಿಸಿಕೊಂಡವರು. ಇಂದಿಗೂ ಶ್ರೀಪಾದ ಪುರೋಹಿತ್ರ ಪುಟ್ಟ ಗಣಪತಿಗಳಿಗೆ ಅಪಾರ ಬೇಡಿಕೆ ಇದೆ. ಹೊಸ ತಲೆಮಾರಿನ ಕಲಾವಿದರಲ್ಲಿ ಬನವಾಸಿಯ ಶ್ರೀಪಾದ ಪುರೋಹಿತ್ ಮತ್ತು ಮಂಜು ಗುಡಿಗಾರ್ ಅವರನ್ನು ಗುರುತಿಸಬಹುದು. ಅದರಂತೆ ಸುರೇಶ್ ಬಳೆಗಾರ, ನಾಗರಾಜ ಚಕ್ರಸಾಲಿ ಇನ್ನು ಕೆಲವರು ಮೂರ್ತಿಗಳನ್ನು ಪ್ರತಿವರ್ಷ ಮಾಡುತ್ತಾರೆ. ಮಣ್ಣಿನಿಂದ ಗಣಪತಿಗಳನ್ನು ಮಾಡುವುದು ಅತ್ಯಂತ ದಣಿವಿನ ಕೆಲಸ ಅಂತ ಹೇಳಬಹುದು. ಇದು ಸೂಕ್ಷ್ಮ ಕುಸುರಿ ಕೆಲಸವಾಗಿದ್ದರಿಂದ, ವಿಪರೀತ ತಾಳ್ಮೆ ಬೇಕು. ಒಂದು ಕಡೆ ಕೂತು ಅಲ್ಲಾಡದಂತೆ ಮಾಡಲು ದೈಹಿಕವಾಗಿ ಗಟ್ಟಿಯಾಗಿರಬೇಕು. ಏಕಾಗ್ರತೆ ಇದ್ದರೆ ಮಾತ್ರ ಇಂತಹ ಕೆಲಸ ಸಾಧ್ಯ ಅನ್ನುವುದು ನನ್ನ ಅನುಭವದ ಮಾತು. ಬೆಂಗಳೂರಿನಲ್ಲಿ ಸಿಗುವ ಅಚ್ಚಿನ ಸುಣ್ಣದ ಗಣಪತಿಗಳಂತೆ, ಒಂದೊಂದೆ ಮಣ್ಣಿನ ಗಣಪತಿಗಳನ್ನು ತಿದ್ದಿ ತೀಡಿ ಮಾಡುವುದು ತುಂಬಾ ಕಷ್ಟ. ಗಣಪತಿ ಮಾಡುವ ಮುನ್ನ ಅದಕ್ಕೆ ಬೇಕಾದ ಮಣ್ಣನ್ನು ಹದಮಾಡುವುದು ಕೂಡ ತುಂಬಾ ಶ್ರಮದಾಯಕ, ಅಷ್ಟೇ ಮಣ್ಣನ್ನು ಹದ ಮಾಡುವುದಕ್ಕೂ ಅಪಾರ ಅನುಭವ ಬೇಕಾಗುತ್ತದೆ. ಮಣ್ಣು ನಾದಿದಷ್ಟು ಗಣಪತಿ ಮಾಡುವಾಗ ಫಿನಿಶಿಂಗ್ ತುಂಬಾ ಚೆನ್ನಾಗಿ ಸಿಗುತ್ತದೆ.

ಎರಡು ತಿಂಗಳ ಹಿಂದೆ ತೀರಿಕೊಂಡ ನಮ್ಮ ಮಾವನ ನೆನಪಿನೊಂದಿಗೆ ವರ್ಷದ ಗಣೇಶ ಹಬ್ಬವನ್ನು ಮಾಡದೇ, ಕಳೆದ ವರ್ಷಗಳಲ್ಲಿ ಆಚರಿಸಿದ ಗಣೇಶ ಹಬ್ಬವನ್ನು ನೆನಪುಮಾಡಿಕೊಂಡು ಖುಷಿ ಪಡುವ ಸಣ್ಣಪ್ರಯತ್ನವಷ್ಟೇ .

ಎಲ್ಲರಿಗೂ ಗಣೇಶ ಚತುರ್ಥಿಯ ಶುಭಕಾಮನೆಗಳು. ಎಲ್ಲರಿಗೂ ಶುಭವಾಗಲಿ.

Some Photographs