Monday, 27 February 2012

ಎಸ್. ಮಹೇಂದರ್ ಸದಾ ನೆನಪಿಸಿಕೊಳ್ಳುವ ಮೂರು ವ್ಯಕ್ತಿಗಳು...!


(ಮಹೇಂದರ್ ಎರಡನೇ ಮದುವೆಯಾದಾಗಿನಿಂದ ಅವರನ್ನು ಬೆಂಬಿಡದೇ ಭೇಟಿ ಮಾಡಲು ಫಾಲ್ಅಪ್ ಮಾಡಿಕೊಂಡು ಬಂದಿದ್ದ ಲೇಖಕ ಕಗ್ಗರೆ ಪ್ರಕಾಶ್ ರವರು ಮಹೇಂದರ್ರವರನ್ನು ಭೇಟಿ ಮಾಡುವ ದಿನವನ್ನು ನಿಕ್ಕಿ ಮಾಡಿಕೊಂಡಿದ್ದರು. `ಸರ್..ನೀವು ಹೋಗುವಾಗ ನನ್ನನ್ನು ಕರೆದುಕೊಂಡು ಹೋಗಲೇಬೇಕು, ನಾನು ಮಹೇಂದರ್ರವರನ್ನು ಮಾತನಾಡಿಸಬೇಕು 'ಅಂತ ಪ್ರಕಾಶ್ರವರಿಗೆ ಕೇಳಿಕೊಂಡಿದ್ದೆ. ಭಾನುವಾರ, ನಾಗರಭಾವಿಯ ಅವರ ಮನೆಗೆ ನಾನು ಮತ್ತು ಕಗ್ಗರೆ ಪ್ರಕಾಶ್ರವರು ಹೋದಾಗ, ನಮಗೆ ಕಂಡಿದ್ದು ಅದೇ ಅವರ ನೈಜ ಆಸ್ತಿಗಳಾದ  ವಿನಯವಂತಿಕೆ ಹಾಗೂ ಮೃದುಮಾತುಗಳು. ಅವರ ಶುಭವಿವಾಹಕ್ಕೆ ಉಡುಗೊರೆಯಾಗಿ `ಕಲಾವಿದರ ಕಥಾನಕ' ಹೊತ್ತಿಗೆಯನ್ನು  ನೀಡಿದೆವು. ಮಹೇಂದರ್ ಮದುವೆಯ ಸಿಹಿಯನ್ನು ನೀಡುವುದರ ಜೊತೆಗೆ, ಅವರಲ್ಲಿದ್ದ ಒಡಲಾಳದ ಮಾತುಗಳನ್ನು ಸುಧೀರ್ಘವಾಗಿ ನಮ್ಮೊಂದಿಗೆ ಹಂಚಿಕೊಂಡರುನಾಗರಭಾವಿಯ  ಪ್ರಶಾಂತವಾದ ಅವರ ಮನೆಯಲ್ಲಿ ಮಾತುಕತೆ ತುಂಬಾ ಸಾಂಗವಾಗಿ ಸಾಗಿತ್ತು. ಮಾತುಕತೆಯ ಕೆಲವು ಅಂಶಗಳನ್ನು  ಮಾತ್ರ ಇಲ್ಲಿ ದಾಖಲಿಸುವ  ಒಂದು ಸಣ್ಣ ಪ್ರಯತ್ನಮಾಧ್ಯಮದವರ ಜೊತೆ ನಡೆಸಿದ ಮೊದಲ ಮಾತುಕತೆ)


ಎಸ್ ಮಹೇಂದರ್ ಕನ್ನಡ ಚಿತ್ರೋದ್ಯಮದ ಸರಳ, ಸಜ್ಜನ, ಸಹೃದಯಿ, ಮಗು ಮನಸ್ಸಿನ ಸಂವೇದನಾಶೀಲ  ನಿರ್ದೇಶಕ. ಮಹೇಂದರ್ ಎರಡನೇ ಮದುವೆಯಾಗಿ  ತಮ್ಮ ಬಾಳಿನ ಹೊಸ ಇನ್ನಿಂಗ್ಸನ್ನು ಪ್ರಾರಂಭಿಸಿದ್ದಾರೆ. ಕಳೆದು ಹೋದ ಕೆಟ್ಟ ಘಟನೆಗಳ ಮೂಟೆಯನ್ನು ಎಸೆದು, ಈಗ ಹೊಸ ದಿಕ್ಕಿನತ್ತ ಸಾಗುತ್ತಿದ್ದಾರೆ. ಈಗೇನಿದ್ದರೂ ಹೊಸ ವಿಷಯಗಳು, ಮಾತುಗಳು, ಮುಂದಿನ ಯೋಜನೆಗಳು, ತಮ್ಮೂರು ಬಂಡಳ್ಳಿ-ಚಾಮರಾಜನಗರ -ಬೆಂಗಳೂರು ನಡುವೆ ಓಡಾಟ, ಹೊಸ ಮನೆ, ಪ್ರಶಾಂತವಾದ ನಾಗರಭಾವಿ ಏರಿಯಾ, ತಲೆಯ ತುಂಬಾ ಹೊಸ ಕನಸುಗಳು, ಕಥೆಗಳು, ಕನ್ನಡಕ್ಕೆ ಹೊಸತನ್ನು ತಮ್ಮ ಸಿನಿಮಾಗಳ ಮೂಲಕ ಹೇಳಬೇಕೆಂಬ ತುಡಿತ ಎಲ್ಲವೂ ಅವರ ಮನಸ್ಸಿನ ಮನೆಯಲ್ಲಿ ಮೂಲೆ ಮಾಡಿದೆ.


ಮಹೇಂದರ್ ಈಗಿನ ಮನಸ್ಥಿತಿಯಲ್ಲಿ ಖುಷಿಯಾಗಿದ್ದಾರೆ. ಕಳೆದ ಹೋದ ಜೀವನವನ್ನು ನೆನಪಿಸಿಕೊಂಡು ಒಂದು ಕ್ಷಣ ಮೌನವಾಗುತ್ತಾರೆ. ಇದರ ನಡುವೆ ಬದುಕು ಕಲಿಸಿದ ಪಾಠ, ನೋವು, ಒಡಲಾಳದ ಮಾತುಗಳು ಅವರ ಆಂತರ್ಯವನ್ನು ಇನ್ನಷ್ಟು ಗಟ್ಟಿಮಾಡಿದೆ.  ಎರಡನೇ ಮದುವೆಯ ಬಗ್ಗೆ ಮಾಧ್ಯಮದವರ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಎಲ್ಲೆಡೆಯಿಂದ ಮಹೇಂದರ್ರವರಿಗೆ ಹೃತ್ಪೂರ್ವಕ ಅಭಿನಂದನೆಗಳ ಮಹಾಪೂರ ಹರಿದುಬಂದುದನ್ನು ನೋಡಿ, ಕುಟುಂಬದ ಒತ್ತಡದಿಂದ ಆದ ಮದುವೆಯ ನಿರ್ಧಾರ  ಸರಿ ಅಂತ ಅವರಿಗೆ ಅನಿಸಿದೆ. ಹೊಸ ಬದುಕಿನಿಂದ ಅವರ ಮನಸ್ಸು ಇನ್ನಷ್ಟು ಹಗುರವಾಗಿದೆ. ಕೋರ್ಟ್ ನಲ್ಲಿ ಶೃತಿ ಜೊತೆಗಿನ ಡಿವೋರ್ಸ್  ಪ್ರಕರಣ ಸುಖಾಂತ್ಯದಲ್ಲಿ ಕಂಡಿದ್ದರೂ ಮಾಧ್ಯಮಗಳು ಸೃಷ್ಟಿಸಿದ /ಬರೆದ ಸುಳ್ಳು ವರದಿಗಳು ಅವರನ್ನು ಮನಸ್ಸಿಗೆ ಬೇಸರ ಮೂಡಿಸಿವೆ.  ಇದೆಲ್ಲದರ ಅರಿವು ಮಹೇಂದರ್ಗಿದೆ.  ಹಾಗಾಗಿ  ಮುಂದಿನ ನಡೆಗಳು,  ನಿರ್ಧಾರಗಳ ಬಗ್ಗೆ ಸಂಪೂರ್ಣ ಜ್ಞಾನವಿದೆ. ಅದನ್ನು ಸಮರ್ಥವಾಗಿ ನಿಭಾಯಿಸಬಲ್ಲೇ ಎಂಬ ಆತ್ಮವಿಶ್ವಾಸ ಅವರದ್ದು.  

 


ಹತ್ತು ಮುಖಗಳ ಮುಗ್ಧ ಮನಸು...
ಈ ಎಲ್ಲ ವಿಷಯಗಳ ಮಾತುಕತೆಯ ನಡುವೆ, ಅವರ ಬಾಲ್ಯದ ಜೀವನವನ್ನು ಒಮ್ಮೇ ನೆನಪಿಸಿಕೊಳ್ಳುತ್ತಾರೆ. ಮೂರನೇ ಕ್ಲಾಸ್ನಲ್ಲಿರುವಾಗಲೇ  ಶಾಲೆಯನ್ನು  ಬಿಡುವ ಪರಿಸ್ಥಿತಿ ಒದಗಿದ್ದು, ಊರ ಹೊರಗಿನ ಬಂಡೆಯ ಮೇಲೆ ಕುಳಿತು ಆಗಸದಲ್ಲಿ ಹಾರುತ್ತಿದ್ದ ವಿಮಾನ ಯಾವಾಗ ಕೆಳಗೆ ಬೀಳುತ್ತದೆ. ಬಿದ್ದ ಮೇಲೆ ನಾನು ವಿಮಾನದಲ್ಲಿದ್ದವರಿಗೆ ಸಹಾಯ ಮಾಡಿದರೆ, ಅವರು ನನ್ನನ್ನು ಅವರ ದೇಶಕ್ಕೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎನ್ನುವ ಭ್ರಮೆ. ವಿಮಾನು ನೆಲಕ್ಕೆ ಬಿದ್ದ ಮೇಲೆ ಅಲ್ಲಿದ್ದ ಜನರೆಲ್ಲಾ ಸತ್ತು ಹೋಗುತ್ತಾರೆ ಎನ್ನುವ ಪರಿಜ್ಞಾನ ಇರದ ಮುಗ್ಧ ಮನಸ್ಸು ನನ್ನದಾಗಿತ್ತು. ಈ ತರಹದ ಹಚ್ಚು ಕನಸಿನ ಹುಡುಗ ಚಾಮರಾಜನಗದ ಬಂಡಳ್ಳಿ ಎಂಬ ಪುಟ್ಟ ಊರಿನಿಂದ ಬೆಂಗಳೂರಿಗೆ ಬಂದು 30 ಸಿನಿಮಾಗಳನ್ನು ನಿರ್ದೇಶನ 
ಮಾಡುತ್ತಾನೆ ಅಂದರೆ ಅದನ್ನು ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಾಗುವುದಿಲ್ಲ. ಎಲ್ಲವೂ ವಿಧಿಲಿಖಿತ ಅಂತ ಹೇಳಿದರೂ, ಪಟ್ಟ ಶ್ರಮ, ನೋವು, ಅವಮಾನ ಎಲ್ಲವೂ ನನ್ನ ಕಷ್ಟಗಳನ್ನು ಮೆಟ್ಟಿ ನಿಂತು ಇಂತಹ ಸಾಧನೆಯನ್ನು ಮಾಡಲಿಕ್ಕಾಯಿತು ಅಂತ ನೆನೆಯುತ್ತಾರೆ. ತಮ್ಮ ಮೊದಲ ಇನ್ನಿಂಗ್ಸ್ನಲ್ಲಾದ ಕೆಟ್ಟ ಘಳಿಗೆಯ ಬಗ್ಗೆ ಮಹೇಂದರ್ ಒಂದೇ ಮಾತಿನಲ್ಲಿ ಹೇಳುವುದು ಹೀಗೆ 'ಈ ಹಿಂದಿನ ನೆನಪುಗಳು ಹಾಳಾಗಲಿ, ನನ್ನ ಆ ಜನ್ಮವನ್ನೇ ನಾನು ಮರೆತುಬಿಟ್ಟಿದ್ದೇನೆ.  ಈಗ ನನ್ನ ಕಣ್ಣಿಗೆ ಕಾಣುತ್ತಿರುವುದು ಹೊಸ ಪ್ರಪಂಚ. ಈ ಹೊಸ ಪ್ರಪಂಚದಲ್ಲಿ ನನ್ನ ಕನಸುಗಳನ್ನು ಸಾಕಾರಮಾಡಿಕೊಳ್ಳುವ ನಿಟ್ಟಿನಲ್ಲಿ ನಾನು ಸಾಗುತ್ತಿದ್ದೇನೆ ಅಷ್ಟೇ..!'  
ಮೂರು ಮುತ್ತುಗಳು

ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಮೂರು ಮುಖ್ಯ ವ್ಯಕ್ತಿಗಳನ್ನು ನಾನು ಸದಾ ನೆನಪಿಸಿಕೊಳ್ಳುತ್ತೇನೆ. ಅವರ ಜೊತೆ ಮಾತನಾಡಿದ್ದೇನೆ, ಅವರ ಮಾತುಗಳೇ ನನ್ನನ್ನು ಇಷ್ಟು ಗಟ್ಟಿಯನ್ನಾಗಿ, ಆದರ್ಶ ಸ್ವರೂಪನನ್ನಾಗಿ ಮಾಡಿದ್ದು. ಅವರಲ್ಲಿ ಮೊದಲನೆಯವರು ಇಳಿಯರಾಜಾ.  ನಮಗೆಲ್ಲಾ ಗೊತ್ತು ಇಳಿಯರಾಜಾ ಎಂತಹ ಮಹಾನ್ ವ್ಯಕ್ತಿ. ಜೀವನದಲ್ಲಿ ಏಷ್ಟು ಕಷ್ಟ ಅನುಭವಿಸಿದ್ದಾರೆ, ಜಾತೀಯತೆ ಎಂಬ ಕೀಳರಿಮೆಯಲ್ಲಿ ನೋವುಂಡು ಆಗಸದಷ್ಟು ಸಾಧನೆಯನ್ನು ಮಾಡಿದವರು. ಅವರು ಇಂದು ಹಿಮಾಲಯದಷ್ಟು ಎತ್ತರ ಬೆಳೆದಿದ್ದರೂ, ತಮ್ಮ ಬಗ್ಗೆ ಮಾತನಾಡುವುದು ತುಂಬಾ ಕಡಿಮೆ. ಅವರ ಸ್ಥಾನದಲ್ಲಿ ಬೇರೆ ಯಾರಿದ್ದರೂ ಏಷ್ಟು ಮಾತನಾಡುತ್ತಿದ್ದರೋ.. ತಮ್ಮ ಬಗ್ಗೆ ಏಷ್ಟು ಹೊಗಳಿಸಿಕೊಳ್ಳುತ್ತಿದ್ದರೊ...! ಆದರೆ ಇಳಿಯರಾಜಾ ಇದಾವುದನ್ನು ನಿರೀಕ್ಷಿಸದಷ್ಟು ಎತ್ತರಕ್ಕೆ ಬೆಳೆದುನಿಂತಿದ್ದಾರೆ. ಅವರ ಜೀವನದ ಬಗ್ಗೆ, ಅವರ ಸಾಧನೆ, ಕನಸಿನ ಬಗ್ಗೆ ನಾನು ಕೇಳಿದ ಪ್ರಶ್ನೆಗೆ ಒಂದೇ ಮಾತಿನಲ್ಲಿ ಉತ್ತರಿಸಿದ್ದು ಹೀಗೆ `ನನಗೊಂದು ಕನಸಿತ್ತು, ಅದು ಸಂಗೀತವನ್ನು ಅಗ್ರಹಾರದಿಂದ ನಮ್ ಏರಿಯಾಗೆ ತರೋ ಕನಸು, ಕನಸನ್ನ ನಾನು ನನಸು ಮಾಡಿಕೊಂಡಿದ್ದೇನೆ'  ಇವರು ಹೇಳುವ ಒಂದೇ ಮಾತನ್ನು ಇಟ್ಟುಕೊಂಡೇ ನಾವು ವಾರ-ತಿಂಗಳುಗಟ್ಟಲೇ ಚರ್ಚೆ ಮಾಡಬಹುದು. ಹಾಗಿತ್ತು ಅವರ ಬದುಕು, ಸಾಧನೆ, ಕನಸು...! 
ಎರಡನೆಯಯವರು ಸುಭಾಷ್ ಘೈ. ಒಂದು ಟೈಮಲ್ಲಿ  ಸುಭಾಷ್ ಘೈರ ಎಲ್ಲ ಸಿನಿಮಾಗಳು ಫ್ಲಾಪ್ ಆಗಿ `ಘೈ ಬೀದಿಗೆ ಬಂದಿದ್ದಾನೆ, ದಿವಾಳಿಯಾಗಿದ್ದಾನೆ' ಅಂತ ಇಡೀ ಬಾಲಿವುಡ್ನಲ್ಲಿ ಸುದ್ದಿ ಹಬ್ಬಿತ್ತು. ಅಂತಹ ಸಂದರ್ಭದಲ್ಲಿ ಸುಭಾಷ್ ಘೈ ಒಂದು ಮಾತು ಹೇಳುತ್ತಾರೆ. `ಸುಭಾಷ್ ಘೈ ಬಾಂಬೆಗೆ ಬಂದಾಗ ಆತನ ಜೇಬಿನಲ್ಲಿ  ಇದ್ದದ್ದು 
 ಕೇವಲ 137 ರೂಪಾಯಿ...  ಅಂತಹ ಸುಭಾಷ್ ಘೈ  ಹಂತಹಂತವಾಗಿ ಬೆಳೆದು ಇಂದು ಬಾಲಿವುಡ್ನಲ್ಲಿ ಹುಬ್ಬೇರಿಸುವಂತ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾನೆನಿರ್ದೇಶನ  ಮಾಡಿದ್ದಾನೆ. ಇಂದು ನಾನು ಸೋತಿರಬಹುದು. ಆದರೆ `ಸುಭಾಷ್ ಘೈ' ಅನ್ನುವ ಹೆಸರಿಗೆ ಬೆಲೆ ಕಟ್ಟಲಿಕ್ಕೆ ಆಗುತ್ತಾ...? ಕಟ್ಟುವವರು ಇದ್ದರೆ ಹೇಳಿ... ಯಾವಾಗ ನನ್ನ ಹೆಸರಿನ ಬೆಲೆ 137 ರೂಪಾಯಿಗಳಿಗಿಂತ ಕಡಿಮೆಯಾಗುತ್ತೋ, ದಿನವೇ ನಾನು ಬೀದಿಗೆ ಬಂದ ದಿನ'' ಅಂತ ಸುಭಾಷ್ ಹೇಳಿದ್ದರು ಎಂತಹ ಅದ್ಭುತ ಮಾತುಗಳು ಅಲ್ವಾ..?

ಅದೇ ರೀತಿ ಮೂರನೇಯ ವ್ಯಕ್ತಿ ನನ್ನ ಆತ್ಮೀಯರು ದೇವನೂರು ಮಹಾದೇವ್. ಅವ್ರು ಒಂದು ಮಾತಂತೂ ನನಗೆ ಸದಾ ಹೇಳುತ್ತಿದ್ದರು. `ಮಹೇಂದರ್ ನಾವು ನೀವು ಎಲ್ಲಾ ಬಂಡೆ ಮೇಲೆ ಹುಟ್ಟಿದವರು... ಬಂಡೆ ಮೇಲೆಯೇ ಚಿಗುರೊಡಿದಿದ್ದೇವೆ. ನಮ್ಮ ಬೇರುಗಳಿಗೆ ನೀರು ಬೇಕಾದರೆ,  ನಾವು ಬಂಡೆಯನ್ನು ಸೀಳಿ ನೀರು ಕುಡಿಯಬೇಕೇ ವಿನಹ ನೀರನ್ನು ಹುಡುಕಿಕೊಂಡು ಹೋಗಬಾರದು. ಇದೇ ನಮ್ಮ ಜೀವನ. ಹುಟ್ಟಿದ್ದೇವೆ. ಬದುಕಿ ಸಾಧಿಸಿ ತೋರಿಸಲೇಬೇಕು'
ಮೂವರು ಹೇಳಿದ ಮಾತುಗಳು ನನ್ನನ್ನು  ಸದಾ ಕಾಡುತ್ತವೆ. ಆತ್ಮಸೈರ್ಯವನ್ನು ತುಂಬುತ್ತವೆ. ಹಾಗಾಗಿ ನನ್ನ ವ್ಯಕ್ತಿತ್ವ ಇವರಿಂದಲೇ ಗಟ್ಟಿಯಾಗುತ್ತಿದೆ. ಮುಂದಿನ ದಿನಗಳನ್ನು ಸುಂದರವಾಗಿ ಕಳೆಯಬೇಕು ಅನ್ನುವ ಪ್ರೀತಿ ಅವರದ್ದು

ಎಲ್ರೂ ನನಗೆ ಸರ್ ಎನ್ನಲೇಬೇಕು
`ನನಗೆ ಚಿಕ್ಕವಾಗಿನಿಂದಲೂ ಒಂದು ಕನಸಿತ್ತು. ಆಸೆಯಿತ್ತು. ಎಲ್ಲರೂ ನನ್ನನ್ನು `ಸರ್' ಅಂತ ಕರಿಯಲೇಬೇಕು ಅಂತ. ಹಾಗಾಗಿ ಎಲ್ಲ ಸ್ನೇಹಿತರು ನನ್ನನ್ನು `ಸರ್' ಅಂತಲೇ ಕರೆಯುತ್ತಿದ್ದರು. ಇದು ನಮ್ಮ ಟೀಚರ್ಗೆ ಹೇಗೋ ಗೊತ್ತಾಗಿ ಬಿಟ್ಟಿದೆ. ಹೀಗೆ ಕ್ಲಾಸ್ನಲ್ಲಿ ಇರುವಾಗ ನಮ್ಮ ಟೀಚರ್ ನನ್ನನ್ನು ಎಬ್ಬಿಸಿ ಕೇಳಿದರು 
`ಏನೋ, ನಿನ್ನನ್ನು ಎಲ್ಲರೂ ಸರ್ ಅಂತ ಕರೆಯಬೇಕಂತೆ ಹೌದಾ...?' 
ಅದಕ್ಕೆ ನಾನು ಎದ್ದು ನಿಂತು ಧೈರ್ಯವಾಗಿ `ಹೌದು ಸರ್.' ಎಂದೆ. ನಮ್ಮ ಟೀಚರ್ಗೆ ಆಶ್ಚರ್ಯ..! 
`ಅದ್ಯಾಕೆ ನಿನ್ನನ್ನು ಕರೆಯಬೇಕು' ಅಂತ ಪ್ರಶ್ನೆ ಮಾಡಿದರು. `ನನ್ನ ಹತ್ತಿರ ಉತ್ತರ ಸಿದ್ಧವಿತ್ತು.  
`ನಾನು ದೊಡ್ಡವನಾದ ಮೇಲೆ ಜನಪ್ರಿಯ ವ್ಯಕ್ತಿಯಾಗುತ್ತೇನೆ. ದೊಡ್ಡ ಹಸರು ಮಾಡುತ್ತೇನೆ. ಆಗ ಎಲ್ಲರೂ ನನ್ನನ್ನು ಸರ್ ಅಂತ ಕರೆಯುತ್ತಾರೆ. ಹಾಗಾಗಿ ಈವಾಗಿನಿಂದಲೇ ಅವರು ನನ್ನನ್ನು ಸರ್ ಅಂತ ಕರೆಯಬೇಕು ಎನ್ನುವ ಆಸೆ ನನ್ನದು ಎಂದೆ'. ಗುರುಗಳಿಗೆ ನನ್ನ ಮಾತುಗಳನ್ನು ಕೇಳಿ ಆಶ್ಚರ್ಯ..!
ಶಾಲೆಯಲ್ಲಿ ಘಟನೆಯಾಗಿ ಅನೇಕ ವರ್ಷಗಳಾದ ಮೇಲೆ ನಾನು ಸಿನಿಮಾ ಉದ್ಯಮದಲ್ಲಿ ಹೆಸರು ಮಾಡಿದ ಮೇಲೆ ನನಗೆ ಕಲಿಸಿದ ಗುರುಗಳು   ಘಟನೆಯನ್ನು ನೆನಪಿಸಿಕೊಂಡು ಖುಷಿಪಟ್ಟರು. ಈಗಲೂ ಸಿಗುತ್ತಾರೆ ಹಳೆಯ ಮಹೇಂದರ್ನನ್ನು  ನೆನಪಿಸುತ್ತಾರೆ. ನಾನೆಂದರೆ ಅವರಿಗೆ ವಿಪರೀತ ಪ್ರೀತಿ, ಅಷ್ಟೇ ಆತ್ಮೀಯತೆ. ಚಿಕ್ಕವಾಗಿನಿದ್ದಾಗಲೇ ನನಗೆ ನನ್ನ ಮೇಲೆ ಅಷ್ಟು ಆತ್ಮವಿಶ್ವಾಸವಿತ್ತು. ನಾನು ಗೆಲ್ಲುತ್ತೇನೆ. ದೊಡ್ಡ  ವ್ಯಕ್ತಿಯಾಗುತ್ತೇನೆ ಅಂತ.  

ಇಬ್ಬರೇ ಫ್ರೆಂಡ್ಸ್ ನನಗೆ
ಇಂದಿಗೂ ನನ್ನನ್ನು ಎಲ್ಲರೂ ಸರ್ ಅಂತ ಕರೆಯುತ್ತಾರೆ. ಅದರಲ್ಲಿ ಹೋಗೋ/ಬಾರೋ ಅಂತ ನನ್ನನ್ನು ಏಕವಚನದಲ್ಲಿ ಮಾತನಾಡಿಸುವವರು  ಇಬ್ಬರೇ ವ್ಯಕ್ತಿಗಳಿದ್ದಾರೆ. ಇಬ್ಬರೂ ನನ್ನ ಆತ್ಮೀಯ ಸ್ನೇಹಿತರು. ಮೊದಲನೆಯವ ಡಾ.ಮನು ಅಂತ, ಅವರು ಮೈಸೂರಿನಲ್ಲಿದ್ದಾರೆ. ಇನ್ನೊಬ್ಬರು ಶಿವಮಲ್ಲು ಅಂತ. ಈತ ಇಲ್ಲೇ ಕೆಎಸ್ಆರ್ಟಿಸಿಯಲ್ಲಿ ಚೆಕ್ಕಿಂಗ್ ಇನ್ಸ್ಪೆಕ್ಟರ್ ಆಗಿದ್ದಾರೆ. ಶಿವಮಲ್ಲು, ನಾನು ರೂಮ್ಮೇಟ್ಸ್. ಆತ ಸುಮಾರು 7 ವರ್ಷದವರೆಗೆ ನನ್ನ ಬಟ್ಟೆಗಳನ್ನು ಒಗೆದು ಇಸ್ತ್ರೀ ಮಾಡಿ ಕೊಟ್ಟಿದ್ದ.   ನಿನ್ನ ಕೈ ತುಂಬಾ ಸ್ಮೂತ್ ಆಗಿದೆ ಕಣೋ.. ಬಟ್ಟೆ ಒಗೆಯೋಕೆ ಆಗೋಲ್ಲ  ಅಂತ ಹೇಳಿ ನಾನು ಬೇಡವೆಂದರೂ ನನ್ನ ಬಟ್ಟೆಗಳನ್ನು ಕಿತ್ತುಕೊಂಡು ಕ್ಲೀನ್ ಮಾಡಿಕೊಡುತ್ತಿದ್ದ. ಅಂತಹ ಅಪರೂಪದ ಸ್ನೇಹಿತ ಆತ. ಅಷ್ಟು ಸಲುಗೆ ಅವರಿಬ್ಬರಲ್ಲಿ ಇಂದಿಗೂ ಇದೆ

ಪೇಟಿಂಗ್ ಬಿಟ್ಟಿದ್ದು.
ಹೆಚ್ಚಿನವರಿಗೆ ಒಂದು ವಿಷಯ ಗೊತ್ತಿಲ್ಲ. ನಾನು ಒಬ್ಬ ಅದ್ಭುತ ಪೇಂಟರ್ ಅಂತ. ಇದು ನಾನು ಚಿಕ್ಕವನಾಗಿನಿಂದಲೂ ನನಗೆ ಬಂದ ಬಳುವಳಿ. ಅದು ಹೇಗೆ ಬಂತು ಎಂಬುದು ನನಗೆ ಗೊತ್ತಿಲ್ಲ. ನಾನೊಬ್ಬ ಅದ್ಭುತ ಪೇಂಟರ್ ಆಗಬೇಕೆಂಬ ಆಸೆ ಇತ್ತು. ಆದರೆ ನನ್ನ ಜೀವನದಲ್ಲಿ `ತಾನೊಂದು ಬಗೆದರೆ, ದೈವ ಇನ್ನೊಂದು ರೀತಿಯಲ್ಲಿ ಬಗೆದಿತ್ತು'. ನನಗೆ ಇಂದಿಗೂ ಅರ್ಥವಾಗುತ್ತಿಲ್ಲ. ನಾನು ಯಾವಾಗ ಪೇಂಟ್, ಬ್ರಶ್ಶು ಹಿಡಿದುಕೊಂಡು ಹೋಗುತ್ತಿದ್ದೇನೋ ಅಲ್ಲೆಲ್ಲಾ ಒಂದಿಲ್ಲೊಂದು ಪ್ರಾಬ್ಲೆಂಗಳು ನನ್ನನ್ನ ಸುತ್ತಿಹಾಕಿಕೊಳ್ಳುತ್ತಿದ್ದವು. ಇದು ಅನೇಕ ಸಾರಿ ಆಯಿತು. ನನಗಂತೂ ಇದು ಸರಿ ಕಾಣಲೇ ಇಲ್ಲ. ಯಾಕೆ ಹೀಗೆ ಆಗುತ್ತದೆ ಅನ್ನುವುದು ಕೂಡ ನನಗೆ ಅರ್ಥವಾಗಲಿಲ್ಲ. ಕೊನೆಗೆ ಪೇಟಿಂಗ್ ಬಿಟ್ಟು ಸಿನಿಮಾ ಕಡೆ ಹೋಗುವ ಪ್ರಸಂಗ ಎದುರಾಯಿತು. ಕುಂಚದಲ್ಲಿ ಮಾಡದ ಸಾಧನೆಯನ್ನು ಬಣ್ಣದ ಪರದೆಯ ಮೇಲೆ ಮಾಡುವ ಸಂದರ್ಭ ನನ್ನ ಜೀವನದಲ್ಲಿ ಒದಗಿತು. ಜೀವನ ತಿರುವು ಪಡೆದುಕೊಂಡಿದ್ದೆ ಆಗ


 ಯಶೋಧಾ ಅವರ ನೂತನ ಬಾಳಸಂಗಾತಿ


ಮಹೇಂದರ್, ಫೆಬ್ರುವರಿ 3 ರಂದು ತಮ್ಮ ಸಂಬಂಧಿಕರ ಮಗಳು ಹಾಗೂ ತಮ್ಮ ನೋವು-ನಲಿವು, ಏಳುಬೀಳುಗಳನ್ನು ಬಾಲ್ಯದಿಂದಲೂ ಬಲ್ಲ ಹುಡುಗಿಯನ್ನು ನೂತನ ಬಾಳಸಂಗಾತಿಯನ್ನಾಗಿ ವರಿಸಿದರು. ಅವರ ಹೆಸರು ಯಶೋಧಾ.  ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಮ್ಎ ಅರ್ಥಶಾಸ್ತ್ರದಲ್ಲಿ ಸ್ನಾತಕೊತ್ತರ ಪದವಿಯನ್ನು ಪಡೆಯುತ್ತಿದ್ದಾರೆ. ಮಹೇಂದರ್ ಬದುಕಿನ ನೂತನ ಅಧ್ಯಾಯದ ಹೊಂಬಿಸಲಾಗಿದ್ದಾರೆ.  

ಮಹೇಂದರ್ರವರ ಶುಭವಿವಾಹಕ್ಕೆ ಸನ್ಮಾನ್ಯಗಳು ಸಿಗಲಿ,ಅವರ ಎಲ್ಲ ಕನಸುಗಳು ನನಸಾಗಲಿ ಎಂಬುದು ನಮ್ಮ ಶುಭಹಾರೈಕೆ




3 comments:

  1. ತುಂಬಾ ಒಳ್ಳೆ ಲೇಖನ ಶ್ರೀಧರ್ .. !! ಹೀಗೆ ಬೇರೆ ಬೇರೆ ವ್ಯಕ್ತಿಗಳ ಬಗ್ಗೆ ಪರಿಚಯಿಸಿ ನಿಮ್ಮ ಓದುಗರಿಗೆ

    ReplyDelete
  2. ಶ್ರೀಧರ್ ಈ ಬರವಣಿಗೆ ತುಂಬಾ ಚೆನ್ನಾಗಿದೆ. ಮುಂದುವರೆಸಿ...

    ReplyDelete
  3. tumba thanx sir nimma abhiprayakke...

    ReplyDelete