Monday, 7 May 2012

ಡಬ್ಬಿಂಗ್ ಆದರೇನು ಶಿವ, ನಮಗೆ ಬೇಕಾಗಿರುವುದು ಎಂಟರ್ಟೇನ್ಮೆಂಟ್... ಎಂಟರ್ಟೇನ್ಮೆಂಟ್... ಎಂಟರ್ಟೇನ್ಮೆಂಟ್ ...


       ಕನ್ನಡಿಗರಿಗೆ ಇದಕ್ಕಿಂತ ದೊಡ್ಡ ದೌಭಾರ್ಗ ಇನ್ನೊಂದಿಲ್ಲ. ಬಿಬಿಸಿ, ಡಿಸ್ಕವರಿ, ನ್ಯಾಷನಲ್ ಜಿಯೋಗ್ರಾಫಿಕ್ನಂತಹ ಜಗತ್ತೇ ಮೆಚ್ಚಿದ ಚಾನೆಲ್ಗಳನ್ನು  ಕರ್ನಾಟಕದಲ್ಲಿದ್ದುಕೊಂಡು ತಮಿಳು,  ತೆಲಗು, ಹಿಂದಿ ಭಾಷೆಯಲ್ಲಿ ನೋಡಬೇಕಾದ ಪರಿಸ್ಥಿತಿ ಮಾತ್ರ ಆಗಿರುವುದು ಕನ್ನಡದದವರ ದುರಂತ. ದುರಂತದ ಅಧ್ಯಾಯಕ್ಕೆ ಕಾರಣವಾಗಿರುವವರು ಕೂಡ ನಮ್ಮ ಕನ್ನಡಿಗರೇ. ಡಬ್ಬಿಂಗ್ ಸಂಸ್ಕೃತಿ ನಮ್ಮ ಕನ್ನಡಕ್ಕಲ್ಲ ಅಂತ ಹೇಳುವ ಕನ್ನಡ ಚಿತ್ರರಂಗದ ಒಂದು ಪ್ರಭಾವಿ ವರ್ಗ ಒಂದು ರೀತಿಯಲ್ಲಿ ತಮ್ಮ ತಮ್ಮ ವೈಯಕ್ತಿಕ ಸ್ವಾರ್ಥಕ್ಕನುಸಾರಕ್ಕಾಗಿ ಡಬ್ಬಿಂಗ್ ಬೇಡ ಅನ್ನುವ ಅಸ್ತ್ರವನ್ನು ಇಂದಿಗೂ ತಮ್ಮಲ್ಲಿ ಇಟ್ಟುಕೊಂಡು ಕನ್ನಡ ಚಿತ್ರೋದ್ಯಮದ ಹಾಗೂ ಮನರಂಜನಾ ಟೀವಿ ಉದ್ಯಮದ ಬೆಳವಣಿಗೆ ಕುಂಠಿತವಾಗಲು ಕಾರಣವಾಗಿದ್ದಾರೆ. ಅಷ್ಟಕ್ಕೂ ಡಬ್ಬಿಂಗ್ ಕನ್ನಡ ಸಂಸ್ಕೃತಿಯಲ್ಲ ಅಂತ ಹೇಳುವವರಿಗೆ, ಮೊದಲು ನಮ್ಮ ಕನ್ನಡ ಸಂಸ್ಕೃತಿ ಏನು ಎಂಬುವನ್ನು ದಯವಿಟ್ಟು ಬಿಡಿಸಿಹೇಳಬೇಕಾಗಿದೆ. ಕನ್ನಡ ಮಣ್ಣಿನ ಸೊಗಡು ಅಂತ ಹೇಳಿಕೊಂಡು ರಿಮೇಕ್ ಚಿತ್ರಗಳು ಹಾಗೂ  ರಿಮೇಕ್ ಧಾರಾವಾಹಿಗಳ ಮೇಲೆ ನೂರಾರು ಕೋಟಿ ರೂಪಾಯಿ ಹರಿದು ಹಾಳಾಗಿ ಕನ್ನಡ ಉದ್ಯಮಶೀಲದ ಬುಡಕ್ಕೆ ದೊಡ್ಡ ಪೆಟ್ಟು ಬೀಳುತ್ತಿರುವುದು, ಇದರ ಜೊತೆಗೆ ಆಗುತ್ತಿರುವ ಅನ್ಯ ಭಾಷೆಯ ಸಂಸ್ಕೃತಿಯ ಹೇರಿಕೆ ಮಾತ್ರ ಡಬ್ಬಿಂಗ್ ವಿರೋಧಿಸುತ್ತಿರವವರಿಗೆ ಕಾಣುತ್ತಿಲ್ಲ.


ಡಬ್ಬಿಂಗ್ ಬಗ್ಗೆ ಹಿಂದೆ ಅಂದರೆ ಸುಮಾರು ನಾಲ್ಕು ದಶಕಗಳ ಹಿಂದೆ ದೊಡ್ಡ ಹೋರಾಟವಾಗಿದ್ದು ನಿಜಕ್ಕೂ ಒಪ್ಪುವಂತದ್ದು. ಆಗಿನ ಸಮಯದಲ್ಲಿ ಡಬ್ಬಿಂಗ್ ವಿರುದ್ಧ ಹೋರಾಟ ಆಗಿಲ್ಲದಿದ್ದರೆ ಈಗಿನ ನಮ್ಮ ಕನ್ನಡ ಚಿತ್ರರಂಗವನ್ನು ನಾವು ಕಲ್ಪಿಸಿಕೊಳ್ಳುವುದು ಕೂಡ ಕಷ್ಟ ಸಾಧ್ಯ.  ವರನಟ ಡಾ.ರಾಜ್ಕುಮಾರ್ ಸಾರಥ್ಯದಲ್ಲಿ ಕನ್ನಡ ಚಿತ್ರರಂಗ ಹಾಗೂ ಅನಕೃ ಅವರ ನೇತೃತ್ವದಲ್ಲಿ ಸಾಹಿತ್ಯವಲಯ ಒಟ್ಟಾಗಿ ಅಂದು ದೊಡ್ಡ ಹೋರಾಟ ಮಾಡಿದ್ದವು. ಆಗಿನ ಡಬ್ಬಿಂಗ್ ಹೋರಾಟಕ್ಕೆ ನೂರಕ್ಕೆ ನೂರರಷ್ಟು ಅರ್ಥ ಇತ್ತು. ಆಗಿನ ಪರಿಸ್ಥಿತಿ ಕೂಡ ಹೋರಾಟಕ್ಕೆ ಪೂರಕವಾಗಿತ್ತು. ಇದಕ್ಕೆ ನೀಡುವ ಕಾರಣಗಳನ್ನು ಕೂಡ ಪಟ್ಟಿಮಾಡುವುದಾದರೆ,  ಅಂದು ಸಿನಿಮಾ ಹಾಗೂ ಕನ್ನಡ ಸಾಹಿತ್ಯ ಒಂದೇ ನಾಣ್ಯದ ಮುಖಗಳಾಗಿದ್ದವು. ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳು ಸಿನಿಮಾ ಉದ್ಯಮದಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡಿದ್ದರು. ಹಾಗಾಗಿಯೇ ಅಂದಿನ ಕನ್ನಡ ಸಿನಿಮಾಗಳಲ್ಲಿ .ರಾ.ಬೇಂದ್ರೆ, ಶಿವರಾಮಕಾರಂತ, ಕುವೆಂಪು, ತ್ರಿವೇಣಿ, ಅನಕೃ, ತರಾಸು, ಎಸ್.ಎಲ್.ಭೈರಪ್ಪ, ಯು.ಆರ್.ಅನಂತಮೂರ್ತಿ, ಎಂ.ಕೆ.ಇಂದಿರಾ, ಆಲನಳ್ಳಿ ಕೃಷ್ಣ, ಪಿ.ಲಂಕೇಶ್, ರಾಮರಾಯರು, ಗಿರಡ್ಡಿ ಗೋವಿಂದರಾಜು ಇನ್ನು ಹಲವಾರು ಸಾಹಿತಿಗಳ ಕೃತಿಗಳು ಕನ್ನಡ ಸಿನಿಮಾ ಉದ್ಯಮಕ್ಕೆ ಉಸಿರಾಗಿದ್ದವು. ಅಕಸ್ಮಾತ್ ಬೇರೆ ಭಾಷೆಯ ಸಿನಿಮಾಗಳನ್ನು ಡಬ್ಬಿಂಗ್ ಮಾಡಿ ಬಿಡುವುದರಿಂದ ಮೂಲ ಕನ್ನಡ ಕೃತಿಗಳನ್ನು ಬಳಸಿಕೊಳ್ಳಲು ಆಗುವ ತೊಡಕನ್ನು ಮನಗಂಡು ಡಬ್ಬಿಂಗ್ಗೆ ಸಾಹಿತ್ಯವಲಯದ ಕಡೆಯಿಂದ ಬೆಂಬಲ ಸಿಕ್ಕಿತ್ತು. ಕನ್ನಡ ಚಿತ್ರರಂಗ ಆಗಿನ್ನೂ ಮದ್ರಾಸ್ ಪ್ರಾಂತ್ಯದಲ್ಲಿ ನೆಲೆಯೂರಿದ್ದರಿಂದ ಕನ್ನಡ ಸಿನಿಮಾಗಳ ನಿರ್ಮಾಣವೇ ದೊಡ್ಡ ಸವಾಲಾಗಿತ್ತು. ವರ್ಷಕ್ಕೆ 40-50 ಕನ್ನಡ ಸಿನಿಮಾಗಳು  ನಿರ್ಮಾಣವಾದರೆ ಹೆಚ್ಚಾಗಿತ್ತುನಿರ್ಮಾಣವಾದ ಅಷ್ಟೂ ಸಿನಿಮಾಗಳಲ್ಲಿ ಹೆಚ್ಚಿನವರು ಪರಭಾಷಾ ತಂತ್ರಜ್ಞರುನಿರ್ಮಾಪಕ, ನಿರ್ದೇಶಕರಿಗೇನೆ ಹೆಚ್ಚೆಚ್ಚು ಕೆಲಸ ಸಿಗುತ್ತಿತ್ತು. ತಂತ್ರಜ್ಞರಿಗೆ ಅಗಾಧ ಬೆಲೆ ಇದ್ದ ಸಂದರ್ಭದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಸಿನಿಮಾ ತಂತ್ರಗಾರಿಕೆ ಹಾಗೂ ನೈಪುಣ್ಯತೆಯ ವಿಷಯ ಬಂದಾಗ ಕನ್ನಡಿಗರು ಅವಕಾಶ ವಂಚಿತರಾಗಿದ್ದರು. ಅಂದು ಕರ್ನಾಟಕದಲ್ಲಿ ಸಿನಿಮಾಭಾಷೆಯನ್ನು ಕಲಿಸುವಂತಹ ತರಬೇತಿ ಸಂಸ್ಥೆಗಳು, ಸ್ಟುಡಿಯೋಗಳು ಯಾವುವು ಇಲ್ಲಿರಲಿಲ್ಲ.


ಇಂತಹ ಸಂದರ್ಭದಲ್ಲಿ ಕನ್ನಡ ಸಿನಿಮಾ ಉದ್ಯಮವೇ ಪರಭಾಷಾದವರ ಹಿಡಿತಕ್ಕೆ ಬಂದು, ಬೇರೆ ಭಾಷೆಯ ಸೂಪರ್ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ಬಿಡುವಂತಹ ಪರಿಸ್ಥಿತಿ ಬಂದ ಸಂದರ್ಭದಲ್ಲಿ ಕನ್ನಡ ಕಲಾವಿದರು ಬಂಧನ ಹಾಗೂ ತಮ್ಮ ಅಸ್ತ್ತಿತ್ವವನ್ನು ಉಳಿಸಿಕೊಳ್ಳಲೇಬೇಕಾದ ಪರಿಸ್ಥಿತಿ ಅಂದಿತ್ತು. ಇದೆಲ್ಲಾ ಡಬ್ಬಿಂಗ್ ಹೋರಾಟಕ್ಕೆ ಅಂದು ದೊಡ್ಡ ಕಾರಣವಾಗಿತ್ತು. ಆದರೆ ಇಂದು ನಮ್ಮ ಕನ್ನಡ ಚಿತ್ರರಂಗ ತರಹದ ಪರಿಸ್ಥಿತಿಯನ್ನು ಎದುರಿಸುತ್ತಿದೆಯೇ? ಕನ್ನಡ ಚಿತ್ರರಂಗದಲ್ಲಿ ಇಂದು ವರ್ಷಕ್ಕೆ ನೂರಕ್ಕೂ ಹೆಚ್ಚು ಸಿನಿಮಾಗಳು  ನಿರ್ಮಾಣವಾಗುತ್ತಿವೆ. ಇಂದು ತಾಂತ್ರ್ರಿಕವಾಗಿ ಬೇರೆ ಭಾಷೆಯವರಷ್ಟೇ ನಾವು ಮುಂದುವರೆದಿದ್ದೇವೆ. ಸ್ವಂತ ಸ್ಟುಡಿಯೋಗಳಿವೆ, ವರ್ಷಕ್ಕೆ 400 ರಿಂದ 500 ಕೋಟಿ ರೂಪಾಯಿಗಳು ಕನ್ನಡ ಚಿತ್ರರಂಗದಲ್ಲಿ ಒಳ ಹಾಗೂ ಹೊರಹರಿವು ಆಗುತ್ತಿದೆ. ಇದೆಲ್ಲಾ ಕನ್ನಡ ಚಿತ್ರರಂಗದ ಬೆಳವಣಿಗೆಯನ್ನು ಎತ್ತಿಹಿಡಿಯುತ್ತದೆ. ಬೇರೆ ಭಾಷೆಯಲ್ಲೂ  ಇದೇ ಪರಿಸ್ಥಿತಿ ಇದೆ. ಅವರೆಲ್ಲ ಡಬ್ಬಿಂಗ್  ಉದ್ಯಮವನ್ನು ಒಪ್ಪಿಕೊಂಡು ಬದುಕುತ್ತಿಲ್ಲವೇ? ಇಂದು ಅವರೆಲ್ಲಾ ಹಾಲಿವುಡ್ನ ಸೂಪರ್ ಹಿಟ್ ಸಿನಿಮಾಗಳನ್ನು ಅವರವರ ಭಾಷೆಯಲ್ಲಿ ನೋಡುತ್ತಿದ್ದಾರೆ. ಜೇಮ್ಸ್ ಕೆಮಾರೂನ್, ಸ್ಪೀಲ್ಬರ್ಗರ ಸಿನಿಮಾಗಳನ್ನು ನೇರವಾಗಿ ತಮ್ಮ ಭಾಷೆಯಲ್ಲಿ ನೋಡಿ ಆನಂದಿಸುತ್ತಿದ್ದಾರೆ. ಬಾಲಿವುಡ್ನ ಅದ್ಭುತ  ಸಿನಿಮಾಗಳು, ಕಮಲ್, ರಜನಿ, ಶಾರುಖ್ ಖಾನ್, ಅಮಿತಾಭ್ ಬಚ್ಚನ್, ವಿಜಯ್, ವಿಕ್ರಮ್, ಮೋಹನ್ಲಾಲ್ರ ಸಿನಿಮಾಗಳನ್ನು ತಪ್ಪದೇ ನೋಡುತ್ತಿದ್ದಾರೆ. ಅದು ಮೂಲ ಭಾಷೆಯಲ್ಲಲ್ಲ. ಅವರವರ ಮಾತೃಭಾಷೆಯಲ್ಲಿ. ಪರಭಾಷಿಕರು ಎಂತಹ ಅದೃಷ್ಟವಂತರು. ಡಬ್ಬಿಂಗ್ ವಿಷಯದಲ್ಲಿ ನಮ್ಮ ಕನ್ನಡಿಗರು ಏನು ತಪ್ಪು ಮಾಡಿದ್ದಾರೆ . ನಮ್ಮ ಹೆಮ್ಮೆಯ ಕನ್ನಡಿಗ ರಜನಿಕಾಂತ್ರ ಸಿನಿಮಾಗಳನ್ನು ನಾವು ತಮಿಳಿನಲ್ಲೇ ನೋಡಬೇಕು. ಅದೇ ರಜನಿ, ಚಿರಂಜೀವಿ ಸಿನಿಮಾವನ್ನು ತಮಿಳು/ತೆಲುಗಿನಿಂದ ಕನ್ನಡಕ್ಕೆ ಡಬ್ ಮಾಡಿ ಬಿಟ್ಟರೆ, ರಜನಿ ಹೇಳುವ ಕನ್ನಡ ಡೈಲಾಗ್ಗಳನ್ನು ಕೇಳಿ ಬೆಂಗಳೂರಿನ ತಮಿಳರು ಕೂಗುತ್ತಾ ಸಿಳ್ಳೆ ಹಾಕುವುದಿಲ್ಲವೇ? ಡಬ್ ಆದ ಕನ್ನಡ ಹಾಡಿಗೆ ಚಿರಂಜೀವಿ ಕುಣಿದರೆ ತೆಲಗರು ಹುಚ್ಚೆದ್ದು ಕುಣಿಯುವುದಿಲ್ಲವೇ? ಮೂಲಕ ನಟರಾಜ, ಮೂವಿಲ್ಯಾಂಡ್, ಪಲ್ಲವಿ ಥಿಯೇಟರ್ಗಳಲ್ಲಿ ಕನ್ನಡಕ್ಕೆ ಡಬ್ ಆದಂತಹ ರಜನಿ, ಕಮಲ್, ಚಿರಂಜೀವಿ ಸಿನಿಮಾಗಳನ್ನು ಇಲ್ಲಿಯವರು ನೋಡುವುದಿಲ್ಲವೇ?


ಮೂಲಕ ಡಬ್ ಆದ ಕನ್ನಡ ಸಿನಿಮಾವನ್ನು ತಮಿಳರು, ತೆಲಗರು, ಮಲಯಾಳಿಗಳು, ಉತ್ತರ ಭಾರತೀಯರು ನೋಡುವುದಿಲ್ಲವೇ ? ಜೊತೆಗೆ ಕನ್ನಡ ಸಿನಿಮಾಗಳ ಮೂಲಕ ಕನ್ನಡ ಭಾಷೆಯನ್ನು ಕಲಿಯಬಹುದಲ್ಲವೇ? ಕನ್ನಡ ಚಿತ್ರರಂಗದಲ್ಲಿ ಬರುವ ಒಳ್ಳೆಯ ಸಿನಿಮಾಗಳನ್ನು ಜನರು ಸ್ವೀಕರಿಸುವುದಿಲ್ಲವೇ? ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಕನ್ನಡ ಸಿನಿಮಾಗಳು ಬರುತ್ತಿಲ್ಲ ಅನ್ನುವ ಕಳಂಕ ಮಾಯವಾಗುವುದಿಲ್ಲವೇ? ತರಹದ ಹತ್ತಾರು ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ ಅಲ್ಲವೇ..! `ಜಯಂ', `ಆರ್ಯ' ನಂತಹ ತೆಲಗು ಸಿನಿಮಾಗಳು ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ  ಸಿಲ್ವರ್ ಜ್ಯುಬಲಿ ಆಚರಿಸಿವೆ. ಅಲ್ಲು ಅರ್ಜುನ್  `ಆರ್ಯ' ಸಿನಿಮಾ ಇಡೀ ಕರ್ನಾಟಕದಲ್ಲಿ 10 ಕೋಟಿ ರೂಪಾಯಿ ಸಂಗ್ರಹ ಮಾಡಿತ್ತು. ಹೀಗೆ ಬೇರೆ ಭಾಷೆಯ ಸಿನಿಮಾಗಳು ನೂರಾರು ದಿನ ಓಡಿ ಕೋಟಿಗಟ್ಟಲೇ ಹಣವನ್ನು ದೋಚಿದರೆ ಇದರಲ್ಲಿ ಬಹುಪಾಲು ಲಾಭವೆಲ್ಲಾ ಸೇರುವುದು ನಮ್ಮ ಕನ್ನಡಿಗರಿಗೆ ಹೊರತು ಅನ್ಯರಿಗಲ್ಲ. ಒಳ್ಳೆಯ ಕನ್ನಡ ಸಿನಿಮಾಗಳು ಯಾವ ಭಾಷೆಯ ಮೂಲಕ ಬಂದರೇನು? ಒಟ್ಟಾರೆ  ನಮ್ಮ ಕನ್ನಡ ಜನರಿಗೆ ಬೇಕಾಗಿರುವುದು ಎಂಟರ್ಟೇನ್ಮೆಂಟ್ .. ಎಂಟರ್ಟೇನ್ಮೆಂಟ್ .. ಎಂಟರ್ಟೇನ್ಮೆಂಟ್ ..
ಡಬ್ಬಿಂಗ್ನಿಂದ ನಷ್ಟಕ್ಕಿಂತ ಲಾಭವೇ ಹೆಚ್ಚುಡಬ್ಬಿಂಗ್ ಮಾಡುವುದರಿಂದ ಬೇರೆ ಭಾಷೆಯ ನಟರನ್ನು ನಮ್ಮ ಕನ್ನಡಿಗರು ಹೆಚ್ಚು ಆರಾಧನೆ ಮಾಡುವುದರ ಜೊತೆಗೆ ಇಲ್ಲಿಯ ನಮ್ಮ ಕನ್ನಡದ ಹೀರೋಗಳನ್ನು ಮರೆತುಬಿಡಬಹುದು, ಹಾಗಾದಾಗ ಮೂಲ ಕನ್ನಡ ನಾಯಕರುಗಳಿಗೆ ಬೆಲೆ ಇಲ್ಲದಂತಾಗುತ್ತದೆ ಅನ್ನುವ ಅಳುಕು ಕೆಲವರಿಗೆ ಕಾಡುತ್ತಿದೆ. ಇಂದು ಡಬ್ಬಿಂಗ್ ಆದ ಸಿನಿಮಾಗಳು ತಮಿಳು, ತೆಲಗು, ಮಲಯಾಳಂ ಚಿತ್ರರಂಗದಲ್ಲಿ ತೆರೆಕಾಣುತ್ತಿದ್ದರೂ ಅಲ್ಲಿಯ ಜನರು ಇಂದಿಗೂ ಅಲ್ಲಿಯ ಮೂಲ ನಟರುಗಳನ್ನೇ ಆರಾಧಿಸುತ್ತಿದ್ದಾರೆ. ತಮಿಳಿನ ರಜನಿಕಾಂತ್, ಕಮಲ್ ಹಾಸನ್, ವಿಕ್ರಂ, ಅಜಿತ್, ವಿಜಯ್, ಮಾಧವನ್, ಸಿದ್ದಾರ್ಥನಂತಹ ಜನಪ್ರಿಯ ನಟರ ಸಿನಿಮಾಗಳು ತೆಲಗು, ಮಲಯಾಳ ಸಿನಿಮಾಕ್ಕೂ ಡಬ್ ಆದರೂ, ತೆಲಗರು ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನವೆಂಕಟೇಶ್, ಜ್ಯೂ.ಎನ್ಟಿಆರ್, ಮಹೇಶ್ಬಾಬುರ ಸಿನಿಮಾಗಳನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಅವರಿಗೆ ಅಲ್ಲಿಯ ಮಣ್ಣಿನ ಹೀರೋಗಳ ಮೇಲೆ ಇದ್ದ ಅಭಿಮಾನ ಎಂದಿಗೂ ಕಡಿಮೆಯಾಗಿಲ್ಲ. ಅದೇ ರೀತಿ ಮಲಯಾಳಿಗಳು ರಜನಿ, ಕಮಲ್, ಶಾರುಖ್, ಜಾಕಿ ಚಾನ್ ಬಂದರೂ ಮೋಹನ್ಲಾಲ್, ಮುಮ್ಮಟ್ಟಿಯನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಬೇರೆ ಭಾಷೆಗಳಲ್ಲೇ ಹೀಗಿರುವಾಗ ನಮ್ಮ ಕನ್ನಡಿಗರು ಹೊರಗಡೆಯಿಂದ ತಮಿಳು, ತೆಲುಗು, ಬಾಲಿವುಡ್ ಹಿರೋಗಳು ಬಂದರೂ, ಕನ್ನಡದ ಮಣ್ಣಿನ ಪುನೀತ್ರಾಜ್ ಕುಮಾರ್,ಶಿವಣ್ಣ, ದರ್ಶನ್, ಸುದೀಪ್, ರವಿಚಂದ್ರನ್ರಂತಹ ಇನ್ನು ಹಲವು ಹೀರೋಗಳನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ.  ಹಾಗಾಗಿ ನಮ್ಮ ಹೀರೋಗಳು ಡಬ್ಬಿಂಗ್ ವಿರೋಧಿಸುವುದರಲ್ಲಿ ಅರ್ಥವಿಲ್ಲ. ಕನ್ನಡ ಚಿತ್ರರಂಗ ಅಂದರೇ ಕೇವಲ ಕಲಾವಿದರಿಂದ ಮಾತ್ರ ಕೂಡಿಲ್ಲ.  ಒಂದು ಪರಭಾಷಾ ಸಿನಿಮಾ ಡಬ್ ಆದರೆ, ಡಬ್ ಮಾಡುವ ಡಬ್ಬಿಂಗ್ ಆರ್ಟಿಸ್ಟ್ ಗಳಿಗೆ, ಸ್ಕ್ರಿಪ್ಟ್ ಬರೆಯುವವರಿಗೆ, ಹಾಡು ಬರೆಯುವವರಿಗೆ, ಸ್ಟುಡಿಯೋಗಳಿಗೆ, ಆಡಿಯೋ ಕಂಪನಿಗಳು, ಟೀವಿ ಚಾನೆಲ್ಗಳು, ಪೋಸ್ಟರ್ ಪ್ರಿಂಟ್ ಮಾಡುವವರಿಗೆ, ಪೊಸ್ಟರ್ ಅಂಟಿಸುವ ಕಾರ್ಮಿಕರುಪಿಆರ್ಓಗಳು, ಪತ್ರಿಕೆಗಳು, ಹಂಚಿಕೆದಾರರು, ಪ್ರದರ್ಶಕರು, ಸಿನಿಮಾ ಥಿಯೇಟರ್ಗಳಲ್ಲಿ ಕೆಲಸ ಮಾಡುವ  ಕಾರ್ಮಿಕರು, ಸಿನಿಮಾ ಮಾರ್ಕೆಟಿಂಗ್ ಮಾಡುವವರಿಗೆ  ಹೀಗೆ ಇನ್ನು ಹಲವಾರು ನೂರಾರು ತಂತ್ರಜ್ಞರುಕಾರ್ಮಿಕರಿಗೆ ಕೆಲಸ ಸಿಕ್ಕಿದಂತಾಗುತ್ತದೆ. ಮೇಲಾಗಿ ಡಬ್ ಆದ ಸಿನಿಮಾಗಳಿಗೆ ವಿಧಿಸುವ ಮನರಂಜನಾ ತೆರಿಗೆಯಿಂದ ಸರ್ಕಾರಕ್ಕೆ ಕೋಟ್ಯಂತರ ಹಣ ಹರಿದು ಬರುತ್ತದೆ. ಕೇವಲ ಕಲಾವಿದರಿಗೆ ಅವಕಾಶ ಸಿಗುವುದಿಲ್ಲ ಅಂತ ಅಂದುಕೊಂಡು ಡಬ್ಬಿಂಗನ್ನು ವಿರೋಧಿಸುವುದರಲ್ಲಿ ಏನು ಅರ್ಥವಿದೆ. ರಿಮೇಕ್ ಓಕೆ, ಡಬ್ಬಿಂಗ್ ಯಾಕೆ ಅನ್ನುವವರಿಗೆ ಡಬ್ಬಿಂಗ್ ಯಾಕೆ ಬೇಕು ಅಂತ ಒಮ್ಮೇ ಯೋಚಿಸಿ ನೋಡಬೇಕು. ಅಕಸ್ಮಾತ್ ಕನ್ನಡದಲ್ಲಿ ಡಬ್ಬಿಂಗ್ಗೆ ಅವಕಾಶ ಕೊಟ್ಟರೆ ಬಹುಭಾಷಾ ಸಿನಿಮಾಗಳನ್ನು ಮಾಡುವಾಗ ನಮ್ಮ ಕನ್ನಡದ ಕಲಾವಿದರನ್ನು ಬೇರೆ ಭಾಷೆಯಲ್ಲಿ ಅಭಿನಯಿಸುವ ಅವಕಾಶ ಸಿಗಲೂಬಹುದು. ಇಂದು ಡಬ್ಬಿಂಗ್ ವಿರೋಧ ಕೇವಲ ಸಿನಿಮಾದಲ್ಲಿ  ಮಾತ್ರವಿಲ್ಲ. ಇದು ಕಿರುತೆರೆಗೂ ಹಬ್ಬಿದೆ. ಡಬ್ ಆದ ಜಾಹೀರಾತುಗಳು, ಟೆಲಿಶಾಪ್ ಹೆಸರಿನಲ್ಲಿ ಗಂಟೆಗಟ್ಟಲೇ ಕೊರೆಯುವ ಕಾರ್ಯಕ್ರಮಗಳು ನಮಗೆ ಬೇಕು, ಆದರೆ ರಾಮಾಯಣ, ಮಹಾಭಾರತದಂತಹ ಕಾರ್ಯಕ್ರಮಗಳು ಬೇಡ ಅಲ್ಲವೇ. ಕನ್ನಡದಲ್ಲಿ ಅಷ್ಟು ಬಜೆಟ್ಟು ಹಾಕಿ ಪೌರಾಣಿಕ ಧಾರಾವಾಹಿಗಳನ್ನು ಮಾಡಲಾಗುತ್ತದಯೇ? ಅಕಸ್ಮಾತ್ ಮಾಡಿದರೂ ಗುಣಮಟ್ಟ ಸಿಗುವುದೇ? ನಮ್ಮವರು ಯಾಕೆ ಇದನ್ನು ಯೋಚಿಸುತ್ತಿಲ್ಲ. ಹೀಗೆ ಡಬ್ಬಿಂಗ್ನ್ನು ವಿರೋಧಿಸುವ ಏಷ್ಟು ಜನ ಕನ್ನಡಿಗರು ಇಂದಿಗೂ ತಮಿಳರ ಉದ್ದಾರಗೋಸ್ಕರ ಅಂತಲೇ ಇರುವ ಕನ್ನಡ ಚಾನೆಲ್ ಉದಯಟೀವಿಯಲ್ಲಿ ಸ್ಲಾಟ್ ಪಡೆದಿದ್ದಾರೆ. ತಮಿಳು ಸನ್ ಟೀವಿಯಲ್ಲಿ ಬರುವ ತಮಿಳು ಸೀರಿಯಲ್ಗಳ ಕತೆಗಳನ್ನು ಯಥಾವತ್ತಾಗಿ ಇಲ್ಲಿ ಭಟ್ಟಿ ಇಳಿಸುವುದನ್ನು  ಕಂಡರೂ ಕಾಣದಂತೆ ನೋಡಿಕೊಂಡು ಕನ್ನಡ ಟೆಲಿವಿಷನ್ ಅಸೋಸಿಯೇಷನ್ ಕೂತಿದೆ.  ಡಿಸ್ಕವರಿ , ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ಗಳು ತಮಿಳು, ತೆಲುಗಿನಲ್ಲಿ ಎಲ್ಲರೂ ನೋಡುವಂತಹ ಕಾರ್ಯಕ್ರಮಗಳನ್ನು ಡಬ್ ಮಾಡಿದ್ದಾರೆ. ಇಂಗ್ಲೀಷ್ ಅರ್ಥವಾಗದ ಸಾಮಾನ್ಯರು ಚಾನೆಲ್ಗಳನ್ನು ತಮಿಳು, ತೆಲಗಿನಲ್ಲಿ ತುಂಬಾ ಕಷ್ಟಪಟ್ಟು ನೋಡುತ್ತಿದ್ದಾರೆ. ಇದೊಂದೇ ಅಲ್ಲ, ಕನ್ನಡಿಗರು ಇಂಗ್ಲೀಷ್ ಸಿನಿಮಾಗಳನ್ನು ಕೂಡ ತಮಿಳು, ತೆಲಗಿನಲ್ಲಿ ನೋಡುತ್ತಿದ್ದಾರೆ. ಇದು ಸದ್ಯದ ಕನ್ನಡದ ಪರಿಸ್ಥಿತಿ. ಅಂದು ಡಬ್ಬಿಂಗ್ ವಿರುದ್ಧ ಇದ್ದ ಕನ್ನಡ ಸಾಹಿತ್ಯ ವಲಯ ಇಂದು ಕನ್ನಡ ಚಿತ್ರರಂಗದಿಂದ ವಿಮುಖವಾಗಿದೆ. ಸಾಹಿತ್ಯ ವಲಯದ ಕಡೆಯಿಂದ ಜಯಂತ್ ಕಾಯ್ಕಿಣಿಯವರನ್ನ ಬಿಟ್ಟರೆ ಬೇರೆಯವರನ್ನು ಇಂದು ಹೆಸರಿಸುವುದು ತುಂಬಾ ಕಷ್ಟ. ಹೀಗಾಗಿ ಡಬ್ಬಿಂಗ್ ಸಂಸ್ಕೃತಿಯಿಂದ  ಕನ್ನಡ ಚಿತ್ರೋದ್ಯಮಕ್ಕೆ ಕೆಟ್ಟದಾಗುವುದಕ್ಕಿಂತ ಒಳ್ಳೆಯದೇ ಹೆಚ್ಚು ಆಗಲಿದೆ. ಒಮ್ಮೆ ಅದನ್ನು ಒಪ್ಪಿಕೊಂಡು ಒಂದು ವರ್ಷ ಇಲ್ಲವೇ ಕೆಲವು ತಿಂಗಳು ಕಾಲ ಡಬ್ಬಿಂಗ್ ಮಾಡಿ ನೋಡಿ, ಜನರಿಂದ ಬಂದ ಅಭಿಪ್ರಾಯದ ಮೇಲೆ ಬೇಕು,ಬೇಡವೊ ಅನ್ನುವುದನ್ನು ನಿರ್ಧಾರ ಮಾಡಿದರೆ ಉದ್ಯಮಕ್ಕೆ ಒಳಿತು. ಹಾಗಾಗಿ ಮೊದಲು ಡಬ್ಬಿಂಗನ್ನು ವಿರೋಧಿಸುವವರು, ಡಬ್ಬಿಂಗ್ ಆದರೆ ಉದ್ಯಮಕ್ಕೆ ಏಷ್ಟು ಉಪಯೋಗ ಅನ್ನುವುದನ್ನು ಮೊದಲು ಚಿಂತಿಸಬೇಕು. ಅಪ್ಪ ಹಾಕಿದ ಆಲದ ಮರ ಅಂತ ಅದಕ್ಕೆ ಜೋತು ಬೀಳುವುದಕ್ಕಿಂತ, ಆಲದ ಮರವನ್ನು ಕಡಿಯದೇ ಹೇಗೆ ಉಳಿಸಿಕೊಂಡು ಹೋಗಬೇಕು ಅನ್ನುವುದನ್ನು ಮೊದಲು ಅರ್ಥಮಾಡಿಕೊಂಡರೆ ಸಾಕು. ಏನಂತೀರಿ.
1 comment:

  1. EE samasye Bari karnatakadalla, idhu European deshagallalu kannabahudu. 1930 ralle Italian sarvadikari Mussolini english bashegala prabhava thadeyalu, yella cinemagalanu italian basheyalii Dub madalu ajne horadishida.Namge cinemagaligintha, NGC, Discovery,science channel,history channelgala, programmegalu kannadake Dub aagbeku, idharinda namma grameena makkalige namma kannada news channelgalu thorisava Devva Bhootha, pralaya dantha moodakathegalindha mukthi dorakhi , gnana dorayathade.

    ReplyDelete