(ಕೆಲವು ತಿಂಗಳ ಹಿಂದೆ ಕನ್ನಡ ನಾಡಿನ ಪ್ರಸಿದ್ದ ಕವಿಗಳು ಹಾಗೂ ವಿಧಾನ ಪರಿಷತ್ ಸದಸ್ಯರು ಆಗಿರುವ ಡಾ. ದೊಡ್ಡ ರಂಗೇಗೌಡರನ್ನು ಭೇಟಿಮಾಡಲು ಶಾಸಕರ ಭವನಕ್ಕೆ ಹೋಗಿದ್ದೆ. ಅವರ ಜೊತೆ ಮಾತನಾಡುತ್ತಾ ನನ್ನ ಕೈಗೆ ಅವರು `ಕಾಡು..ಕಣಿವೆ… ಕಡಲು’ ಸಂಕಲನವನ್ನು ಕೈಗಿತ್ತು ಇದನ್ನು ವಿಮರ್ಷೆ ಮಾಡಿ ಬರೆಯಿರಿ ಅಂತ ನನಗೆ ನೀಡಿದರು. ದೊಡ್ಡರಂಗೇಗೌಡರಂತಹ
ಹಿರಿಯ ಕವಿಗಳ ಸಾಹಿತ್ಯವನ್ನು ಓದಬಲ್ಲಷ್ಟೇ. ಆದರೆ ವಿಮರ್ಷೆ ಮಾಡಿ ಬರೆಯಬೇಕು ಅಂತ ಹೇಳಿದಾಗ ಆರಂಭದಲ್ಲಿ ಒಪ್ಪಿಕೊಳ್ಳುವುದು
ನನಗೆ ಕಷ್ಟವಾಗಿತ್ತು. ನನ್ನ ಮೇಲೆ ದೊಡ್ಡ ಕಲ್ಲಿನ ಭಾರ ಏರಿ ಕೂತಿತ್ತು. ಕೊನೆಗೆ ಧೈರ್ಯ ಮಾಡಿ ಅವರ 83 ಕವನ ಸಂಕಲನಗಳಲ್ಲೊಂದಾದ `ಕಾಡು..ಕಣಿವೆ… ಕಡಲು’ ಸಂಕಲನವನ್ನು ಓದಿ, ಅವರು ಹೇಳಿದ ಸಮಯದೊಳಗೆ ನನ್ನ ಅಭಿಪ್ರಾಯಗಳನ್ನು
ಬರೆದುಕೊಟ್ಟೆ. ನನ್ನಂತೆ ಕನ್ನಡ ನಾಡಿನ ಅನೇಕ ಹಿರಿಯರು, ಸಾಹಿತಿಗಳು, ಲೇಖಕರು ಅವರ ಕವನ ಸಂಕಲನಗಳ ಕುರಿತು ಅಭಿಪ್ರಾಯಗಳನ್ನು ಬರೆದುಕೊಟ್ಟಿದ್ದಾರೆ. ಇತ್ತೀಚೆಗೆ ಈ ಎಲ್ಲ ವಿಮರ್ಷೆಗಳನ್ನು ಸೇರಿಸಿ ದೊಡ್ಡರಂಗೇಗೌಡರ ಸಮಗ್ರ ಸಾಹಿತ್ಯದ ಕುರಿತಾದ ಪುಸ್ತಕವನ್ನು ಹೊರತಂದಿದ್ದಾರೆ. ಈ ಪುಸ್ತಕದಲ್ಲಿ ನನ್ನ ವಿಮರ್ಷೆಯು ದಾಖಲಾಗಿದೆ. ಡಾ. ದೊಡ್ಡ ರಂಗೇಗೌಡರ `ಕಾಡು..ಕಣಿವೆ… ಕಡಲು’ ಸಂಕಲನದ ನನ್ನ ಮಾತುಗಳು ಈ ರೀತಿಯಾಗಿದೆ)
ಕಾಡು, ಕಣಿವೆ, ಕಡಲಿನಲಿ ತೇಲಿ ತೇಲಿ...
ಕಾವ್ಯ ಸ್ಫುರಣೆ ಒಮ್ಮಿದೊಮ್ಮೆಲೆ ಆಗುವಂತಹುದಲ್ಲ. ಮನಸ್ಸಿನ ಮನೆಯಲ್ಲಿ ಕಣ್ಣಿಗೆ ಕಾಣುವ ಅಭಿಚಿತ್ರಗಳು, ಹೃದಯಕ್ಕೆ ಹಿತ-ಅಹಿತವಾಗುವ ಸಂಗತಿಗಳು ಮನಸ್ಸಿನ ಕದವನ್ನು ತಟ್ಟಿದಾಗ, ಸೇರಿದಾಗ ಕವಿಮನಸ್ಸಿಗೆ ಅನುಕರಣವಾಗುತ್ತದೆ. ಈ ಪ್ರೇರಣೆ ಭಾವನೆಯಾಗಿ, ಭಾವನೆಗಳು ಪದಗಳಾಗಿ, ಪದಗಳು ಕಾವ್ಯಗಳಾಗಿ ಹೊರಹೊಮ್ಮುವುದು. ಕಾವ್ಯಗಳನ್ನು ಬರೆದ ಕವಿಮನಸ್ಸು ತನ್ನ ಮನಸ್ಸಿನಲ್ಲಿನ ತಲ್ಲಣಗಳನ್ನು, ಅಭಿವ್ಯಕ್ತಿತ್ವವನ್ನು ಪದಗಳ ಮೂಲಕ ತೋರ್ಪಡಿಸಲಿಕ್ಕೆ ಪ್ರಯತ್ನ ಪಟ್ಟರೂ, ಅವುಗಳನ್ನು ಓದಿ ಆಸ್ವಾದಿಸುವ ವ್ಯಕ್ತಿ ಕವಿಮನಸ್ಸನ್ನು ಹೊಕ್ಕು ನೋಡಬೇಕಾಗುತ್ತದೆ. ಕವಿಮನಸ್ಸಿನಲ್ಲೇ
ತೇಲಬೇಕಾಗುತ್ತದೆ. ಹೀಗೆ ಹೊಕ್ಕಾಗ ಮಾತ್ರ ನಿಜವಾದ ಕವಿಮನಸ್ಸಿನ ಆಳವನ್ನು ಆಸ್ವಾದಿಸಬಹುದಾಗಿದೆ.
ಈ ನಿಟ್ಟಿನಲ್ಲಿ ನಂಬಿಕೆ ಇಟ್ಟಿರುವ ನಾನು ಡಾ. ದೊಡ್ಡರಂಗೇಗೌಡರ `ಕಾಡು... ಕಣಿವೆ... ಕಡಲು..' ಕವನ ಸಂಕಲನವನ್ನು ಓದಿದಾಗ, ಎಲ್ಲೋ ಒಂದು ಕಡೆ ದೊಡ್ಡರಂಗೇಗೌಡರ ಮನಸ್ಸನ್ನು ಸ್ವಲ್ಪ ಹೊಕ್ಕು ಬಂದ ಹಾಗೆ ಅನ್ನಿಸಿತು. ಪ್ರತಿ ಕವನವನ್ನು ಬರೆದ ಹಿಂದಿನ ಸಂದರ್ಭವೇನಿರಬಹುದು, ಅದಕ್ಕೆ ಪ್ರೇರಣೆಯೇನಿರಬಹುದು.
ಯಾವ ರೀತಿ ಅನುಭವಿಸಿರಬಹುದು.
ಅದಕ್ಕೆ ದೊಡ್ಡರಂಗೇಗೌಡರ ಕವಿಮನಸ್ಸು ಹೇಗೆ ಪ್ರತಿಸ್ಪಂದಿಸಿರಬಹುದು ಎಲ್ಲವನ್ನು ಸೂಕ್ತವಾಗಿ ತುಲನೆ ಮಾಡಿಕೊಂಡು ನೋಡಿದಾಗ ನನಗೆ `ಕಾಡು... ಕಣಿವೆ... ಕಡಲು...' ಕವನ ಸಂಕಲನ ವಿಶಿಷ್ಟ ಅನುಭವವನ್ನು ನೀಡಿತು. ಇದರಲ್ಲಿ ಹೆಚ್ಚಿನ ಕವನಗಳು ಅವರ ಪ್ರವಾಸದ ಅನುಭವ ಹಾಗೂ ಸುತ್ತಲಿನ ಜಿಜ್ಞಾಸೆಗಳ ಬಗ್ಗೆ ಹೆಚ್ಚು ಗಮನಹರಿಸಿದಂತೆ ಕಾಣುತ್ತದೆ.
ಸಂಕಲನ ಶೀರ್ಷಿಕೆಯು `ಕಾಡು... ಕಣಿವೆ... ಕಡಲು...' ಇಡೀ ಸಮಗ್ರ ಕಾವ್ಯವಾಣಿಯ ಮೂಲಕ ಸಂಪೂರ್ಣ ಕಾವ್ಯ ಸ್ವಾದವನ್ನು ಅನುಭವಿಸಿದಂತಾಗುತ್ತದೆ. ಇಲ್ಲಿ ಕಾಡಿನ ಸೌಂದರ್ಯವಿದೆ, ಪ್ರಕೃತಿಯ ಆಲಾಪವಿದೆ. ಕಣಿವೆ, ಬೆಟ್ಟ ಗುಡ್ಡವನ್ನು ಏರಿ, ಇಳಿದು ಅಲ್ಲಿನ ಸ್ವಾದವನ್ನು ಅನುಭವಿಸಿ ಅದನ್ನು ಪದಗಳ ಮೂಲಕ ಇಳಿಸಿದ್ದಾರೆ. ಚಾರಣಕ್ಕೆ ಹೊರಟಾಗ ನಡಿಗೆಯ ಕಷ್ಟದಲ್ಲಿ ಸುತ್ತಲಿನ ಸುಂದರ ಪ್ರಕೃತಿಯನು ನೋಡುತಾ, ಈ ಸವಿಯಲಿ ದೇಹದ ನೋವನು ಮರೆಯುತಾ ಸಾಗುವ ಅವರ ಮನಸ್ಸು, ಸರ್ವ ಸಂಪತ್ತು, ಸೌಂದರ್ಯದ ಚೆಲುವನ್ನು ಹೊತ್ತು ನಿಂತಿರುವ ಪ್ರಕೃತಿಗೆ ನೋಡುಗನ ಎಲ್ಲ ನೋವುಗಳನ್ನು ಮರೆಯುವ ಶಕ್ತಿ ಇದೆ ಅಂತ ನಿರೂಪಿಸಿದ್ದಾರೆ. ಅವರ ಆಫ್ರಿಕಾ ಪ್ರವಾಸದ ಅನುಭವದ ಕವನಗಳನ್ನು ಓದಿದಾಗ, ಆಫ್ರಿಕಾ ದೇಶದಲ್ಲಿನ ದಟ್ಟವಾದ ಕಾಡು, ಕಪ್ಪುಬಣ್ಣದ ಜನರು, ಹೆಮ್ಮರಗಳು, ಬೆಟ್ಟ ಗುಡ್ಡಗಳು, ಗಿರಿ, ಧವಳ ಶಿಲ್ಪಗಳು, ಮೇಘಮಾಲೆಯ ಸಾಲುಗಳ ಚಿತ್ರಣ ನಮ್ಮ ಕಣ್ಣಿಗೆ ಕಟ್ಟುತ್ತದೆ. `ಆಫ್ರಿಕಾದಲ್ಲಿ ಅಪರಾಹ್ನ' ಕವನದ ಸಾಲುಗಳು
ಯಾರು ಚೆಲ್ಲಿದರಿಲ್ಲಿ ಆಕಾಶದಲ್ಲಿ
ಸಮೃದ್ಧ ಮೊಸರ?
ಬೆಳ್ಳಂಬೆಳಗಿನಂತೆ ಹೊಳೆಯುತ್ತಿದ್ದಾನೆ
ಕಣ್ಣುಕ್ಕೋ ನೇಸರ!
ಜಗದೆಲ್ಲ ಮಲ್ಲಿಗೆ ನಗೆ-ಹೀಗೆ
ಕರಗಿ ಧವಳಾಂಬರವಾಯಿತೇ?
ಇಡೀ ಕವನ ಸಂಕಲನದಲ್ಲಿ ನಾನು ಕವನಗಳ ಮನಸ್ಸನ್ನು ಅರ್ಥಮಾಡಿಕೊಂಡಾಗ, ನನಗೆ ಮೊದಲು ಕಂಡಿದ್ದು, ದೊಡ್ಡರಂಗೇಗೌಡರ ಸಾತ್ವಿಕ ಮನೋಭಾವ. ಇಡೀ ಜಗತ್ತನ್ನು ಯಾವಾಗಲೂ ಒಳ್ಳೆಯ ದೃಷ್ಟಿಯಿಂದ ನೋಡುವ ಅವರ ಸೊಬಗು ಮೆಚ್ಚುವಂತಹದ್ದು. ಸಂಕಲನದ ಎಲ್ಲ ಕವನಗಳು ಎಲ್ಲ ರೀತಿಯಿಂದಲೂ ಮಾನವಧರ್ಮದ ಸ್ಫುರಣೆಗೆ ಪ್ರೇರಣೆಯಾಗಿದೆ. ಅನೇಕ ಕವನಗಳು ಅವರ ಪ್ರವಾಸದ ಅನುಭವವನ್ನು ಎತ್ತಿಹಿಡಿಯುತ್ತವೆ. ಮಣ್ಣಿನ ಕಾಳಜಿಯನ್ನು ತೋರ್ಪಡಿಸುತ್ತವೆ. ಆಂತರ್ಯದ ಒಳನೋಟ, ಸೌಂದರ್ಯದ ಅವಗಾಹನೆ, ಕೊರಗು ಬದುಕಿನ ನೂರು ನೋಟಗಳು ಹಾಗೆ ಬಂದುಹೋಗುತ್ತವೆ. ದೊಡ್ಡರಂಗೇಗೌಡರ ಕಣ್ಣಿಗೆ ಸುತ್ತಲಿನ ಪ್ರಕೃತಿ ಯಾವಾಗಲೂ ಸುಂದರವಾಗಿ ಕಾಣುತ್ತಿರಬಹುದು.
ಮುಖ್ಯವಾಗಿ ಅವರು ಬೆಳೆದು ಬಂದ ಹಳ್ಳಿಯ ವಾತಾವರಣ, ಮಣ್ಣು, ಕಂಪು ಇನ್ನು ಅವರ ಮಾತಿನಲ್ಲಿ, ಕವನಗಳಲ್ಲಿ ಅಡಗಿದಂತೆ ಕಾಣುತ್ತದೆ. ಇದಕ್ಕೆ ಅವರ `ಹಳ್ಳಿ ಹೈದ' ಕವನ ಸಂಕಲನವೂ ಸಾಕ್ಷ್ಷಿಯಾಗುತ್ತದೆ. ಹಾಗಾಗಿ ಮೂಲ ಹಳ್ಳಿಯ ದೇಸಿ ವಾತಾವರಣ ಅವರ ಮನಸ್ಸನ್ನು ಹೊಕ್ಕು ನಿಂತಿರುವುದರಿಂದ, ಅವರ ಬರವಣಿಗೆಯಲ್ಲಿ ಹಳ್ಳಿಯ ಸೊಗಡಿನ ಮಾತುಗಳು, ಜನಪದ ನುಡಿಗಳು ಅವರ ಬರವಣಿಗೆಯ ದೊಡ್ಡ ಆಸ್ತಿಗಳಾಗಿ ನಮಗೆ ಕಾಣುತ್ತದೆ. ಸಂಕಲನದ ಆರಂಭದಲ್ಲಿ ದೊಡ್ಡರಂಗೇಗೌಡರು
ತಮ್ಮ ಗುರುಗಳಾದ ಡಾ. ಚಂದ್ರಶೇಖರ್ ಕಂಬಾರರನ್ನು ನೆನಪಿಸಿಕೊಂಡು ಅವರಿಗಾಗಿ ನುಡಿನಮನವನ್ನು ಸಲ್ಲಿಸಿದ್ದಾರೆ.
ನಿಮ್ಮ ಹೇಳತೇನ ಕೇಳ, ನನಗೆ, ನನ್ನಂಥವರಿಗೆ-
ಸಾಹಿತ್ಯ ಸೀಕರಣೆಯ ಸವಿ ಹದುಳ!
ನಿಮ್ಳ, ಉಜ್ವಲ, ಅಲ್ಲಿ ನಿಮ್ಮತನ ನಿಚ್ಚಳ.
ದೊಡ್ಡರಂಗೇಗೌಡರು ತಮ್ಮ ಗುರುಗಳನ್ನು ನೆನಪಿಸಿಕೊಂಡ ಬಗೆಯನ್ನು ನೋಡಿದಾಗ ನನಗೆ, ದೊಡ್ಡರಂಗೇಗೌಡರೇ
ಒಂದು ಹಿಮಾಲಯ ಪರ್ವತ, ಪರ್ವತವೂ ಇನ್ನೊಂದು ದೈತ್ಯ ಪರ್ವತಕ್ಕೆ ಕೈಮುಗಿದು, ದೀವಿಗೆಯ ನೀಡು ಅಂತ ಕೇಳಿದಂತಾಯಿತು.
ಜ್ಞಾನಕ್ಕಿಂತ ಮಿಗಿಲಾದುದು ಈ ಪ್ರಪಂಚದಲ್ಲಿ ಯಾವುದು ಇಲ್ಲ ಅನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಜ್ಞಾನದ ಅಂತರಂಗವನ್ನು ಹೊಂದಿರದೇ ಇದ್ದರೆ ಬದುಕಿನ ಸತ್ಯವನ್ನು ಎಂದಿಗೂ ಕಂಡುಕೊಂಡಂತಾಗುವುದಿಲ್ಲ. ಮಣ್ಣಿನ ಮಗನ ಮಾತುಗಳಲ್ಲಿ ಹೇಳುವ ಸಾಲುಗಳು ಜ್ಞಾನದ ಮಹತ್ವವನ್ನು ಹೇಳುತ್ತವೆ.
`ಭುವಿಯಗಲ ಬಾನಗಲ ಜ್ಞಾನವೇ ಪರಮಾನ್ನ!
ಪರಮಾನ್ನಕೂ ಮಿಗಿಲಯ್ಯ ಜ್ಞಾನದ ವಜ್ರಕಣ!
ಜ್ಞಾನ ಸೂರ್ಯನ ಭಾವ ತೇಜವಿರೇ ಬಂಗಾರ
ಜೀವನ ಬದುಕಿಗೆ ಜ್ಞಾನವೇ ಉನ್ನತೋನ್ನತ-ಮಣ್ಣಿನ ಮಗ'
ಇಡೀ ಸಂಕಲನದಲ್ಲಿ ನನ್ನ ಮನಸ್ಸಿಗೆ ತುಂಬಾ ಹತ್ತಿರವಾದ ವಿಷಯ ಅಮ್ಮನ ಬಗ್ಗೆ ಅವರು ಬರೆದದ್ದು. ಪ್ರತಿಯೊಬ್ಬನಿಗೂ ತಾಯಿ ದೇವರ ಸ್ವರೂಪಿಣಿಯಾಗಿ ಕಾಣುತ್ತಾಳೆ. ಮಕ್ಕಳ ಜೀವನವನ್ನು ಹಸನಾಗಿಸಲು ಆಕೆ ಪಡುವ ಕಷ್ಟ ಹೇಳತೀರದು. ನನ್ನ ಜೀವನ ಹೇಗೋ ಆಯಿತು, ಹೇಗೊ ನಡೆಯುತ್ತೆ, ಆದರೆ ಮಕ್ಕಳ ಜೀವನ ನನ್ನಂತೆ ಆಗಬಾರದು ಅಂತ ಆಕೆ ಕನಸು ಕಾಣುತ್ತಾಳೆ. ಆ ಕನಸಿನ ಸಾಕಾರಕ್ಕೆ ಶ್ರಮಪಡುತ್ತಾಳೆ. ಆದರೆ ಎಷ್ಟು ಮಕ್ಕಳು, ತಾಯಿಯ ಕಷ್ಟದ ಉಸಿರಿನಲ್ಲಿ ಬೆಳೆದು, ಆಕೆಯ ಬೆವರಿನಲಿ ಬೇಯಿಸಿದ ಅನ್ನವನ್ನು ಉಂಡು, ಆಕೆಯ ಸೇವೆಯನ್ನು ನೆನೆಪಿನಲ್ಲಿಟ್ಟುಕೊಳ್ಳುತ್ತಾರೆ? ಮರೆಯವರು ಬಹಳ ಜನ. ಮರೆಯದವರು ಮಾತ್ರ ಆಕೆಯನ್ನು ಧನ್ಯತಾ ಒಡಲಾಳದಲ್ಲಿ ನೆನಪಿಸಿಕೊಳ್ಳುತ್ತಾರೆ. ಅದೇ ರೀತಿ ಕವಿಗಳು ತಮ್ಮ ಹಿಂದಿನ ಪಾಡು, ತಾಯಿಯ ಕಷ್ಟ ಎಲ್ಲವನ್ನು ನೆನಪಿಸಿಕೊಳ್ಳುತ್ತಾರೆ. ನಾನು ಹಿಂದಿನದನ್ನು ಮರೆತಿಲ್ಲಮ್ಮ ಅಂತ ಹೇಳುತ್ತಾರೆ. ಹೆತ್ತ ತಾಯಿಗೆ ಮಕ್ಕಳು ಇದಕ್ಕಿಂತ ದೊಡ್ಡ ಪುಣ್ಯದ ಭಾರವ ಹೊರಿಸಲಾರರು. `ಅಮ್ಮಾ ನೀನು ನನ್ನ ಕಣ್ಣಲಿ ನಿಜಕೂ ದೇವರೇ,
ಇಡೀ ಬದುಕು ಅಪರ್ಿಸಿದರೂ ಅದು ತೃಣ ಮಾತ್ರವೇ!' (ತೀರಿಸಲಾಗದು ನಿನ್ನ ಋಣ).
`ಹೆತ್ತಮ್ಮ' ಅನ್ನುವ ಕವನದಲ್ಲಿ ಅವರ ಬರೆದ ಸಾಲುಗಳು ಈ ರೀತಿ ಇವೆ.
`ಸಾವಿರ ಸಂಕಷ್ಟ ಧೈರ್ಯದಿ ಎದುರಿಸಿ,
ಭಾರವಾದ ಸಂಸಾರ ನಿಷ್ಠೆಯಿಂದ ನಿಭಾಯಿಸಿ...
ಕಷ್ಟತರ ಕಾರ್ಯಗಳ ಹೇಗೋ ನಿರ್ವಹಿಸಿ,
ಎಡರು-ತೊಡರನೆಲ್ಲ ನೀಸಿ ನಡೆದೆ ನೋವ ಸಹಿಸಿ...'
ಹೀಗೆ ಈ ಮೇಲಿನ ಸಾಲುಗಳ ಮೂಲಕ ಡಾ. ದೊಡ್ಡರಂಗೇಗೌಡರು ಕಷ್ಟದಲ್ಲಿ ಬದುಕ ನೀಗಿಸಿ ಮಕ್ಕಳನ್ನು ಬೆಳೆಸಿದ ತಾಯಿಯ ಅಂತಃಕರಣವನ್ನು ಕೆದಕಿದ್ದಾರೆ. ಅವರು ಬೆಳೆದು ಬಂದ ಹಿನ್ನೆಲೆಯನ್ನು ಮುಖವಾಣಿಯನ್ನಾಗಿ
ಇಟ್ಟುಕೊಂಡು ಬರೆದಿದ್ದರೂ, ಅವರಂತೆ ತಾಯಿಯ ಬೆವರಿನಲಿ ಬೆಳೆದ ನನ್ನಂತ ನೂರಾರು ಮನಸ್ಸುಗಳಿಗೆ ಹತ್ತಿರವಾಗುತ್ತಾರೆ. ಕವಿಗಳು ಇನ್ನೊಂದು ದಾರಿಯಲ್ಲಿ ರಮ್ಯಕವನಗಳ ಮೂಲಕ ನಮಗೆ ಇಷ್ಟವಾಗುತ್ತಾರೆ.
`ನೀನೊಂದು ಸುಂದರ ಕವಿತೆ,
ನಿನ್ನೊಳಗೆ ಭಾವ ಸರಿತೆ...
ನಿನ್ನ ಹೃದಯ ನಾನು ಅರಿತೆ,
ಅರಿತಿರಿತು ಪೂರಾ ಬೆರತೆ!
ಸಾಲುಗಳ ಮೂಲಕ ನಮಗೆಲ್ಲಾ ರಮ್ಯಸ್ವಾದವನ್ನು ಉಣಬಡಿಸುತ್ತಾರೆ.
ಪ್ರತಿ ಕವಿಗೆ ಒಂದು ಕೊರಗಿರುತ್ತದೆ, ನೋವಿರುತ್ತದೆ. ಅವುಗಳನ್ನು ಆತ ಕವನಗಳಿಂದಲೇ ಹೊರಹಾಕಬೇಕಾಗುತ್ತದೆ.
ಕೆಲವು ದೇಹವನ್ನು ಬಾಧಿಸಿದರೆ, ಇನ್ನು ಹಲವು ಮನಸ್ಸನ್ನು ಕೊಲ್ಲುತ್ತಿರುತ್ತವೆ. ಕವಿಗೆ ಸಂತೃಪ್ತಿ ಸಿಗುವುದು ಎರಡು ರೀತಿಯಿಂದ. ಒಂದು ಆತ ಅಂದುಕೊಂಡಿದ್ದು,
ಕಲ್ಪಿಸಿಕೊಂಡಿದ್ದು ಬರಹರೂಪಕ್ಕೆ ಇಳಿದಾಗ, ಎರಡನೆಯದು ಈ ಬರಹರೂಪದ ಕವಿಯ ಅಂತರಾಳವೂ ಓದುಗನ ಮನೆಗೆದ್ದು, ಆತನ ಬಾಯಿಯಲ್ಲಿ ಹರಿದಾಡಿದಾಗ. ಈ ನಡುವೆ `ಕವಿಯ ಕೊರಗು' ಕವನದಲ್ಲಿ ಅವರಲ್ಲಿನ ತಮ್ಮ ಅಸಮಾಧಾನವನ್ನು ತೋರ್ಪಡಿಸಿಕೊಂಡಿದ್ದಾರೆ. ಕೊರಗನ್ನು ನಿವೇದಿಸಿಕೊಂಡಿದ್ದಾರೆ.
ನಿನಗೆ ಬೇಕಿರುವುದು-ನಾನಲ್ಲ... ನಾನಲ್ಲ
ನನ್ನ ಬೆವರಿನ ಹೊನ್ನು!
ಪ್ರೀತಿ ಅರ್ಥವಾದೀತು ಹೇಗೆ?
ಕವಿಗೆ ಕಟ್ಟಿಟ್ಟ ಬುತ್ತಿ ಕೊರಗೇ!
ಮಾನವಧರ್ಮದ ತಪ್ಪು, ಒಪ್ಪುಗಳನ್ನು, ರೀತಿ, ನೀತಿಗಳನ್ನು ಸರ್ವಜ್ಞ, ಡಿವಿಜಿಯಂತಹ ಮೇರು ರತ್ನಗಳು ಕೇವಲ ನಾಲ್ಕು ಸಾಲುಗಳಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟು ಕನ್ನಡ ಸಾಹಿತ್ಯವನ್ನು ಅತ್ಯಂತ ಶ್ರೀಮಂತಗೊಳಿಸಿದ್ದಾರೆ. ಆ ನಿಟ್ಟಿನಲ್ಲಿ ದೊರಂಗೌಡರು `ಮಣ್ಣಿನ ಮಗ' ಅನ್ನುವ ಬಾಣದ ಮೂಲಕ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ತುಂಬಾ ಸರಳ ಕನ್ನಡ, ಅಗಾಧ ಭಾವಾರ್ಥ, ಓದಿದರೆ ಇದರಲ್ಲಿ ಏನೋ ಇದೆ ಅಂತ ಅನ್ನಿಸುವ ಕಾವ್ಯಾಶಕ್ತಿ, ಕಾವ್ಯ ಪ್ರಯೋಗದ ಹೊಸ ಆಯಾಮಕ್ಕೆ ತೆರೆದಿಟ್ಟಂತಾಗುತ್ತದೆ. ಈ ಕವನಗಳಲ್ಲಿ ಎಲ್ಲವೂ ಇದೆ. ಮಾತಿನ ಮೂಲಕ ಚಾಟಿ ಏಟು ನೀಡುತ್ತಾರೆ, ಬುದ್ಧಿವಾದ ಹೇಳುತ್ತಾರೆ. ತಮ್ಮ ಅನುಭವಗಳನ್ನು ಬಿತ್ತುತ್ತಾರೆ. ಸಂಕಲನ ಕೊನೆಯಲ್ಲಿ ಸುಮಾರು ನೂರಕ್ಕೂ ಹೆಚ್ಚಿನ ಮಣ್ಣಿನ ಮಗನ ಬಾಣಗಳು ಸಿಗುತ್ತವೆ. ಇದರಲ್ಲಿ ಸಾಹಿತಿಗಳು ಹೇಗೆ ಇರಬೇಕು ಅನ್ನುವುದಕ್ಕೆ ಬರೆದ ನಾಲ್ಕು ಸಾಲುಗಳು ನನಗೆ ತುಂಬಾ ಇಷ್ಟವಾದವು. `ಪರ್ಯಾಯ' ಅನ್ನುವ ಕವನದ ಸಾಲುಗಳು...
ಗೀತಕಾರನಾದೊಡೆ ಬಿದಿರ ಕೊಳಲಂತಿರಬೇಕು
ಕತೆಗಾರನಾದೊಡೆ ಗಂಗಾ ಸಲಿಲದಂತಿರಬೇಕು-
ಕಾದಂಬರಿಕಾರನಾದೊಡೆ ಗೂಢ ಗರ್ಭದಂತಿರಬೇಕು
ಕವಿಯಾದೊಡೆ ಹಿಮಾಲಯವಾಗಬೇಕು
-ಮಣ್ಣಿನ ಮಗ
ಒಟ್ಟಾರೆಯಾಗಿ `ಕಾಡು... ಕಣಿವೆ... ಕಡಲು' ಕವನ ಸಂಕಲನ ನನಗೆ ತುಂಬಾ ಇಷ್ಟವಾಯಿತು. ದೊಡ್ಡರಂಗೇಗೌಡರಂತಹ ಮೇರು ಪರ್ವತದ ಕವನಗಳನ್ನು ಇಂದಿನ ಯುವ ತಲೆಮಾರಿನವನಾದ ನಾನು, ನನಗೆ ಅವರ ಕವನಗಳು ಇಷ್ಟವಾದ ಬಗೆ, ನಾನು ನಡೆದು ಬಂದಿರುವ ರೀತಿ, ನನ್ನ ಸ್ವಭಾವಕ್ಕೆ ದೊರಂಗೌಡರ ಕವನಗಳು ಕನ್ನಡಿಯಾಗಿವೆ, ಇದು ನನ್ನ ವೈಯಕ್ತಿಕ ಅಭಿಪ್ರಾಯ. ಎಷ್ಟೋ ಕವನಗಳ ಮೂಲಕ ನನ್ನನ್ನು ನಾನು ನೋಡಿಕೊಂಡಿದ್ದೇನೆ.
ಮಣ್ಣಿನ ಮಗನ ಮೂಲಕ ನಾನು ಹೀಗಿರಬೇಕು. ಹೀಗಾಗಬಾರದು ಅಂತ ಅಂದುಕೊಂಡಿದ್ದೇನೆ.
ದೊರಂಗೌಡರ ಕೇವಲ ಸಿನಿಮಾ ಹಾಡುಗಳು ಮಾತ್ರ ಕೆಲವರಿಗೆ ಇಷ್ಟವಾಗಬಹುದು, ಏಕೆಂದರೆ ಅಲ್ಲಿ ಅವರು ಬರೆದ ಸಾಲುಗಳಿಗೆ ಜೀವ ತುಂಬುವ ಹಾಗೆ ಸಂಗೀತವಿರುತ್ತದೆ. ಆದರೆ ಸಿನಿಮಾ ಬಿಟ್ಟು ಸಾಹಿತ್ಯದ ಕ್ಷೇತ್ರಕ್ಕೆ ನೀಡಿದ ಕವನಗಳನ್ನು ನೋಡಿದಾಗ ಸಂಗೀತಕ್ಕಿಂತ ಪದಸಂಪತ್ತಿನ ಮೂಲಕ ಅವರು ಇಷ್ಟವಾಗುತ್ತಾರೆ.
ಅವರ ಕವನ ಸಂಕಲನದ ಬಗ್ಗೆ ಬರೆಯಲು ಅವಕಾಶವನ್ನು ಅವರೇ ನನಗೆ ನೀಡಿದಾಗ, ಒಂದು ಕ್ಷಣ ನಂಬಲಾಗಲಿಲ್ಲ. ಎರಡು ಮೂರು ದಿನಗಳಲ್ಲಿ ಇಡೀ ಸಂಕಲನವನ್ನು ಓದಿ ಮುಗಿಸಿದರೂ, ನಾಲ್ಕು ದಿನ ಹೇಗೆ ಬರೆಯಲಿ ಅನ್ನುವ ತೊಳಲಾಟದಲ್ಲೇ ಸ್ವಲ್ಪದಿನ ಮುಂದೂಡಿದೆ. ಆದರೆ ಸಂಕಲನವನ್ನು ಓದಿದ ಅನುಭವ ಮಾತ್ರ ಒಳಗೆ ಕುದಿಯುತ್ತಲೇ ಇತ್ತು. ಅದನ್ನು ಹೊರಗಾಗಲೇಬೇಕಿತ್ತು. ದೋರಂಗೌಡರ ಕವನಗಳ ಬಗೆಗಿನ ಓದಿನ ಅನುಭವದ ಮಾತುಗಳು ನದಿಯಾಗಿ ಹರಿದಿದ್ದು ಹೀಗೆ. ಹಿರಿಯ ಕವಿಗಳು ನಮ್ಮಂಥ ಕಾವ್ಯಾಸಕ್ತ, ಸಾಹಿತ್ಯಾಸಕ್ತ ಇಂದಿನ ತಲೆಮಾರಿನ ಬರಹಗಾರರಿಗೆ ಸದಾ ಪ್ರೇರಣೆ. ವಾಗ್ದೇವಿ ಸುಪುತ್ರನ ಆರ್ಶಿರ್ವಾದ ಸದಾ ನಮ್ಮ ಮೇಲಿರಲಿ ಅಂತ ನಾನು ಈ ಮೂಲಕ ಅವರಲ್ಲಿ ಕೇಳಿಕೊಳ್ಳುತ್ತೇನೆ. ಸರ್, ನೀವು ಸದಾ ಬರೆಯಿರಿ... ನಮಗೆಲ್ಲಾ ಪ್ರೇರಣೆಯಾಗಿರಿ...
No comments:
Post a Comment