Thursday, 15 March 2018

ವಿಭಿನ್ನ ಅನುಭವಧಾರೆಯ ಕಾದಂಬರಿ `ಚಿರಸ್ಮಿತ'

ಸದಾ ನಗುಮುಖ, ಆಪ್ತತೆಯಿಂದ ಎಲ್ಲರಿಗೂ ಇಷ್ಟವಾಗುವ ನಮ್ಮ ನಾಡಿನ ಜನಪ್ರಿಯ ಲೇಖಕರು ಆದಂತಹ ಯತಿರಾಜ್ ವೀರಾಂಬುಧಿ ಅವರ ಕಾದಂಬರಿ 'ಚಿರಸ್ಮಿತ' ಕೃತಿಯನ್ನು‌ಓದಿ ಆ ಕೃತಿಯನ್ನು‌ಮೆಚ್ಚಿ ನನ್ನ ಮಾತುಗಳನ್ನು ಈ ಮೂಲಕ‌ ಹಂಚಿಕೊಂಡಿದ್ದೇನೆ.
ಕಾದಂಬರಿಯ ವಸ್ತು ಎಲ್ಲರಿಗೂ ಇಷ್ಟವಾಗುವಂತಹದ್ದು. ಅವರ ಸರಳ ನಿರೂಪಣೆಯೇ ಓದಿಸಿಕೊಂಡು‌ ಹೋಗುವಂತಹ‌ ಶಕ್ತಿ ಹೊಂದಿದೆ. ಅವರ ಜ್ಞಾನ, ಬದುಕಿನ‌ ಅನುಭವ ದೊಡ್ಡದು. ಅದು ಕೃತಿಯಲ್ಲಿಯೂ ವ್ಯಕ್ತವಾಗುತ್ತದೆ.

ವಿಭಿನ್ನ ಅನುಭವಧಾರೆಯ ಕಾದಂಬರಿ `ಚಿರಸ್ಮಿತ'
`ಚಿರಸ್ಮಿತ' ಕಾದಂಬರಿ ಇದುವರೆಗೆ ನಾನು ಓದಿರುವ ಕಾದಂಬರಿಗಳಲ್ಲಿ ಅತ್ಯಂತ ವಿಭಿನ್ನ ಅನುಭವ ನೀಡಿದಂತಹ ಕಾದಂಬರಿ ಎಂದು ಬಣ್ಣಿಸುವೆ. ಕಾದಂಬರಿಯ ಆಳಕ್ಕೆ ಹೋಗಿ ಅದನ್ನು ಬಣ್ಣಿಸುವ ಮುನ್ನ, ಕೃತಿಕಾರನ ಮನಸ್ಥಿತಿಯನ್ನು ಆತನ ವ್ಯಕ್ತಿತ್ವವನ್ನು ಮೊದಲು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಯಾವುದೇ ಲೇಖಕರ ಅಂತರಾಳ, ಮನಸ್ಥಿತಿಯ ತಕ್ಕಹಾಗೆ ಅವರ ಭಾವನೆಗಳು ಸ್ಫುರಣೆಗೊಳ್ಳುತ್ತಲೇ ಇರುತ್ತವೆ. ಭಾವನೆಗಳಿಗೆ ತಕ್ಕಹಾಗೆ ಕೃತಿಯ ನೆಲಘಟ್ಟು ರೂಪುಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಕೃತಿಕಾರನ ಅಂತರಾಳವೇ ಸೂಕ್ಷ್ಮ, ನಿಷ್ಕಲ್ಮಶ ಮಮಕಾರದ ಕೊಡದಂತಿದೆ. ಇನ್ನೊಂದು ರೀತಿ ನಮ್ಮ ಆಡುಭಾಷೆಯಲ್ಲಿ ಹೇಳುವುದಾದರೆ ಕೃತಿಕಾರನ ಮನಸ್ಸು ತಾಯಿಕರುಳಿನಂತಿರುವುದರಿಂದ ಸಂವೇದನೆಯನ್ನು ಈ ಕಾದಂಬರಿಯಲ್ಲಿ ಸುಲಭವಾಗಿ ಗುರುತಿಸಬಹುದು.
ಈ ಕಾದಂಬರಿಯನ್ನು ಓದುವುದರ ಜೊತೆಗೆ ನನಗೆ ಕೃತಿಕಾರನ ಅಂತರಾಳವನ್ನು ಹೊಕ್ಕು ನೋಡಿದ ಅನುಭವವಾಯಿತು. ಲೇಖಕರ ಆಂತರಿಕ ಸಂವೇದನೆಯೇ ಈ ರೀತಿ ಇರುವಾಗ ಚಿರಸ್ಮಿತ ಕಾದಂಬರಿಯೂ ಆ ನೆಲೆಗಟ್ಟಿನಲ್ಲಿಯೇ ಬರೆಯುವ ಪ್ರಯತ್ನ ಮಾಡಿರುವುದನ್ನು ಇಲ್ಲಿ ಕಾಣಬಹುದು.
ಬದುಕು ಎಂದ ಮೇಲೆ ಏರಳಿತಗಳ ದಾರಿ, ಕಷ್ಟಸುಖಗಳ ಹಗಲು ರಾತ್ರಿ ಸಹಜ. ಕೃತಿಕಾರನ ಸಾಹಿತ್ಯವೂ ಅದೇ ರೀತಿಯಲ್ಲೇ ರೂಪುಗೊಳ್ಳುತ್ತದೆ. ಸದಾ ಬೇರೆಯವರಿಗೆ ಒಳ್ಳೆಯದನ್ನು ಬಯಸುವ ನಿರ್ಮಲ ಮನಸ್ಸಿದ್ದವರು ಮಾತ್ರ ಚಿರಸ್ಮಿತದಂತಹ ಕಾದಂಬರಿಯನ್ನು ಬರೆಯಬಲ್ಲರು, ಅರ್ಥಮಾಡಿಕೊಳ್ಳಬಲ್ಲರು. ಇಲ್ಲವಾದರೆ ಕೃತಿಯೂ ಸುಖಕ್ಕಿಂತ ಕಷ್ಟದ ವಾಸ್ತವವನ್ನೇ ರಹದಾರಿಯನ್ನಾಗಿಸಿಕೊಂಡು ಓದುಗರ ಚಿಂತನೆಗೆ ಕಾರಣವಾಗುತ್ತದೆ. ಚಿರಸ್ಮಿತದಲ್ಲಿ ಸುಹಾಸಿನಿಯ ಬದುಕು ಕಷ್ಟದ ಮಡಿಕೆಯಲ್ಲಿ ನೊಂದು ಬೆಂದರೂ ಅವಳ ಸುತ್ತಲಿನ ಪ್ರಪಂಚ ಸುಖದ ಉಯ್ಯಾಲೆಯಲ್ಲಿ ತೇಲುತ್ತಲೇ ಹೋಗುತ್ತದೆ. ಒಂದು ಶತಮಾನದ ಕಾಲಘಟ್ಟದಲ್ಲಿ ಬದುಕಿ ಬಾಳಿದ ತಲೆಮಾರನ್ನು ನಿರೂಪಿಸಿರುವ ಲೇಖಕರು ತುಂಬಾ ಆಳಕ್ಕೆ ಹೋಗದೇ ನೇರವಾಗಿ ಕಾದಂಬರಿಯನ್ನು ನಿರೂಪಿಸುವ ಪ್ರಯತ್ನ ಮಾಡಿದ್ದಾರೆ. ಈ ರೀತಿಯ ನಿರೂಪಣೆ ಕೃತಿಕಾರನ ಸ್ವಾಭಾವಿಕ ಬರವಣಿಗೆಯ ಶೈಲಿಯಾಗಿದ್ದರೂ ಆಗಿರಬಹುದು, ಅಥವಾ ಈ ಕಾದಂಬರಿಗೆ ಬಳಸಿರುವ ವಸ್ತುನಿಷ್ಠತೆಯೂ ಇರಬಹುದು. 
`ಚಿರಸ್ಮಿತ' ಅನ್ನುವ ಹೆಸರಿನ ಮರ್ಮ ಕಾದಂಬರಿಯ ಕೊನೆಯ ಅಧ್ಯಾಯಗಳಲ್ಲಿ ಪ್ರಸ್ತಾಪವಾಗುತ್ತಾ, ಅದು ಕೂಡ ಒಂದು ಪಾತ್ರವಾಗಿಬಿಡುತ್ತದೆ. ಈ ಅಂಕಿತನಾಮ ಕಥಾನಾಯಕಿಯ ಅನಾಮಧೇಯ ಹೆಸರಾದರೂ ಅದು ಕೂಡ ಪಾತ್ರವಾಗಿ ಕಂಡಾಗ, ಇಡೀ ಕಾದಂಬರಿಯ ಚಿತ್ರಣವನ್ನು ಅದು ತೆರೆದಿಡುತ್ತದೆ. ನಾಯಕಿಯ ಅಷ್ಟು ವರ್ಷದ ಬದುಕನ್ನು ಚಿರಸ್ಮಿತ ಅನ್ನುವ ಪಾತ್ರ ಜನಪ್ರಿಯಗೊಳಿಸುತ್ತದೆ. ಸುಹಾಸಿನಿಯ ಬದುಕನ್ನು ಓದುತ್ತಾ ಹೋದಂತೆ ಆಕೆಯಲ್ಲಿನ ಸದ್ಗುಣಗಳು ಅವಳ ಬದುಕಿನ ಎಲ್ಲ ಕಷ್ಟಗಳನ್ನು ನುಂಗಿಬಿಡುತ್ತವೆ. ಆದರೂ ಓದುಗರಿಗೆ ಅವಳ ಬದುಕನ್ನು ಕಂಡಾಗ ಕಣ್ಣೀರು ಬರದೇ ಇರದು. ಅವಳ ಜೀವನ ಹೀಗಾಗಬಾರದಿತ್ತು ಅಂತ ಯೋಚನೆ ಮಾಡುತ್ತಲೇ ಹೋದಾಗ ಚಿರಸ್ಮಿತ ಎಂಬ ಲೇಖಕಿಯು ಹುಟ್ಟಿಕೊಳ್ಳಲು ಅದು ಕಾರಣವಾಗುತ್ತದೆ ಅನ್ನುವುದು ಕೊನೆಗೆ ಅರಿವಾಗುತ್ತದೆ.
ಕಾದಂಬರಿಯಲ್ಲಿ ಬರುವ ಸುಹಾಸಿನಿ ಮತ್ತು ಸುಫಲಾ ಎಂಬ ಇಬ್ಬರು ಸ್ನೇಹಿತೆಯರ ಬದುಕು ಒಂದೊಂದು ರೀತಿ ಸಾಗುತ್ತದೆ. ಅವಳ ಬದುಕು ಇವಳಂತೆ; ಇವಳ ಬದುಕು ಅವಳಂತೆ ಆಗದೇ ಸಾಗುತ್ತದೆ. ಆದರೆ ಅವರಿಬ್ಬರ ಸ್ನೇಹ ಮಾತ್ರ ಗಟ್ಟಿಯಾಗಿ ಕೊನೆಯವರೆಗೂ ನಿಲ್ಲುವಂತೆ ಲೇಖಕರು ಮಾಡಿದ್ದಾರೆ. ಇಲ್ಲಿ ಸುಹಾಸಿನಿಯ ಬದುಕನ್ನು ಚಿತ್ರಿಸುವಾಗ ಸುಫಲಾಳ ಬದುಕು ಕೇವಲ ಹೋಲಿಕೆಗೆ ಮಾತ್ರ ಸಿಗುತ್ತದೆ. ಇಡೀ ಕಾದಂಬರಿಯಲ್ಲಿ ಖಳನಾಯಕರು ಎಂದು ಗುರುತಿಸುವುದಾದರೆ ಆರಂಭದಲ್ಲಿ ಸುಹಾಸಿನಿಯ ತಂದೆಯೇ ಆಕೆಗೆ ಕಂಟಕವಾಗಿ ವಿರೋಧಿಸುವವನಾದರೆ, ಮಧ್ಯ ಭಾಗದಲ್ಲಿ ಗಜಾನನನೇ ಇಡೀ ಕಾದಂಬರಿಗೆ ತಿರುವು ನೀಡುತ್ತಾನೆ. ಕಾದಂಬರಿಯ ಆರಂಭದಲ್ಲಿ ಗಜಾನನ ಸಾತ್ವಿಕ ವ್ಯಕ್ತಿಯಂತೆ ಕಂಡರೂ, ಬರುಬರುತ್ತ ಅವನ ಹೋರಾಟದ ಮನೋಭಾವವು ಬದಲಾಗುತ್ತಾ ಆತನ ವ್ಯಕ್ತಿತ್ವದಲ್ಲಿಯೂ ಕೂಡ ಕೆಟ್ಟ ಬದಲಾವಣೆಯಾಗುತ್ತದೆ. ಲೇಖಕರು ಚಿತ್ರಿಸಿರುವ ಆತನ ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದ ವಿಚಾರಗಳು ಅಂದಿನ ಮೂಡ್ಗೆ ಓದುಗರನ್ನು ಕರೆದುಕೊಂಡು ಹೋಗುತ್ತವೆ. ಮಗ ಭಾರತೀಪ್ರಿಯನ ಬದುಕು ಈ ರೀತಿ ಇರಬಾರದಿತ್ತು, ಬೇರೆ ರೀತಿ ಚಿತ್ರಿಸಬಹುದಾಗಿತ್ತು ಅಂತ ಓದುಗನಾದ ನನಗೂ ಅನಿಸಿತು. ಆತನ ದುರಂತ ಅಂತ್ಯ ಸುಹಾಸಿನಿಯ ಬದುಕನ್ನು ಇನ್ನಷ್ಟು ಗಟ್ಟಿಮಾಡುತ್ತದೆ.
ಇಡೀ ಕಾದಂಬರಿಯಲ್ಲಿ ಮೆಚ್ಚುವಂತಹ ವಿಷಯವೆಂದರೆ, ಸುಹಾಸಿನಿಗೆ ಇಲ್ಲಿ ಯಾರೂ ಖಳನಾಯಕಿಯರಿಲ್ಲ. ಕೃತಿಕಾರನ ಮಹಿಳಾಪಾತ್ರಗಳೆಲ್ಲಾ ಉದಾತ್ತ ಗುಣಸ್ವಭಾವದವರೇ ಆಗಿದ್ದಾರೆ. ಹೆಣ್ಣಿಗೆ ಹೆಣ್ಣೆ ಶತ್ರು ಅನ್ನುವ ಮಾತು ಈ ಕಾದಂಬರಿಯಲ್ಲಿ ಕಾಣುವುದೇ ಇಲ್ಲ. ಅವರೊಳಗೆ ಒಬ್ಬ ಫಿಮಿನೆಸ್ಟ್ ಕೂತಿರಬಹುದೇ? ಇದನ್ನು ನನಗೆ ಗ್ರಹಿಸಲು ಆಗಲಿಲ್ಲ. ಒಟ್ಟಾರೆಯ ಕಾದಂಬರಿಯನ್ನು ನಿರೂಪಿಸಿದ ರೀತಿ ನನಗೆ ಹೊಸದಾಗಿ ಕಂಡರೂ ಒಂದು ಕಾಲಘಟ್ಟವನ್ನು ಹೊರವರ್ತುಲದಲ್ಲಿ ಕಾಣುವಂತೆ ಹೇಳುತ್ತಾ ಹೋಗಿರುವುದು ಮುಖ್ಯ ಅಂಶವೆನಿಸಿಕೊಳ್ಳುತ್ತದೆ.
ಗಂಭೀರವಾಗಿ ಆಳವಾಗಿ ತುಂಬಾ ಶಿಷ್ಟಭಾಷೆಯಲ್ಲಿ ಬರೆದಂತಹ ಕಾದಂಬರಿಗಳಿಗೆ ಇದನ್ನು ಹೋಲಿಕೆ ಮಾಡಲಾಗದು. ಕುವೆಂಪು, ಕಾರಂತ, ಭೈರಪ್ಪರಂತಹ ಕಾದಂಬರಿಗಳನ್ನು ಅನಲೈಸ್ ಮಾಡುವವರಿಗೆ ಈ ಕಾದಂಬರಿ ರುಚಿಸದೇನೂ ಇರಬಹುದು. ಆದರೆ ಸಾಮಾನ್ಯ ಓದುಗರಿಗೆ ಇದು ಸ್ಷಪ್ಟವಾಗಿ ಓದಿಸಿಕೊಂಡು ಹೋಗುವಂತಹ ಶಕ್ತತೆಯನ್ನು ಹೊಂದಿದೆ. ಇಡೀ ಕಾದಂಬರಿಯು ಮೈಸೂರು ಪ್ರಾಂತ್ಯವನ್ನು ಒಳಗೊಂಡಂತೆ ಅಲ್ಲಿನ ವೈದಿಕ ಮನೆತನಗಳ ಕಷ್ಟನಷ್ಟಗಳ ಬವಣೆಯನ್ನು ಕೂಡ ಆಂದ್ರವಾಗಿಸುತ್ತದೆ. 80ರ ದಶಕದ ನಂತರ ಹುಟ್ಟಿದಂತಹ ನನ್ನಂತವರಿಗೆ ನಮ್ಮ ತಂದೆತಾಯಿ, ತಾತಮುತ್ತಾತರ ಕಾಲಘಟ್ಟವನ್ನು ಹೇಳುವಾಗ ಇರುವ ಕುತೂಹಲ ಇಲ್ಲಿಯೂ ವ್ಯಕ್ತವಾಗುತ್ತದೆ. ಅರವತ್ತು, ಎಪ್ಪತ್ತು ಮತ್ತು ಎಂಬತ್ತರ ದಶಕಗಳ ಸಿನಿಮಾಗಳನ್ನು ಕಾದಂಬರಿಯ ಓಘಕ್ಕೆ ಪೂರಕವಾಗಿ ಬಳಸಿಕೊಂಡಿರುವುದು ಕೂಡ ಕೃತಿಕಾರನ ಸೃಜನಶೀಲ ವಿಚಾರವೇ!
ಪುಟ 259ರಲ್ಲಿ ಬರುವ ಒಂದು ಶ್ಲೋಕವು (ಪಿತಾ ರಕ್ಷತಿ ಕೌಮಾರೇ|....) ಕೃತಿಕಾರನಿಗೆ ಇಡೀ ಕಾದಂಬರಿಯನ್ನು ಬರೆಯಲು ವೇದಿಕೆಯನ್ನು ನೀಡಿರಬಹುದು, ಪ್ರೇರಣೆಯನ್ನು ನೀಡಿರಬಹುದು ಅನ್ನುವುದು ನನ್ನ ಭಾವನೆ.
ಇಡೀ ಕಾದಂಬರಿ ನೆನಪಿನಲ್ಲಿ ಉಳಿಯುತ್ತದೆ. ಸಾಹಿತ್ಯಿಕ ವಿಮರ್ಶಾತ್ಮಕವಾಗಿ ನೋಡದೇ ಓದುಗನ ಭಾವನೆಗೆ ತಕ್ಕಂತೆ ನನ್ನ ಮಾತುಗಳನ್ನು ಬರೆಯಲಿಕ್ಕೆ ಪ್ರಯತ್ನಿಸಿದ್ದೇನೆ.
ವಂದನೆಗಳು.

Tuesday, 23 January 2018

'ಎಂದಿಗೂ ಸುಗಮ ಸಂಗೀತವು ತನ್ನ ಮನೋಧರ್ಮವನ್ನು ಕಳೆದುಕೊಳ್ಳಬಾರದು'- ಡಾ. ಎಚ್.ಎಸ್. ವೆಂಕಟೇಶಮೂರ್ತಿ

ಕನ್ನಡ ಸುಗಮ ಸಂಗೀತ ಕ್ಷೇತ್ರ ಇಂದು ವಿಪುಲವಾಗಿ ಬೆಳೆದು ಬಹುವಿಸ್ತಾರಗೊಂಡಿದೆ. ಕವಿಗಳ ಭಾವಗೀತೆಗಳನ್ನೇ ಸುಗಮ ಸಂಗೀತಕ್ಕೆ ಒಳಪಡಿಸಿದ ಸಂಯೋಜಕರು, ಗಾಯಕರು ಕನ್ನಡಿಗರಮನೆ-ಮನಗಳಿಗೆ ತಲುಪಿಸಿದ್ದಾರೆ. ಪಿ. ಕಾಳಿಂಗರಾವ್, ಬಾಳಪ್ಪ ಹುಕ್ಕೇರಿ, ಮೈಸೂರು ಅನಂತಸ್ವಾಮಿ, ಡಾ. ಸಿ. ಅಶ್ವಥ್ ಅವರಿಂದ ಹಿಡಿದು ಇವತ್ತಿನ ಯುವ ತಲೆಮಾರಿನ ಸಂಯೋಜಕರು, ಗಾಯಕರವರೆಗೂ ಸುಗಮ ಸಂಗೀತ ಕ್ಷೇತ್ರ ತನ್ನ ಅಸ್ಮಿತೆಯನ್ನು ಉಳಿಸಿಕೊಂಡು ಅನನ್ಯಗೊಂಡಿದೆ. ಸುಗಮ ಸಂಗೀತ ಕ್ಷೇತ್ರ ತನ್ನ ವಿಸ್ತಾರವನ್ನು ಬೆಳೆಸಿಕೊಂಡಂತೆ ಕವಿಗಳು ಅಷ್ಟೇ ಜನಪ್ರಿಯಗೊಂಡರು. ಕನ್ನಡದ ಶ್ರೇಷ್ಠ ಕವಿತೆಗಳು ಸುಗಮ ಸಂಗೀತದ ಮೂಸೆಯಲ್ಲಿ ಸೇರಿಕೊಂಡು ಹೊಸರೂಪ ಪಡೆದುಕೊಂಡವು. ಕವಿತೆಗಳಿಂದ ಸಂಗೀತಕ್ಕೆ ಹೆಚ್ಚು ಕಾವ್ಯಾತ್ಮಕ ಗುಣ ಸೇರಿಕೊಂಡಿತು. ತನ್ನದೇ ಮನೋಧರ್ಮವನ್ನು ಬೆಳೆಸಿಕೊಂಡಿತು. ಹೀಗೆ ಅಸ್ಪಷ್ಟ ರೂಪದಿಂದ ಸ್ಪಷ್ಟರೂಪ ಪಡೆದುಕೊಂಡು ಇಂದು ಸುಗಮ ಸಂಗೀತ ಒಂದು ಪರಂಪರೆಯಾಗಿ ಬೆಳೆದು ನಿಂತಿದೆ. ಕನ್ನಡನಾಡಿನ ಹಿರಿಯ ಕವಿಗಳಾದ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರು ಇಂತಹ ಸುದೀರ್ಘ ಪರಂಪರೆಯ ಸಾಕ್ಷಿಯಾಗಿ ಯುವತಲೆಮಾರಿಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಕಳೆದ ನಾಲ್ಕೈದು ದಶಕಗಳಿಂದ ಸುಗಮ ಸಂಗೀತದ ಬೆಳವಣಿಗೆಯನ್ನು ತುಂಬಾ ಹತ್ತಿರದಿಂದ ಕಂಡಂತಹ ಎಚ್ಎಸ್ವಿ ಈ ಪರಂಪರೆಯನ್ನು ಇಲ್ಲಿ ವಿಸ್ತಾರವಾಗಿ ಬಣ್ಣಿಸಿದ್ದಾರೆ. ಸುಗಮ ಸಂಗೀತ ಬೆಳೆದು ಬಂದ ದಾರಿ ಅಷ್ಟು ಸುಲಭವಾಗಿರಲಿಲ್ಲ. ಅದು ಆಯಾಯ ಕಾಲಘಟ್ಟಕ್ಕೆ ಸವಾಲುಗಳನ್ನು ಎದುರಿಸುತ್ತಾ ತನ್ನದೇ ಸ್ಪಷ್ಟ ರೂಪವನ್ನು ಪಡೆದುಕೊಂಡಿದೆ ಅನ್ನುವುದನ್ನು ಎಚ್ಎಸ್ವಿ ಗುರುತಿಸುತ್ತಾರೆ. ಸುಗಮ ಸಂಗೀತ ಪರಿಷತ್ತು ಪ್ರತಿವರ್ಷವಂತೆ ಈ ವರ್ಷವೂ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸುಗಮ ಸಂಗೀತ ಸಮ್ಮೇಳನವನ್ನು ಹಮ್ಮಿಕೊಂಡಿದೆ. ಈ ಸಂದರ್ಭಕ್ಕೆ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರ ವಿಶೇಷ ಸಂದರ್ಶನ ಇಲ್ಲಿದೆ. ಒಟ್ಟಾರೆ ಸುಗಮ ಸಂಗೀತದ ಪರಂಪರೆಯಿಂದ ಹಿಡಿದು ಈ ಕ್ಷೇತ್ರದ ಸಾಧಕ-ಬಾಧಕಗಳನ್ನು, ಮುಂದಿನ ಸವಾಲುಗಳನ್ನು ಸಂದರ್ಶನದಲ್ಲಿ ಚರ್ಚಿಸಲಾಗಿದೆ. ಇದೊಂದು ಸುಗಮ ಸಂಗೀತದ ಮೇಲೆ ಬೆಳಕು ಚೆಲ್ಲುವ ಅಪರೂಪದ ಸಂದರ್ಶನ.
                                                                    
                                                                                               - ಶ್ರೀಧರ ಬನವಾಸಿ



ಪ್ರ : ಸರ್, ಶಿರಸಿಯಲ್ಲಿ ನಡೆಯುತ್ತಿರುವ ಸುಗಮ ಸಂಗೀತ ಸಮ್ಮೇಳನದ ಹಿನ್ನೆಲೆಯಲ್ಲಿ ಮೊದಲಿಗೆ ನಿಮಗೆ ಈ ಪ್ರಶ್ನೆ; ಅಂದಿನಿಂದ ಇಂದಿನವರೆಗೆ ಸುಗಮ ಸಂಗೀತದ ವಿವಿಧ ಮಜಲುಗಳು ಮತ್ತು ಪರಂಪರೆಯನ್ನು ನೀವು ಕಂಡಂತೆ ಬಣ್ಣಿಸುವಿರಾ?

ಎಚ್ಎಸ್ವಿ : ಸುಗಮ ಸಂಗೀತದ ಆರಂಭದ ದಿನಗಳಲ್ಲಿ ಯಾವುದೇ ಹಾಡನ್ನು ಬೇಕಾದರೂ ಹಾಡುವ ವಾತಾವರಣವಿತ್ತು. ಅಂದಿನ ಗಾಯಕರು ಕೀರ್ತನೆ, ಜಾನಪದ, ಕವಿಗಳ ಗೀತೆಗಳನ್ನು ಕೂಡ ಹಾಡ್ತಾ ಇದ್ರು. ಪ್ರಾರಂಭದ ದಿನಗಳು ಹೀಗೆಯೇ ಶುರುವಾಯಿತು. ಬಾಳಪ್ಪ ಹುಕ್ಕೇರಿ, ಕಾಳಿಂಗರಾಯರನ್ನು ನಾವು ಈ ಪರಂಪರೆಯ ಆದಿಪುರುಷರು ಅಂತ ಅಂದುಕೊಂಡರೂ, ಆರಂಭದಲ್ಲಿ ತನ್ನದೇ ಆದ ಖಚಿತ ಸ್ವರೂಪವಿಲ್ಲದೆಯೇ ಅದು ಪ್ರಾರಂಭವಾಯಿತು. ಇದು ಶಾಸ್ತ್ರೀಯ ಸಂಗೀತಕ್ಕಿಂತ ಸ್ವಲ್ಪ ವಿಭಿನ್ನವಾದ ಸಂಗೀತವಾಗಿದ್ದರಿಂದ ಇದನ್ನ ಲೈಟ್ಮ್ಯೂಸಿಕ್ ಅಂತ ಸಾಮಾನ್ಯವಾಗಿ ಕರೆಯಲಿಕ್ಕೆ ಪ್ರಾರಂಭಿಸಿದರು. ಆ ಕಾಲದಲ್ಲಿ ಆಕಾಶವಾಣಿಯ ಆಸರೆಯು ಇದಕ್ಕೆ ಸಿಕ್ಕಿದ್ದರಿಂದ ಇದರ ಬೆಳವಣಿಗೆಗೆ ಪೂರಕವಾಯಿತು. ಎಚ್ಎಂವಿ ಕಂಪನಿಯವ್ರು ಭಾವಗೀತೆಗಳ ತಟ್ಟೆಗಳನ್ನು ಪರಿಚಯಿಸಿದರು. ಈ ರೀತಿಯ ಆರಂಭದ ನಂತರ ಸುಗಮ ಸಂಗೀತವೆಂದರೆ ಕೇವಲ ಕವಿಗಳ ಗೀತೆಗಳು ಅಂತ ಸ್ಪಷ್ಟತೆಯನ್ನು ಪಡೆದುಕೊಂಡು ತನ್ನ ಎರಡನೇ ಮಜಲನ್ನು ಪಡೆದುಕೊಂಡಿತು. ಈ ಒಂದು ಘಟ್ಟವನ್ನು ಮೈಸೂರು ಅನಂತಸ್ವಾಮಿ ಮತ್ತು ಸಿ. ಅಶ್ವಥ್ರ ಸುವರ್ಣಯುಗವೆಂದು ನಾನು ಬಣ್ಣಿಸುವೆ. ಈ ಸಮಯದಲ್ಲೇ ಪದ್ಮಚರಣ್, ಎಚ್.ಕೆ. ನಾರಾಯಣ, ಎಚ್.ಆರ್. ಲೀಲಾವತಿ ಅವರಂತಹ ಪ್ರಮುಖರು ಈ ಪರಂಪರೆಯಲ್ಲಿ ಸೇರುತ್ತಾರೆ. ಈ ಗಾಯಕರೆಲ್ಲಾ ಹೆಚ್ಚಾಗಿ ಕವಿಗಳ ಗೀತೆಗಳನ್ನೇ ಹಾಡುತ್ತಿದ್ದರು. ಡಿವಿಜಿ ಮತ್ತು ರಾಜರತ್ನಂ ಅವರಂತಹ ಕವಿಗಳು ಅನಂತಸ್ವಾಮಿ ಅವರಿಂದಲೇ ಮನೆಮನ ಮುಟ್ಟಲಿಕ್ಕೆ ಸಾಧ್ಯವಾಯಿತು. ಶಿಶುನಾಳ ಶರೀಫ್, ಕೆ.ಎಸ್. ನರಸಿಂಹಸ್ವಾಮಿ ಅವರ ಗೀತೆಗಳು ಅಶ್ವಥ್ರಿಂದ ಅತ್ಯಂತ ಜನಪ್ರಿಯಗೊಂಡವು. ಕುವೆಂಪು, ಜಿಎಸ್ಎಸ್ರ ಕವಿತೆಗಳನ್ನು ಪದ್ಮಚರಣ್ ಹೆಚ್ಚಾಗಿ ಸಂಯೋಜನೆ ಮಾಡಿದರು. ಲೀಲಾವತಿ ಅವರು ಆಕಾಶವಾಣಿಯಲ್ಲಿ ಸದಾ ಕವಿಗಳ ಗೀತೆಗಳನ್ನು ಹಾಡ್ತಾ ಇದ್ರು. ಇವೆಲ್ಲಾ ಸುಗಮ ಸಂಗೀತದ ಆರಂಭದ ದಿನಗಳು ಅಂತ ಬಣ್ಣಿಸಬಹುದು. ಸುಗಮ ಸಂಗೀತಕ್ಕೆ ಕರ್ನಾಟಕ ಸಂಗೀತವೇ ಮುಖ್ಯ ಅಡಿಪಾಯವಾಗಿದ್ದರೂ, ಒಬ್ಬೊಬ್ಬ ಸಂಯೋಜಕರು ಒಂದೊಂದರಿಂದ ಪ್ರೇರಣೆ ಹೊಂದಿದವರೇ. ಮೈಸೂರು ಅನಂತಸ್ವಾಮಿ ಕರ್ನಾಟಕ ಮತ್ತು ಪಾಶ್ಯಾತ್ಯ ಸಂಗೀತದಿಂದ ಪ್ರಭಾವಿತರಾದರೆ, ಸಿ. ಅಶ್ವಥ್ ಅವರು ಹಿಂದುಸ್ತಾನಿ ಸಂಗೀತದಿಂದ ಪ್ರೇರಿತರಾಗಿದ್ದರು. ಪದ್ಮಚರಣ್ ಸಂಪೂರ್ಣವಾಗಿ ಕರ್ನಾಟಕ ಸಂಗೀತವನ್ನಿಟ್ಟುಕೊಂಡೆ ಸಂಯೋಜನೆ ಮಾಡುತ್ತಿದ್ದರು. ಒಟ್ಟಾರೆಯಾಗಿ ನೋಡಿದಾಗ ಮೈಸೂರು ಅನಂತಸ್ವಾಮಿ ಮತ್ತು ಅಶ್ವಥ್ ಅವರಿಂದಲೇ ಸುಗಮ ಸಂಗೀತ ಕ್ಷೇತ್ರ ಒಂದು ಸ್ವಷ್ಟ ರೂಪವನ್ನು ಪಡೆದುಕೊಂಡಿತು. ಇವರ ನಂತರ ಬಂದಂತಹ ಮೂರನೇ ಮಜಲಿನಲ್ಲಿ ಹೊಸಹೊಸ ಗಾಯಕರು, ಸಂಯೋಜಕರು ನೂತನ ಟ್ರೆಂಡನ್ನು ಹುಟ್ಟು ಹಾಕಲಿಕ್ಕೆ ಪ್ರಯತ್ನ ಮಾಡಿದರು. ಇದು ಕೂಡ ಮೆಚ್ಚುವಂತಹದ್ದು. ಇದರಲ್ಲಿ ಮುಖ್ಯವಾಗಿ ನಾವು ಗಮನಿಸಬೇಕಾದದ್ದು ಸುಗಮ ಸಂಗೀತವನ್ನು ಅಕಾಡೆಮಿಕ್ ಆಗಿ ಕಲಿಸುವಂತಹ ಶೈಕ್ಷಣಿಕ ಸಂಗೀತ ಶಾಲೆಗಳು ಹುಟ್ಟಿಕೊಂಡಿದ್ದು.


ಸುಗಮ ಸಂಗೀತವನ್ನು ಮೊದಲು ಬೆಂಗಳೂರಿನಲ್ಲಿ ಶೈಕ್ಷಣಿಕವಾಗಿ ಕಲಿಸುವ ಪ್ರಯತ್ನ ಮಾಡಿದ್ದು ಜಿ.ವಿ. ಅತ್ರಿ ಮತ್ತು ಅವರ ತಂಡ. ಈ ರೀತಿ ಅಕಾಡೆಮಿಕ್ ಆಗಿ ಸುಗಮ ಸಂಗೀತವನ್ನು ಕಲಿಸಿದಂತಹ ಅನೇಕ ಗಾಯಕ ಗಾಯಕಿಯರು ತಮ್ಮದೇ ಸಂಗೀತ ಶಾಲೆಗಳನ್ನು ತೆರೆದು ನೂರಾರು ವಿದ್ಯಾಥರ್ಿಗಳನ್ನು ತಯಾರು ಮಾಡಿದರು. ಹೊಸಹೊಸ ಸಂಗೀತ ನಿರ್ದೆಶಕರು ಬಂದರು. ಇದು ಮುಂದುವರೆದು ಕರ್ನಾಟಕದ ಮೂಲೆಮೂಲೆಯಲ್ಲಿ ನೂರಾರು ಶಾಲಾಕಾಲೇಜುಗಳು ಸುಗಮ ಸಂಗೀತವನ್ನು ಕಲಿಸುವ ಪ್ರಯತ್ನವನ್ನು ಮಾಡಿದ್ದು-ಇವೆಲ್ಲಾ ಈ ಕ್ಷೇತ್ರದಲ್ಲಾದ ಉತ್ತಮ ಬೆಳವಣಿಗೆಗಳೇ.
ಈ ಬೆಳವಣಿಗೆಗಳ ನಡುವೆ `ಧ್ವನಿ' ಎಂಬ ಸುಗಮ ಸಂಗೀತ ಸಂಸ್ಥೆ ಪ್ರಾರಂಭವಾಯಿತು. ಇದರ ಹಿಂದೆ ಮೈಸೂರು ಅನಂತಸ್ವಾಮಿ, ಸಿ. ಅಶ್ವಥ್, ವೈ.ಕೆ. ಮುದ್ದುಕೃಷ್ಣ ಅವರಂತವರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು. ಈ ಸಂಸ್ಥೆಯ ಮೂಲಕ ಸುಗಮ ಸಂಗೀತವನ್ನು ರಾಜ್ಯ, ರಾಷ್ಟ್ರಮಟ್ಟಕ್ಕೆ ಒಯ್ಯುವಂತಹ ಪ್ರಯತ್ನಗಳಾದವು. ತದನಂತರ ಈ ಕ್ಷೇತ್ರದ ವಿಸ್ತಾರ ಇನ್ನಷ್ಟು ಬೆಳೆಯಲಿಕ್ಕೆ ಅನುಕೂಲವಾಯಿತು. ಸಂಸ್ಥೆಯ ಯಶಸ್ಸಿನ ನಂತರ ವೈ.ಕೆ. ಮುದ್ದುಕೃಷ್ಣರ ನೇತೃತ್ವದಲ್ಲಿ ಸುಗಮ ಸಂಗೀತ ಪರಿಷತ್ ಪ್ರಾರಂಭವಾಯಿತು. ಇವರು ಪ್ರತಿವರ್ಷ ಸಾಹಿತ್ಯ ಸಮ್ಮೇಳನದ ಸಂಭ್ರಮದಷ್ಟೇ ಅದ್ಧೂರಿಯಾಗಿ ಸುಗಮ ಸಂಗೀತ ಸಮ್ಮೇಳನವನ್ನು ಮಾಡುತ್ತಾ ಬರುತ್ತಿದ್ದಾರೆ. ಎರಡು ದಿನಗಳ ಈ ಸಮ್ಮೇಳನದಲ್ಲಿ ಸಾವಿರಾರು ಸಂಗೀತಾಸಕ್ತರು, ನೂರಾರು ಸುಗಮ ಸಂಗೀತ ಗಾಯಕರು ಇಲ್ಲಿ ಒಂದೆಡೆ ಸೇರುವುದು ನಿಜಕ್ಕೂ ವಿಶೇಷವೇ. ಈಗ ಪರಿಷತ್ತಿನ ನೇತೃತ್ವವನ್ನು ಕಿಕ್ಕೇರಿ ಕೃಷ್ಣಮೂರ್ತಿ ವಹಿಸಿಕೊಂಡಿದ್ದಾರೆ. ಸಾಹಿತ್ಯ ಸಮ್ಮೇಳನಕ್ಕೆ ಹೇಗೆ ಒಬ್ಬ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೋ, ಅದೇ ರೀತಿ ಸುಗಮ ಸಂಗೀತ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ. ಈ ಒಂದು ಪರಂಪರೆಯೂ ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಒಟ್ಟಾರೆಯಾಗಿ ಕನ್ನಡ ಸುಗಮ ಸಂಗೀತದ ವಿವಿಧ ಮಜಲುಗಳು ಮತ್ತು ಪರಂಪರೆಯನ್ನು ನಾವು ಈ ಸ್ವರೂಪದಲ್ಲಿ ಕಾಣಬಹುದಾಗಿದೆ.

ಪ್ರ : ನವೋದಯ ಮತ್ತು ನವ್ಯಕವಿಗಳ ಕವಿತೆಗಳನ್ನು ಸುಗಮ ಸಂಗೀತಕ್ಕೆ ಅಳವಡಿಸಿಕೊಳ್ಳಲಾಯಿತು. ಇದು ಎಷ್ಟರಮಟ್ಟಿಗೆ ಜನಸಾಮಾನ್ಯರಿಗೆ ತಲುಪಲು ಮತ್ತು ಸುಗಮ ಸಂಗೀತದ ಬೆಳವಣಿಗೆಗೆ ಪೂರಕವಾಯಿತು?
ಎಚ್ಎಸ್ವಿ : ಸುಗಮ ಸಂಗೀತ ಕ್ಷೇತ್ರದಲ್ಲಿ ಆಯಾಯ ಕಾಲಘಟ್ಟದಲ್ಲಿ ಹೇಗೆ ಬದಲಾವಣೆಗಳು ಆಗುತ್ತಾ ಬಂದವೋ, ಅದಕ್ಕೆ ಪೂರಕವಾಗಿ ಭಾವಗೀತೆಗಳನ್ನು ಬರೆಯುವ ಕವಿಗಳು ಕೂಡ ಹಾಗೆಯೇ ಉದಯಿಸತೊಡಗಿದರು. ಆರಂಭದಲ್ಲಿ ಬೇಂದ್ರೆ, ಕುವೆಂಪು, ಪುತಿನ, ನರಸಿಂಹಸ್ವಾಮಿ, ಶಿವರುದ್ರಪ್ಪ, ಕಣವಿ ಅವರು ಭಾವಗೀತೆಗಳನ್ನು ಬರೆದರು. ಇದಾದ ಮೇಲೆ ಒಂದು ದೊಡ್ಡ ಗ್ಯಾಪ್ ನಿರ್ಮಾಣವಾಯಿತು. ನವ್ಯಕಾಲದಲ್ಲಿ ಕವಿತೆಗಳನ್ನು ಹಾಡಬಾರದು ಅನ್ನುವ ಚಳುವಳಿ ನಿರ್ಮಾಣವಾಯಿತು. ಇದರಿಂದ ಎಷ್ಟೋ ಸಂಗೀತಕ್ಕೆ ಅಳವಡಿಸಬಹುದಾದ ಅನೇಕ ಕವಿತೆಗಳು ಎಲೆಮರೆಯಲ್ಲೇ ಉಳಿದವು. ಈ ಅಂತರದ ನಂತರ ಲಕ್ಷ್ಮೀನಾರಾಯಣ ಭಟ್ಟರು, ನಿಸಾರ ಅಹಮದ್ ಅವರಂತವರು ಕವಿತೆಗಳನ್ನು ಬರೆಯಲಿಕ್ಕೆ ಪ್ರಾರಂಭಿಸಿದರು. ಇದರಿಂದ ಸುಗಮ ಸಂಗೀತ ಕ್ಷೇತ್ರ ಮತ್ತೆ ಕವಿಗಳ ಗೀತೆಗಳನ್ನು ಅಳವಡಿಸಿಕೊಳ್ಳಲಿಕ್ಕೆ ಪ್ರಾರಂಭಿಸಿತು. 1970ರ ನಂತರ ನಾನು, ಸುಬ್ರಾಯ ಚೊಕ್ಕಾಡಿ, ವ್ಯಾಸರಾವ್, ದೊಡ್ಡರಂಗೇಗೌಡ, ಲಕ್ಷ್ಮಣರಾವ್ ಭಾವಗೀತೆಗಳನ್ನು ಬರೆಯಲಿಕ್ಕೆ ಪ್ರಾರಂಭಿಸಿದೆವು. ಅಲ್ಲಿಂದ ನಿರಂತರವಾಗಿ ಸುಗಮ ಸಂಗೀತ ಕ್ಷೇತ್ರ ಬೆಳವಣಿಗೆಯಾಗುತ್ತಾ ಸಾಗಿತು. ಕವಿಗಳು ಕೂಡ ಗಾಯಕರಷ್ಟೇ ಕರ್ನಾಟಕದ ಮನೆಮನೆ ಮಾತಾದರು. 
ಸುಗಮ ಸಂಗೀತ ಕ್ಷೇತ್ರ ಒಂದು ಸಮಯದಲ್ಲಿ ಎಷ್ಟು ಜನಪ್ರಿಯವಾಯಿತು ಅಂದರೆ, ಭಾವಗೀತೆಗಳನ್ನು ಆಧರಿಸಿಯೇ ಸಿನಿಮಾಗಳು ತಯಾರಾದವು. ಶಿಶುನಾಳ ಶರೀಫ, ಚಿನ್ನಾರಿಮುತ್ತ, ಮೈಸೂರು ಮಲ್ಲಿಗೆಯಂತಹ ಸಿನಿಮಾಗಳ ಗೀತೆಗಳು ತುಂಬಾ ಸೂಪರ್ಹಿಟ್ ಆಗಿ ಬಾಕ್ಸ್ ಆಫೀಸಿನಲ್ಲಿಯೂ ಗೆದ್ದವು. ಶಾಸ್ತ್ರೀಯ ಸಂಗೀತವನ್ನಿಟ್ಟುಕೊಂಡು ಮಾಡಿದಂತಹ ಹಂಸಗೀತೆ ಸಿನಿಮಾದಂತೆಯೇ, ಭಾವಗೀತೆಗಳನ್ನಿಟ್ಟುಕೊಂಡು ಮಾಡಿದಂತಹ ಈ ಚಿತ್ರಗಳು ಅಂದಿನ ದಿನಗಳಲ್ಲಿ ಗೆದ್ದಿರುವುದನ್ನು ನಾವು ನೋಡಬಹುದು. ಯಾವಾಗ ಸಾಹಿತ್ಯಿಕ ಹಿನ್ನೆಲೆಯ ಕವಿಗಳು ಸುಗಮ ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾದರೋ, ಆಗ ಭಾವಗೀತೆಗಳ ಗುಣಮಟ್ಟವೇ ಉತ್ಕೃಷ್ಟಕ್ಕೆ ಏರಿತು. ಚಲನಚಿತ್ರ ಗೀತೆಗಳಲ್ಲಿ ಹೆಚ್ಚು ಕಾವ್ಯಾತ್ಮಕತೆ ಕಾಣಿಸಿಕೊಳ್ಳತೊಡಗಿತು. ಇದರಲ್ಲಿ ಮುಖ್ಯವಾಗಿ ವ್ಯಾಸರಾವ್, ದೊಡ್ಡರಂಗೇಗೌಡ ಮತ್ತು ಜಯಂತ್ ಕಾಯ್ಕಿಣಿ ಅವರನ್ನು  ಪ್ರಮುಖವಾಗಿ ಗುರುತಿಸಬಹುದು.

ಪ್ರ : ಚಿತ್ರಗೀತೆ ಮತ್ತು ಭಾವಗೀತೆಗಳ ನಡುವಿನ ಪ್ರಮುಖ ವ್ಯತ್ಯಾಸಗಳೇನು?
ಎಚ್ಎಸ್ವಿ : ಚಿತ್ರಗೀತೆ ಅನ್ನುವುದು ಆ ಸಿನಿಮಾದ ಕಥೆಗೆ ನೇರವಾಗಿ ಸಂಬಂಧಪಟ್ಟದ್ದಾಗಿದೆ. ಆದರೆ ಭಾವಗೀತೆ ಹಾಗಲ್ಲ. ಅದು ಯಾವ ಸೀಮಿತ ಚೌಕಟ್ಟನ್ನು ಹೊಂದಿಲ್ಲ, ಅದು ತನ್ನದೇ ಸ್ವತಂತ್ರತೆಯನ್ನು ಕಾಯ್ದುಕೊಂಡಿದೆ. ಚಿತ್ರಗೀತೆ ಬರೆಯುವಾಗ ಆ ಕಥೆಯ ಪಾತ್ರ, ಸನ್ನಿವೇಶಕ್ಕೆ ಪೂರಕವಾಗಿಯೇ ಬರೆಯಬೇಕು. ಆದರೆ ಭಾವಗೀತೆ ಹಾಗಲ್ಲ, ನಮ್ಮ ಮನಸ್ಸಿಗೆ ಬಂದ ಭಾವದಂತೆ ಅದನ್ನು ಬರೆಯಲಾಗುತ್ತದೆ. ಕವಿಗೆ ಹೆಚ್ಚಿನ ಸ್ವಾತಂತ್ರ್ಯ ಭಾವಗೀತೆಯಲ್ಲಿ ಸಿಗುತ್ತೆ. ಸಾಮಾನ್ಯವಾಗಿ ಸಿನಿಮಾದಲ್ಲಿ ಟ್ಯೂನ್ ಕೊಟ್ಟು ಅದಕ್ಕೆ ಗೀತೆ ರಚನೆ ಮಾಡಿಸಿದರೆ, ಸುಗಮ ಸಂಗೀತದಲ್ಲಿ ಒಂದೊಳ್ಳೆಯ ಕವಿತೆಯನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ರಾಗ ಸಂಯೋಜನೆ ಮಾಡಲಾಗುತ್ತದೆ. ಸುಗಮ ಸಂಗೀತದ ಎಲ್ಲ ಸಂಯೋಜಕರು ಇದನ್ನು ಅನುಸರಿಸಿಕೊಂಡು ಬಂದಿದ್ದಾರೆ. 1960 ಮತ್ತು 70ರ ದಶಕದ ಸಿನಿಮಾ ಕ್ಷೇತ್ರದಲ್ಲಿ ಸಂಗೀತ, ಸಾಹಿತ್ಯ, ಮಾಧುರ್ಯಕ್ಕೆ ಹೆಚ್ಚು ಒತ್ತು ಕೊಟ್ಟು ಒಳ್ಳೊಳ್ಳೆಯ ಪ್ರಯತ್ನಗಳನ್ನು ಮಾಡಿರುವುದನ್ನು ನಾವು ಕಾಣಬಹುದು. ಹಳೆಯ ಕನ್ನಡ, ಹಿಂದಿ ಸಿನಿಮಾ ಹಾಡುಗಳನ್ನು ನಮಗೆ ಈಗಲೂ ಕೇಳಬೇಕೆಂದು ಅನಿಸುತ್ತದೆ. ಹಾಡುಗಳಲ್ಲಿನ ಮಾಧುರ್ಯ, ಸಾಹಿತ್ಯ ನಮ್ಮನ್ನು ಈಗಲೂ ಸೆಳೆಯುತ್ತಲೇ ಇರುತ್ತದೆ. ಕು.ರಾ.ಸೀ, ಸದಾಶಿವಯ್ಯ, ಕಣಗಾಲ್ ಪ್ರಭಾಕರಶಾಸ್ತ್ರಿ, ಉದಯಶಂಕರ್, ವಿಜಯನಾರಸಿಂಹ, ಜಯಗೋಪಾಲ್ ಅವರಂತವರು ಅತ್ಯುತ್ತಮ ಗೀತೆಗಳನ್ನು ರಚನೆ ಮಾಡಿದ್ದಾರೆ. ಉದಯಶಂಕರ್ ನಂತರ ಬಂದಂತಹ ಹಂಸಲೇಖರು ಗೀತರಚನೆಯಲ್ಲಿ ಇನ್ನೊಂದು ರೀತಿಯ ಟ್ರೆಂಡನ್ನು ಹುಟ್ಟುಹಾಕಿದರು. ಈಗಿನ ಆಧುನಿಕತೆಗೆ ಯೋಗರಾಜ ಭಟ್ಟರ ಸಾಹಿತ್ಯ ಜನಪ್ರಿಯವಾಗುತ್ತಿದೆ.

ಪ್ರ : ಒಂದೇ ಕವಿತೆ ಹತ್ತಾರು ಸಂಯೋಜನೆಗಳಾದಾಗ ಅದು ಶೋತೃಗಳಿಗೆ ಗೊಂದಲವುಂಟು ಮಾಡುವುದಿಲ್ಲವೇ?
ಎಚ್ಎಸ್ವಿ : ಭಾವಗೀತೆಗಳು ಯಾವುದೇ ರೀತಿಯಲ್ಲಿ ಗೊಂದಲವನ್ನುಂಟು ಮಾಡುವುದಿಲ್ಲ. ಅದನ್ನು ಯಾವ ಶೈಲಿ, ರಾಗದಲ್ಲಿ ಬೇಕಾದರೂ ಹಾಡಬಹುದು. ಆದರೆ ನಾಡಗೀತೆಯ ವಿಚಾರದಲ್ಲಿ ಒಂದು ಗೊಂದಲವಂತೂ ಇದ್ದೇ ಇದೆ. ಈಗಾಗಲೇ ನಾಡಗೀತೆಗೆ ರಾಗ ಸಂಯೋಜನೆಯನ್ನು ಅನಂತಸ್ವಾಮಿ, ವಿಜಯಭಾಸ್ಕರ್, ಅಶ್ವಥ್ ಅವರು ಮಾಡಿದ್ದಾರೆ. ಈಗಿನ ಸಂಗೀತ ನಿರ್ದೇಶಕರು ಕೂಡ ಹೊಸದಾಗಿ ರಾಗಸಂಯೋಜನೆ ಮಾಡಿದ್ದುಂಟು. ಎಲ್ಲರೂ ತಮ್ಮತಮ್ಮ ಶೈಲಿಯಲ್ಲಿ ಮಾಡಿದ್ದಾರೆ. ಯಾವ ಶೈಲಿ ಯಾರಿಗೆ ತುಂಬಾ ಹತ್ತಿರವಾಗುತ್ತೆ ಅನ್ನುವುದು ಅವರವರ ಮನೋಧರ್ಮಕ್ಕೆ ಬಿಟ್ಟ ವಿಚಾರವೆಂದು ಹೇಳಬಹುದು. ಅವರವರ ಅಭಿರುಚಿಗೆ ತಕ್ಕಹಾಗೆ ಆಯಾ ಶೈಲಿಯನ್ನು ಆರಿಸಿಕೊಳ್ಳುತ್ತಾರೆ. ಆದರೆ ಇಂದು ನಾಡಗೀತೆಯ ವಿಚಾರದಲ್ಲಿ ಅದು ದೊಡ್ಡ ಗೊಂದಲವೇ ಆಗಿದೆ. ನನಗಿನಿಸಿದ ಪ್ರಕಾರ ಈಗಿರುವ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಒಮ್ಮತದ ನಿರ್ಧಾರ ತೆಗೆದುಕೊಂಡು ನಾಡಗೀತೆಗೆ ಒಂದು ಖಾಯಂ ಆದ ಸಂಯೋಜನೆ ನಿರ್ಧರಿಸಿಬಿಟ್ಟರೆ ತುಂಬಾ ಒಳ್ಳೆಯದು. ಅನಂತಸ್ವಾಮಿ ಮತ್ತು ಅಶ್ವಥ್ ಇಬ್ಬರೂ ಎಲ್ಲರಿಗೂ ಪ್ರಿಯರೇ. ಇದರಲ್ಲಿ ಯಾರ ಸಂಯೋಜನೆಯಾದರೂ ತೊಂದರೆಯಿಲ್ಲ. ಅಂತಿಮ ನಿರ್ಧಾರ ಯಾರದ್ದೇ ಆದರೂ ಅದನ್ನು ಮನಸ್ವೀ ಸ್ವೀಕರಿಸುವ ಭಾವ ಎಲ್ಲರಲ್ಲೂ ಇದೆ ಅನ್ನುವುದು ನನ್ನ ಇಂಗಿತ. ನಾಡಗೀತೆಯನ್ನು ಎಲ್ಲ ಕಡೆಯಲ್ಲೂ ಒಂದೇ ರೀತಿ ಹಾಡಬೇಕು. ಹೇಗೆ ರಾಷ್ಟ್ರಗೀತೆಗೆ ಒಂದೇ ಧಾಟಿ ಇದೆಯೋ ಅದೇ ರೀತಿ ನಾಡಗೀತೆಗೂ ಒಂದೇ ಧಾಟಿ ಇದ್ದರೆ ತುಂಬಾ ಚೆನ್ನ. ಇದಕ್ಕಾಗಿ ನಮ್ಮಲ್ಲಿರುವ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಪರಸ್ಪರ ಮಾತಿನ ಮೂಲಕ ಒಮ್ಮತದ ನಿರ್ಧಾರ ತೆಗೆದುಕೊಂಡು ಅದನ್ನು ಸರ್ಕಾರಕ್ಕೆ ಒಪ್ಪಿಸುವುದು ಸೂಕ್ತ ಅಂತ ನನಗಿಸುತ್ತದೆ.



ಪ್ರ : ಭಾವಗೀತೆಯ ಮಾಧ್ಯಮಕ್ಕೆ ನೃತ್ಯ, ದೃಶ್ಯ, ನಿರೂಪಣೆ ಇತ್ಯಾದಿಗಳು ಸಮಂಜಸವೇ?
ಎಚ್ಎಸ್ವಿ : ಒಂದು ಭಾವಗೀತೆಯನ್ನು ಶೋತೃಗಳಿಗೆ ನೀಡುವಾಗ ಖಂಡಿತ ಇದೆಲ್ಲಾ ಅವಶ್ಯಕವೆಂದು ನನ್ನ ಭಾವನೆ. ಒಂದು ಗೀತೆಯನ್ನು ಸುಮ್ಮನೇ ಹಾಡಿಬಿಟ್ಟರೆ ಯಾವುದೇ ಉಪಯೋಗವಿಲ್ಲ. ಹಿಂದೆಲ್ಲಾ ಕೆಲವು ಪ್ರಸಿದ್ಧ ಗಾಯಕರು ಭಾವಗೀತೆಯನ್ನು ಬರೆದಂತಹ ಕವಿಗಳ ಹೆಸರನ್ನು ಕೂಡ ಹೇಳದೆ ಹಾಡುತ್ತಿದ್ದರು. ಆದರೆ ಈಗೆಲ್ಲಾ ಸ್ವಲ್ಪ ಬದಲಾವಣೆಯಾಗಿದೆ. ಆ ಗೀತೆಯನ್ನು ಬರೆದಂತಹ ಕವಿಯ ಹೆಸರು, ಪರಿಚಯ, ಆ ಗೀತೆಯ ಹಿನ್ನೆಲೆ, ಕವಿತೆಯ ಅಂತರಾಳ ಇವನ್ನೆಲ್ಲಾ ಹೇಳುವುದರಿಂದ, ಶೋತೃಗಳಿಗೆ ಕವಿತೆಯನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಒಂದು ಭಾವವಲಯವನ್ನು ನಿರ್ಮಾಣ ಮಾಡಿಕೊಟ್ಟಂತಾಗುತ್ತದೆ. ಈಗಿನ ಗಾಯಕರು ಅದನ್ನು ತುಂಬಾ ಚೆನ್ನಾಗಿ ಮಾಡುತ್ತಿದ್ದಾರೆ. ಒಂದೊಳ್ಳೆ ಭಾವಗೀತೆಗೆ ನೃತ್ಯ ಸಂಯೋಜನೆ ಮಾಡಿ ಶೋತೃಗಳಿಗೆ ನೀಡುವ ಯೋಚನೆಯೂ ಕೂಡ ವಿನೂತನವಾದದ್ದು. ಉಪಾಸನಾ ಮೋಹನ್ ಅವರಂತಹ ಗಾಯಕರು ಒಂದು ಗೀತೆಯನ್ನು ಮಕ್ಕಳ ನೃತ್ಯದ ಮೂಲಕ ಮಾಡಿಸುವ ಪ್ರಯೋಗಗಳನ್ನು ಮಾಡಿದ್ದಾರೆ. ಟೀವಿ ಮಾಧ್ಯಮಗಳಲ್ಲಿಯೂ ಇಂತಹ ಪ್ರಯೋಗದ ಕಾರ್ಯಕ್ರಮಗಳು ಆಗಿವೆ. ಸುಗಮ ಸಂಗೀತ ಪರಿಷತ್ನವರು 'ಕವಿಯ ನೋಡಿ; ಕವಿತೆ ಕೇಳಿ' ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದಾರೆ. ರಂಗಭೂಮಿಯ ನಾಟಕಗಳಲ್ಲೂ ಭಾವಗೀತೆಗಳನ್ನು ಅಳವಡಿಸಿಕೊಂಡಿದ್ದು ವಿಶೇಷವೇ. ರಾಜಾರಾಮ್ ಅವರಂತಹ ರಂಗಭೂಮಿ ತಜ್ಞರು ನರಸಿಂಹಸ್ವಾಮಿಯವರ ಭಾವಗೀತೆಗಳನ್ನು ನಾಟಕ ಮಾಡಿದ್ದುಂಟು. ಅದೇ ರೀತಿ ಲಕ್ಷ್ಮಣರಾಯರ ಗೀತೆಗಳನ್ನು ಇಟ್ಟುಕೊಂಡು 'ನಂಗ್ಯಾಕೋ ಡೌಟು' ಎಂಬ ನಾಟಕ ಮಾಡಲಾಯಿತು. ಭಾವಗೀತೆಗಳನ್ನು ಜನಮಾನಸಕ್ಕೆ ಮುಟ್ಟಿಸಲು ಮಾಡಿದ ಇಂಥ ವಿನೂತನ ಪ್ರಯೋಗಗಳನ್ನು ನಾವು ಮೆಚ್ಚಲೇಬೇಕು. ಇಂತಹ ಪ್ರಯತ್ನಗಳು ಇನ್ನಷ್ಟು ಆಗಲಿ ಅನ್ನುವುದೇ ನನ್ನ ಆಶಯ.

ಪ್ರ : ಇಂದಿನ ಸುಗಮ ಸಂಗೀತ ಮಾಧ್ಯಮದಲ್ಲಿ ಕಾವ್ಯದ ಸತ್ವವನ್ನು ಒತ್ತಿಹೇಳುವುದಕ್ಕಿಂತ ಸಂಗೀತದ ಅಬ್ಬರವೇ ಜಾಸ್ತಿಯಾಗುತ್ತಿದೆಯಲ್ಲವೇ? ಈ ದೃಷ್ಟಿಯಿಂದ ನೋಡಿದಾಗ ಸುಗಮ ಸಂಗೀತದ ಬೆಳವಣಿಗೆ ಅರ್ಥಪೂರ್ಣವಾಗುತ್ತಿದೆಯೇ?
ಎಚ್ಎಸ್ವಿ : ಈ ರೀತಿಯಾಗುವ ಮುನ್ನ ನಾವು ಇದರ ಹಿನ್ನೆಲೆಯನ್ನು ಸ್ವಲ್ಪ ಗಮನಿಸಬೇಕು. ಈಗಾಗಲೇ ನಾನು ತಿಳಿಸಿದಂತೆ ಸುಗಮ ಸಂಗೀತ ತನ್ನದೇ ಸ್ವಷ್ಟ ರೂಪವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಅನಂತಸ್ವಾಮಿ ಮತ್ತು ಅಶ್ವಥ್ ಅವ್ರು ತಮ್ಮದೇ ಶೈಲಿಯಲ್ಲಿ ವಾದ್ಯಗೋಷ್ಠಿಯನ್ನು ಮಾಡಿಕೊಂಡು ಪ್ರಯೋಗಗಳನ್ನು ಮಾಡುತ್ತಿದ್ದರು. ಅನಂತಸ್ವಾಮಿಯವರು ಒಂದು ಹಾರ್ಮೊನಿಯಂ, ಒಂದು ತಬಲ ಇಷ್ಟರಲ್ಲೇ ತಮ್ಮ ಕಛೇರಿಯನ್ನು ಮಾಡಿ ಮುಗಿಸುತ್ತಿದ್ದರು. ಆದರೆ ಅಶ್ವಥ್ರದ್ದು ಆ ರೀತಿ ಇರಲಿಲ್ಲ. ಸುಗಮ ಸಂಗೀತ ಕೂಡ ಸಿನಿಮಾ ಸಂಗೀತದಂತೆ ತುಂಬಾ ವಿಜೃಂಭಣೆಯಿಂದ ಇರಬೇಕು, ಅಲ್ಲಿಯಂತೆಯೇ ಆಕರ್ೆಸ್ಟ್ರಾ ಮಾಡಿಸ್ಬೇಕು ಅಂತ ಆತ ತುಂಬಾ ದೊಡ್ಡ ಕನಸು ಕಂಡಿದ್ದರು. ಆ ನಿಟ್ಟಿನಲ್ಲಿ ಹತ್ತಾರು ಗಾಯಕರು, ನೂರಾರು ವಾದ್ಯಕಲಾವಿದರನ್ನು ಇಟ್ಟುಕೊಂಡು ಪ್ರಯೋಗ ಮಾಡಲಿಕ್ಕೆ ಪ್ರಾರಂಭಿಸಿ ಅದರಲ್ಲಿ ಯಶಸ್ವಿ ಕೂಡ ಆದರು. ಸಾವಿರಾರು ಜನರನ್ನು ಒಂದೆಡೆ ಸೇರಿಸಿ ಮಾಡುವಂತಹ ದೊಡ್ಡದೊಡ್ಡ ಕಾರ್ಯಕ್ರಮಗಳನ್ನು ಮಾಡಿ ಗೆದ್ದರು. ಅಶ್ವಥ್ ಸುಗಮ ಸಂಗೀತಕ್ಕೆ ಹೊಸ ರೀತಿಯ ಟ್ರೆಂಡನ್ನು ಸೃಷ್ಟಿಸುವ ನಿಟ್ಟಿನಲ್ಲಿ ಪ್ರಾರಂಭಿಸಿದ್ದು, ಮುಂದೆ ಬರುವ ದಿನಗಳಲ್ಲಿ ಸ್ವಲ್ಪ ಹಾದಿ ತಪ್ಪಿತು ಅಂತಾನೇ ಹೇಳಬಹುದು. ಸಂಗೀತದ ಅಬ್ಬರಕ್ಕೆ ಪ್ರಾಶಸ್ತ್ಯ ಕೊಡುವುದು ಹೆಚ್ಚಾದಾಗ ಸಾಹಿತ್ಯದ ಪಾತ್ರ ಗೌಣವಾಗಲಿಕ್ಕೆ ಪ್ರಾರಂಭವಾಯಿತು. ಹೀಗೆ ಅಶ್ವಥ್ ಅವರಂತಹ ಪ್ರತಿಭಾನ್ವಿತರ ಕೈಯಲ್ಲಿ ಇದ್ದಾಗ ಇದು ಅರ್ಥಪೂರ್ಣವಾಗಿತ್ತು, ಆ ನಂತರ ಇಂತಹ ಪ್ರಯತ್ನವನ್ನು ಅಷ್ಟೊಂದು ಪ್ರತಿಭಾನ್ವಿತರಲ್ಲದವರು ಮಾಡಲು ಯತ್ನಿಸಿದಾಗ ಅದು ತನ್ನ ಸತ್ವವನ್ನು ಕಳೆದುಕೊಂಡುಬಿಟ್ಟಿತು. ಇದರ ನಡುವೆಯೂ ಕೆಲವು ಗಾಯಕರು ತಮ್ಮದೇ ತಂಡವನ್ನು ಕಟ್ಟಿಕೊಂಡು ಸಂಗೀತಾಸಕ್ತರು ಒಂದೆಡೆ ಸೇರುವ ಸ್ಥಳಗಳಲ್ಲಿ ಆಪ್ತ ಕಛೇರಿಗಳನ್ನು ಮಾಡುತ್ತಿರುವ ಪ್ರಯತ್ನಗಳು ಆಗುತ್ತಿವೆ. ಈ ರೀತಿ ಮನೆ ಮನೆಯಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಮೊದಲು ತಂದವರೇ ಉಪಾಸನಾ ಮೋಹನ್. ಅವರ `ಮನೆಯಂಗಳದಲ್ಲಿ ಕವಿತಾ ಗಾಯನ'-ಇದು ಅತ್ಯಂತ ಯಶಸ್ವಿಯಾದ ಕಾರ್ಯಕ್ರಮ. ಇವರು ನೂರಕ್ಕೂ ಹೆಚ್ಚು ಮನೆಯಂಗಳದ ಸುಗಮ ಸಂಗೀತದ ಕಾರ್ಯಕ್ರಮಗಳನ್ನು ಮಾಡಿದ್ದಾರೆ.

ಪ್ರ : ಇಂದಿನ ತಲೆಮಾರಿನವರು ಸುಗಮ ಸಂಗೀತವನ್ನು ಯಾವ ರೀತಿ ಗಂಭೀರವಾಗಿ ತೆಗೆದುಕೊಂಡು ಮುನ್ನಡೆಸುತ್ತಿದ್ದಾರೆ?
ಎಚ್ಎಸ್ವಿ : ಈಗಿರುವ ಕೆಲವು ಗಾಯಕರು ಸುಗಮ ಸಂಗೀತದ ಪರಂಪರೆಯನ್ನು ಬೆಳೆಸುವ ನಿಟ್ಟಿನಲ್ಲಿ ತುಂಬಾ ಒಳ್ಳೊಳ್ಳೆಯ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಇವರನ್ನು ನಾವು ನೆನಪಿಸಿಕೊಳ್ಳಲೇಬೇಕು. ಈಗಿರುವ ಗಾಯಕರಲ್ಲಿ ಇಂದೂ ವಿಶ್ವನಾಥ್, ನರಸಿಂಹ ನಾಯಕ್, ಡಾ. ರೋಹಿಣಿ, ಶ್ರೀನಿವಾಸ ಉಡುಪ, ಪಲ್ಲವಿ, ಸುಪ್ರಿಯಾ ರಘುನಂದನ್, ಅರ್ಚನಾ ಉಡುಪ, ಸುರೇಖಾ, ರಮೇಶ್ಚಂದ್ರ, ನಿತಿನ್ ರಾಜಾರಾಮಶಾಸ್ತ್ರಿ, ಶಂಕರ್ ಶಾನುಭಾಗ್, ಜೋಗಿ ಸುನೀತಾ, ಆನಂದ ಮೂದಲಗೆರೆ, ಮಂಗಳಾ, ಸುನೀತಾ ಚಂದ್ರಕುಮಾರ್, ನಾಗಚಂದ್ರಿಕಾ ಭಟ್, ಕಿಕ್ಕೇರಿ ಕೃಷ್ಣಮೂರ್ತಿ, ಫಲ್ಗುಣ, ಜಯಶ್ರೀ, ದೊಡ್ಡವಾಡ, ಪಂಚಮ್ ಹಳಬಂಡಿ ಮುಂತಾದವರು ತುಂಬಾ ಒಳ್ಳೆಯ ಕವಿತೆಗಳನ್ನು ಆಯ್ಕೆ ಮಾಡಿಕೊಂಡು ಅಬ್ಬರವಿಲ್ಲದೆ ಸಾಹಿತ್ಯಕ್ಕೆ ಮಹತ್ವ ಕೊಟ್ಟು ಸುಗಮ ಸಂಗೀತದಲ್ಲಿ ಒಳ್ಳೆಯ ಸಾಧನೆಯನ್ನು ಮಾಡುತ್ತಿದ್ದಾರೆ. ಫಲ್ಗುಣರು 'ಕವಿದನಿ' ಹೆಸರಿನಲ್ಲಿ ಗೀತಗಾಯನ ಜೊತೆಗೆ ಕವಿತಾ ವಾಚನ ಮಾಡುವ ವಿಶಿಷ್ಟ ಕಾರ್ಯಕ್ರಮ ಮಾಡುತ್ತಿದ್ದಾರೆ. ಕಿಕ್ಕೇರಿ, ಶಂಕರ ಶಾನುಭಾಗ್, ರಾಘವೇಂದ್ರ ಬೀಜಾಡಿ ಅಂತವರು ಬೇರೆ ರೀತಿಯ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಪ್ರವೀಣ ಡಿ. ರಾವ್, ಪ್ರವೀಣ್ ಗೋಡ್ಖಿಂಡಿಯವರು ಕೂಡ ನನಗೆ ತುಂಬಾ ಇಷ್ಟವಾಗುತ್ತಾರೆ. ನಾನು ಹೊಸಬರ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದರಿಂದ ಇಂತಹ ವಿನೂತನ ಪ್ರಯೋಗಗಳನ್ನು ನೋಡಿದಾಗಲೆಲ್ಲಾ ತುಂಬಾ ಹೆಮ್ಮೆಯೆನಿಸುತ್ತದೆ. ಗುಂಪುಗಾರಿಕೆ, ವೈಮನಸ್ಸು ಎಲ್ಲವನ್ನು ಮರೆತು ಇವಕ್ಕೆ ನಾವು ಬೆನ್ನುತಟ್ಟಿ ಪ್ರೋತ್ಸಾಹಿಸಲೇಬೇಕು. ನಾನಂತೂ ಈ ತತ್ವವನ್ನು ಅನುಸರಿಸುತ್ತಾ ಬಂದಿರುವೆ. 



ಪ್ರ : ಸುಗಮ ಸಂಗೀತ ಕ್ಷೇತ್ರದಲ್ಲಿ ನೀವು ಹೆಚ್ಚು ಒಡನಾಡಿದವರ  ಬಗ್ಗೆ ತಿಳಿಸಿ? ನೀವು ಕಂಡ ಹಾಗೆ ಅವರ ಸಂಯೋಜನೆಯ ಶೈಲಿ ಹೇಗಿತ್ತು?
ಎಚ್ಎಸ್ವಿ : ಮೈಸೂರು ಅನಂತಸ್ವಾಮಿ ಮತ್ತು ಅಶ್ವಥ್ ಇಬ್ಬರೂ ನನಗೆ ತುಂಬಾ ಆಪ್ತರಾಗಿದ್ದವರು. ಈ ಇಬ್ಬರಲ್ಲೂ ಒಂದೊಂದು ವಿಶೇಷವಾದ ಶೈಲಿಯಿತ್ತು. ಎರಡನ್ನೂ ಹೋಲಿಕೆ ಮಾಡುವಂತಿರಲಿಲ್ಲ. ಅನಂತಸ್ವಾಮಿ ಅವರು ಯಾವುದೇ ಹಾಡನ್ನು ಸಂಯೋಜನೆ ಮಾಡುವ ಮುನ್ನ ಏಕಾಂಗಿಯಾಗಿ ಕುಳಿತು ರಾಗದ ಬಗ್ಗೆ ಯೋಚಿಸಿ ಆಮೇಲೆ ಕವಿಗಳನ್ನ, ಆಪ್ತರನ್ನು ಕರೆಸಿ ಆ ರಾಗವನ್ನು ಕೇಳಿಸಿ ಆನಂತರ ಕವಿತೆಗೆ ರಾಗಸಂಯೋಜನೆ ಮಾಡುತ್ತಿದ್ದರು. ಆದರೆ ಅಶ್ವಥ್ರದ್ದು ಇದಕ್ಕೆ ವಿರುದ್ಧ. ಆರಂಭದಲ್ಲೇ ಕವಿಗಳನ್ನು ಕರೆಸಿ ಅವರ ಎದುರೇ ಕವಿತೆಗೆ ರಾಗಸಂಯೋಜನೆ ಮಾಡಿ ಹಾಡಿ ತೋರಿಸುತ್ತಿದ್ದರು. ಇಬ್ಬರ ನಡುವೆಯೂ ನಾನು ಅದೆಷ್ಟೋ ಸುಂದರ ದಿನಗಳನ್ನು ಕಳೆದಿದ್ದೇನೆ. ನನಗಂತೂ ಅವರ ಜೊತೆ ಕುಳಿತುಕೊಂಡು ಸಂಯೋಜನೆಯ ಬಗ್ಗೆ ಮಾತನಾಡುವುದೇ ಅತ್ಯಂತ ಖುಷಿಯ ವಿಚಾರವಾಗಿತ್ತು. ಇಬ್ಬರೂ ಜೀನಿಯಸ್ಗಳೇ. ಇಂತವರ ಜೊತೆ ನನಗೆ ಆತ್ಮೀಯ ಒಡನಾಟವಿದ್ದದ್ದೇ ನನ್ನ ಭಾಗ್ಯವೆಂದುಕೊಳ್ಳುವೆ. ಹೊಸತಲೆಮಾರಿನವರಲ್ಲಿ ಉಪಾಸನಾ ಮೋಹನ್ ನನಗೆ ಆಪ್ತರು. ಅವರು ಕೂಡ ಈ ಕ್ಷೇತ್ರದಲ್ಲಿ ತುಂಬಾ ಕೆಲಸಗಳನ್ನು ಮಾಡುತ್ತಿದ್ದಾರೆ.

ಪ್ರ : ಭಾವಗೀತೆಗಳನ್ನು ಜನಪ್ರಿಯಗೊಳಿಸುವ ಮಾಧ್ಯಮಗಳ ಬಗ್ಗೆ ತಮ್ಮ ಅಭಿಪ್ರಾಯವೇನು?
ಎಚ್ಎಸ್ವಿ : ಇತ್ತೀಚಿನ ದಿನಗಳಲ್ಲಿ ಭಾವಗೀತೆಯ ಹಾಡುಗಳನ್ನು  ಮಾರ್ಕೆಟಿಂಗ್ ಮಾಡುವ ಹೊಸ ರೀತಿಯ ಟ್ರೆಂಡ್ ಶುರುವಾಗಿದೆ. ಟೀವಿ ಮಾಧ್ಯಮ, ಸೋಷಿಯಲ್ ಮೀಡಿಯಾ, ಆನ್ಲೈನ್ ಮಾಧ್ಯಮವನ್ನು ಬಳಸಿಕೊಂಡು ಭಾವಗೀತೆಗಳನ್ನು ಮುಟ್ಟಿಸುವ ಪ್ರಯತ್ನ ಆಗುತ್ತಿದೆ. ಯೂಟ್ಯೂಬ್ನಲ್ಲಿ ಗೀತೆಗಳನ್ನು ಗಾಯನ ಮಾಡಿ ಅದನ್ನು ಸುಂದರವಾಗಿ ಚಿತ್ರೀಕರಿಸಿ ಹಾಕುತ್ತಿದ್ದಾರೆ. ಒಂದೊಳ್ಳೆಯ ಹಾಡು ಬಂದರೆ ಅದನ್ನು ಲಕ್ಷಾಂತರ ಜನರು ನೋಡುತ್ತಾರೆ ಅನ್ನುವುದಕ್ಕೆ ನನ್ನ ಕೆಲವು ಗೀತೆಗಳೇ ಸಾಕ್ಷಿಯಾಗಿವೆ. ಸಂಗೀತ ನಿರ್ದೇಶಕರಾದ ಕೃಷ್ಣ ಉಡುಪ, ರಿಕ್ಕಿ ಕೇಜ್ ಇವರು ನನ್ನ ಭಾವಗೀತೆಗಳನ್ನು ಸಂಯೋಜನೆ ಮಾಡಿ ಯೂಟ್ಯೂಬ್ನಲ್ಲಿ ಹಾಕಿದ್ದರು. ಈಗಾಗಲೇ ಈ ಹಾಡುಗಳನ್ನು ಜಗತ್ತಿನಾದ್ಯಂತ ಲಕ್ಷಾಂತರ ಜನರು ನೋಡಿದ್ದಾರೆ. ನನಗನಿಸಿದ ಮಟ್ಟಿಗೆ ಸುಗಮ ಸಂಗೀತ ತನ್ನ ವ್ಯಾಪ್ತಿಯನ್ನು ಬೆಳೆಸಿಕೊಳ್ಳಲು ಅಂತರ್ಜಾಲ ಮಾಧ್ಯಮ ಅತ್ಯಂತ ಪ್ರಭಾವಶಾಲಿಯಾಗಿದೆ. ಇದು ಅತ್ಯಂತ ಜನಪ್ರಿಯವಾಗುತ್ತಿರುವುದರಿಂದ ಹೆಚ್ಚಿನ ಗಾಯಕರು ಇದರ ಕಡೆಗೆ ವಾಲುತ್ತಿರುವುದು ಖುಷಿಯ ವಿಚಾರ.

ಪ್ರ : ಸುಗಮ ಸಂಗೀತ ಕ್ಷೇತ್ರಕ್ಕೆ ಹೊಸತಲೆಮಾರಿನ ಕವಿಗಳ ಕೊಡುಗೆ ಕಾಣುತ್ತಿದೆಯೇ? 
ಎಚ್ಎಸ್ವಿ : ಭಾವಗೀತೆಗಳನ್ನು ಬರೆಯುವ ಹೊಸಕವಿಗಳು ಕಾಣಸಿಗುವುದು ಕಷ್ಟವಾಗಿದೆ. ರಂಜನಿಪ್ರಭು ಸದ್ಯ ಚೆನ್ನಾಗಿ ಬರೆಯುತ್ತಿದ್ದಾರೆ. ಇವರ ಸಂಖ್ಯೆ ಇನ್ನಷ್ಟು ಹೆಚ್ಚಬೇಕಿದೆ. ಭಾವಗೀತೆ ಅನ್ನುವುದು ಕಾವ್ಯದ ಒಂದು ವಿಶಿಷ್ಟ ಪ್ರಾಕಾರ ಆಗಿರುವುದರಿಂದ ಅದನ್ನು ಎಲ್ಲ ಕವಿಗಳು ಬರೆಯಲಿಕ್ಕೆ ಆಗುತ್ತಿಲ್ಲ. ಒಳ್ಳೆ ಕವಿತೆ ಬರೆಯುತ್ತಿರುವವರು ಅಷ್ಟೇ; ಚೆನ್ನಾಗಿ ಭಾವಗೀತೆ ಬರೆಯುತ್ತಾರೆ ಅಂತ ಹೇಳುವುದು ಸ್ವಲ್ಪ ಕಷ್ಟ. ಭಾವಗೀತೆ ಬರೆಯಲಿಕ್ಕೆ ಒಂದು ಮನೋಧರ್ಮ ಬೇಕು. ಇದು ಒಬ್ಬ ಕವಿಯಲ್ಲೆ ಅಡಕವಾಗಿರುವುದರಿಂದ ಅದನ್ನು ಕವಿಯೇ ಬರೆದರೆ ಹೆಚ್ಚು ಸೂಕ್ತ. ಹಾಗಂತ ಭಾವಗೀತೆ ಬರೆಯಲಿಕ್ಕೆ ಹಠಹಿಡಿದು ಕೂತು ಬರೆದರೆ ಆಗುವಂತಹುದ್ದಲ್ಲ. ಭಾವಗೀತೆ ರಚನೆಯಲ್ಲಿ ಹೊಸಬರು ಪಳಗಬೇಕಿದೆ.   

ಪ್ರ : ಸುಗಮ ಸಂಗೀತದ ಇಂದಿನ ಸವಾಲುಗಳೇನು?
ಎಚ್ಎಸ್ವಿ : ಇಂದಿನ ಸವಾಲುಗಳ ಬಗ್ಗೆ ನಾವು ಚಿಂತಿಸುವುದಾದರೆ ಸಿನಿಮಾದಲ್ಲಿ ಒಂದು ಹೊಸ ರೀತಿಯ ಪ್ರವೃತ್ತಿ ಶುರುವಾಗಿದೆ. ಇದಕ್ಕೆ ಭಾವಗೀತೆಗಳು ಯಾವುದೇ ಕಾರಣಕ್ಕೂ ಮಾರುಹೋಗಬಾರದು. ಭಾವಶುದ್ಧಿ, ರಾಗಶುದ್ಧಿಯಂತಹ ತನ್ನ ಗುಣಧರ್ಮ ವಿಶೇಷತೆಗಳನ್ನು, ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು. ಸ್ವಂತಿಕೆಯನ್ನು ಬಿಟ್ಟುಕೊಡಬಾರದು. ಇದರಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೆ, ಭಾವಗೀತೆಯು ಇನ್ನೊಂದು ಸಿನಿಮಾ ಗೀತೆಯಾಗಿ ಗುರುತಿಸಲ್ಪಡುತ್ತದೆಯಷ್ಟೇ. ನಮ್ಮ ಹಿಂದಿನ ಗಾಯಕರನ್ನು ನಾವು ನೋಡಿದಾಗ ಶಿವಮೊಗ್ಗ ಸುಬ್ಬಣ್ಣ, ಅಶ್ವಥ್, ರತ್ನಮಾಲಾ, ಮಾಲತಿಶರ್ಮ ಅವರಂತಹ ಗಾಯಕರು ತಮ್ಮ ಕಛೇರಿಗಳಲ್ಲಿ ಸಿನಿಮಾ ಹಾಡುಗಳನ್ನು ಹಾಡುತ್ತಿರಲಿಲ್ಲ. ಆದರೆ ಇಂದಿನ ಗಾಯಕರು ಎಲ್ಲ ರೀತಿಯ ಹಾಡುಗಾರಿಕೆಗೂ ತಮ್ಮನ್ನು ಒಗ್ಗಿಸಿಕೊಂಡಿದ್ದಾರೆ. ಹಿಂದಿನವರಂತೆ ಈಗಿನವರಲ್ಲಿ ಆ ಮಾಧ್ಯಮನಿಷ್ಠೆ ಕಡಿಮೆಯಾಗಿದೆ ಅಂತ ಹೇಳಬಹುದು. ಈ ರೀತಿ ಆಗಬಾರದು ಅನ್ನುವುದು ನನ್ನ ಭಾವನೆ.


 ಪ್ರ : ಸುಗಮ ಸಂಗೀತ ಕ್ಷೇತ್ರದಲ್ಲಿ ಬೆಳವಣಿಗೆಯ ದೃಷ್ಟಿಯಿಂದ ಏನೆಲ್ಲಾ ಪ್ರಯೋಗಗಳನ್ನು ಮುಂದಿನ ದಿನಗಳಲ್ಲಿ ಮಾಡಬಹುದು?
ಎಚ್ಎಸ್ವಿ : ಮುಂದಿನ ದಿನಗಳಲ್ಲಿ ನಾನು ನಿರೀಕ್ಷೆ ಮಾಡುವುದಾದರೆ, ಈ ಭಾವಗೀತಾ ಗಾಯನ ಪದ್ಧತಿ ಇನ್ನಷ್ಟು ವಿಸ್ತಾರವಾಗಬೇಕು. ಇಂದು ಈ ಕ್ಷೇತ್ರಕ್ಕೆ ವಸ್ತುವೈವಿಧ್ಯತೆ ಅವಶ್ಯಕವಾಗಿದೆ. ಭಾವಗೀತೆಗಳು ಅಂದರೆ ಕೇವಲ ಪ್ರೀತಿ-ಪ್ರೇಮಕ್ಕೆ ಮಾತ್ರ ಸೀಮಿತವಾಗದೆ, ಮಾತೃವಾತ್ಸಲ್ಯ, ಭಕ್ತಿ, ಸ್ನೇಹ, ಸಾಮಾಜಿಕ ಕಳಕಳಿ, ಬಂಡಾಯವನ್ನು ಎತ್ತಿಹಿಡಿಯುವಂತಹದ್ದು, ದೇಶ-ಭಾಷೆಯ ಮಹಿಮೆಯ ಭಾವಗೀತೆಗಳು ಬರುವಂತಾಗಬೇಕು. ಆಗ ಈ ಕ್ಷೇತ್ರದ ವಿಸ್ತಾರ ಇನ್ನಷ್ಟು ಹಿಗ್ಗುತ್ತದೆ. ಎಲ್ಲ ಭಾವ, ರಸಗಳನ್ನು ತುಂಬಿದಂತಹ ಕವಿತೆಗಳನ್ನು ಆಯ್ಕೆ ಮಾಡಿಕೊಂಡು ಗಾಯನ ಮಾಡಬೇಕು.  ಉದಾಹರಣೆಗೆ ಕುವೆಂಪು ಅವರಂತಹ ಮೇರುಕವಿಗಳು ಎಲ್ಲ ರೀತಿಯ ಕವಿತೆಗಳನ್ನು ರಚನೆ ಮಾಡಿದ್ದಾರೆ. ಆದರೆ ಅವರ ಪ್ರಕೃತಿ, ಪ್ರೇಮಕ್ಕೆ ಸೀಮಿತವಾದ ಭಾವಗೀತೆಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಗಾಯನ ಮಾಡಲಾಗುತ್ತಿದೆ. ಅವರ ಬೇರೆಬೇರೆ ವಿಷಯಗಳ ಕವಿತೆಗಳನ್ನು ಆಯ್ಕೆ ಮಾಡಿಕೊಂಡು ಮುಂಬರುವ ಹೊಸ ಗಾಯಕರು ಹಾಡುವಂತಾಗಬೇಕು. ಕವಿತೆಗಳ ಆಯ್ಕೆಯಲ್ಲಿ ಇನ್ನಷ್ಟು ಮುಕ್ತವಾಗಿ ಯೋಚಿಸಬೇಕಾಗಿದೆ. ಕನರ್ಾಟಕದ ಎಲ್ಲ ಪ್ರಾಂತ್ಯಗಳ ಕವಿಗಳ ಕವಿತೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಹಾಗಾಗಿ ಈ ಕ್ಷೇತ್ರದಲ್ಲಿ ಸಾಧನೆ ಮಾಡಲು ಬರುವ ಹೊಸಬರಿಗೆ ಬಹಳಷ್ಟು ಸವಾಲುಗಳಿವೆ.

ಪ್ರ : ಈ ಬಾರಿ ಶಿರಸಿಯಲ್ಲಿ ಸುಗಮ ಸಂಗೀತ ಸಮ್ಮೇಳನ ನಡೆಯುತ್ತಿರುವುದಕ್ಕೆ ತಮ್ಮ ಅನಿಸಿಕೆ ಏನು?
ಎಚ್ಎಸ್ವಿ : ಸುಗಮ ಸಂಗೀತ ಪರಿಷತ್ನವರು ಪ್ರತಿವರ್ಷ ಇಂತಹ ದೊಡ್ಡ ಸಮ್ಮೇಳನವನ್ನು ಮಾಡುತ್ತಿರುವುದೇ ಖುಷಿಯ ವಿಚಾರ. ಒಂದೆಡೆ ಸಾವಿರಾರು ಸಂಗೀತಾಸಕ್ತರನ್ನು ಸೇರಿಸಿ ಸಮ್ಮೇಳನ ಮಾಡುವುದು ಅಷ್ಟು ಸುಲಭದ ಮಾತಲ್ಲ. ಅದನ್ನು ಮುದ್ದುಕೃಷ್ಣ ತುಂಬಾ ಚೆನ್ನಾಗಿ ಮಾಡಿದರು. ಈಗ ಕಿಕ್ಕೇರಿ ಕೃಷ್ಣಮೂರ್ತಿ ಆ ಕೆಲಸವನ್ನು ಮುಂದುವರಿಸಿದ್ದಾರೆ. ಸುಗಮ ಸಂಗೀತ ಕ್ಷೇತ್ರದ ಇಷ್ಟು ವರ್ಷಗಳ ಪರಂಪರೆಗೆ ಇಂತಹ ಸಮ್ಮೇಳನಗಳು ತುಂಬಾ ಅವಶ್ಯಕ. ಈ ಬಾರಿ ಸಮ್ಮೇಳನವು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಆಗುತ್ತಿದೆ. ಈ ಜಿಲ್ಲೆಯಲ್ಲಿ ಗಾಯಕರು ಮತ್ತು ಸಂಗೀತ ಪ್ರೇಮಿಗಳ ಸಂಖ್ಯೆ ಹೆಚ್ಚಿರುವುದರಿಂದ ಈ ಸಂಭ್ರಮ ಅರ್ಥಪೂರ್ಣವಾಗಿ ಯಶಸ್ವಿಯಾಗಲೆಂದು ನಾನು ಹಾರೈಸುತ್ತೇನೆ.


                                        

Wednesday, 3 January 2018

`ಬೇರು' ಕಾದಂಬರಿ



ಪ್ರೀತಿಯ ಸ್ನೇಹಿತರೇ,
 ನಾನೊಂದು ಕಾದಂಬರಿ ಬರೆಯಬೇಕೆಂಬ ಅನೇಕ ವರ್ಷಗಳ ಆಸೆ ಈ ವರ್ಷ ಈಡೇರಿದೆ. 
ಈ ವರ್ಷ ನಾನು ಬರೆದಿರುವ ಕಾದಂಬರಿಯ ಹೆಸರು `ಬೇರು'. ಸತತ ಮೂರ್ನಾಲ್ಕು ವರ್ಷಗಳ ಕಾಲ ಒಂದು ಕಥಾವಸ್ತುವಿನ ಚಿಂತನ-ಮಂಥನದಿಂದಾಗಿ ಅದು ಈ ಕಾದಂಬರಿಯ ರೂಪ ಪಡೆದುಕೊಂಡಿದೆ. ವಾಸ್ತವ ಜಗತ್ತಿನ ಕೆಲವು ಎಳೆಗಳು, ಅವುಗಳ ನಡುವಿನ ಬದುಕಿನ ಹೋರಾಟದ ವಸ್ತುವನ್ನಿಟ್ಟುಕೊಂಡು ಈ ಕಾದಂಬರಿ ಬರೆಯುವ ಪ್ರಯತ್ನ ಮಾಡಿರುವೆ.
ಈ ಕೃತಿಗೆ ಕನ್ನಡದ ಖ್ಯಾತ ವಿಮರ್ಶಕರಾಗಿರುವ ಪ್ರೊ.O L ನಾಗಭೂಷಣಸ್ವಾಮಿಗಳು ಬೆನ್ನುಡಿ ಬರೆದುಕೊಟ್ಟಿರುವುದು ನನ್ನ ಭಾಗ್ಯವೆಂದುಕೊಳ್ಳುವೆ.
ಕಾದಂಬರಿಯನ್ನು ಓದಿ ಅದರ ವಸ್ತುವಿಗೆ ತಕ್ಕಂತೆ ಮುಖಪುಟ ಡಿಸೈನ್ ಮಾಡಿದ ಸೌಮ್ಯ ಕಲ್ಯಾಣಕರ್ 
ಮತ್ತು ಕಾದಂಬರಿ ರಚನೆಯ ಸಂದರ್ಭ ಮತ್ತು ಬರೆದ ನಂತರ ಕಥಾವಸ್ತುವಿನ ಚಚರ್ೆ, ಚಿಂತನೆಯಲ್ಲಿ ಭಾಗಿಯಾಗಿ ಅದನ್ನು ಒಳ್ಳೆಯ ಕಾದಂಬರಿಯನ್ನಾಗಿ ರೂಪಿಸುವಲ್ಲಿ ನೆರವಾದ ಆತ್ಮೀಯ ಸ್ನೇಹಿತರನ್ನೂ ಈ ಕ್ಷಣ ನೆನಪಿಸಿಕೊಳ್ಳುತ್ತೇನೆ.
ನನ್ನ ಹಿಂದಿನ ಕಥಾಸಂಕಲನಗಳಾದ ಅಮ್ಮನ ಆಟೋಗ್ರಾಫ್, ದೇವರ ಜೋಳಿಗೆ, ಬ್ರಿಟಿಷ್ ಬಂಗ್ಲೆ ಮತ್ತು ಕವನ ಸಂಕಲನ `ತಿಗರಿಯ ಹೂಗಳು' -ಎಲ್ಲವೂ ನಿಮ್ಮೆಲ್ಲರ ಓದು, ಸಹಕಾರ, ಪ್ರೋತ್ಸಾಹದಿಂದ ಉತ್ತಮ ಕೃತಿಗಳೆಂದು ಗುರುತಿಸಿಕೊಂಡಿವೆ. ನಿಮ್ಮ ಪ್ರೋತ್ಸಾಹವನ್ನು `ಬೇರು' ಕಾದಂಬರಿಗೂ ನಿರೀಕ್ಷಿಸುತ್ತೇನೆ.
ಹೆಸರು: ಬೇರು
ಪುಟಗಳು: 372
ಬೆಲೆ: 330/-
ಪ್ರಕಾಶನ : ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
ಪುಸ್ತಕ ಜನವರಿ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಹೆಚ್ಚಿನ ಮಾಹಿತಿಗಳನ್ನು ತಿಳಿಸುವೆ.
ಧನ್ಯವಾದಗಳು
ಇಂತಿ
ತಮ್ಮವ
ಫಕೀರ
(ಶ್ರೀಧರ ಬನವಾಸಿ ಜಿ ಸಿ)