Sunday, 8 September 2013

ಗಣೇಶ ಚತುರ್ಥಿ ಹಬ್ಬದ ನೆನಪಿನ ಜೊತೆ ಅಂತ್ಯಗೊಂಡ ಮನೆತನದ ಕಲೆ…!


ಪ್ರತಿವರ್ಷದ ಗಣೇಶನ ಹಬ್ಬ ಎಲ್ಲರಿಗೂ ಒಂದು ಸಡಗರ. ಚಿಕ್ಕದು, ದೊಡ್ಡದು ಅನ್ನದೇ ತಮ್ಮ ಆಸೆಗನುಸಾರವಾಗಿ ಗಣೇಶನ ಮೂರುತಿಗಳನ್ನು ಮಾರುಕಟ್ಟೆಯಿಂದ ತಂದು ಪೂಜೆ ಮಾಡಿ, ಗಣಪತಿಗೆ ಲಡ್ಡು, ಮೋದಕ, ಪಾಯಸಗಳ ಎಡೆ ಇಟ್ಟು, ಸಾಯಂಕಾಲ ಊರ ದೇವಸ್ಥಾನ, ಅಕ್ಕಪಕ್ಕದ ಮನೆ, ಕೇರಿಗಲ್ಲಿಗಳಲ್ಲಿ ಇಟ್ಟ ಗಣಪತಿಗಳನ್ನು ನೋಡಿ ಪಂಚಗಜ್ಜಾಯ ಮಿಂದು, ಚಂದ್ರ ಕಾಣುವ ಎಂಬ ಭಯದೊಂದಿಗೆ, ರಾತ್ರಿಯಾದೊಡೆ ಲಘುಬಗೆಯ ಪಟಾಕಿ ಸಿಡಿಮದ್ದುಗಳ ಆಚರಣೆಯೊಂದಿಗೆ ಮತ್ತೆ ಸಿಹಿಯೂಟದೊಂದಿಗೆ ಅಂತ್ಯವಾಗುವ ಗಣೇಶ ಚತುರ್ಥಿ ಹಬ್ಬ, ಜೋರಾಗಿ ಮಾಡುವವರಿಗೆ ನಿಜಕ್ಕೂ ದೊಡ್ಡ ಹಬ್ಬವೇ ಸರಿ. ಆದರೆ ಎಲ್ಲರೂ ಮಾಡುವ ಗಣೇಶನ ಹಬ್ಬದಂತೆ ನಮ್ಮ ಮನೆಯ ಹಬ್ಬ ವಿಭಿನ್ನವಾಗಿರಲಿಲ್ಲ. ಹೆಚ್ಚಿನವರಿಗೆ ಹಬ್ಬದಂದು ಹೊರಗಡೆಯಿಂದ ಹಣ ಕೊಟ್ಟು ಗಣೇಶನನ್ನು ತಂದು ಪೂಜೆ ಮಾಡುವುದು ದೊಡ್ಡ ಖುಷಿಯ ಸಂಗತಿಯಾಗಿದ್ದರೆ, ನಮ್ಮ ಮನೆತನದವರಿಗೆ, ಮನೆಯಲ್ಲಿ ಗಣಪತಿ ಇಟ್ಟು ಪೂಜೆಮಾಡುವವರಿಗೆ ಮಣ್ಣಿನಲ್ಲಿ ಗಣಪತಿಯನ್ನು ಮಾಡಿಕೊಡುವುದೇ ಪ್ರವೃತ್ತಿಯಾಗಿತ್ತು, ಅದೇ ದೊಡ್ಡ ಹಬ್ಬವಾಗಿತ್ತು ನಮಗೆ. ಬನವಾಸಿಯ ಸುತ್ತಮುತ್ತಲಿನ ಹತ್ತೂರ ಹಳ್ಳಿಯಿಂದ ಹಬ್ಬದ ದಿನ ನಮ್ಮ ಮನೆಗೆ ಗಣಪತಿ ಕೊಳ್ಳಲು ಜನರು ಬರುವುದೇ ದೊಡ್ಡ ಆಚರಣೆಯಾಗಿತ್ತು.

ಹಬ್ಬ ಮಾಡುವವರಿಗೆ ಗಣಪತಿಗಳನ್ನು ಮಣ್ಣಿನಲ್ಲಿ ಮಾಡಿಕೊಡುವುದು ನಮಗೂ ಕೂಡ ದೊಡ್ಡ ಖುಷಿಯ ಸಂಗತಿಯಾಗಿತ್ತು. ಇತ್ತೀಚೆಗೆ ತೀರಿಕೊಂಡ ನಮ್ಮ ಮಾವ ಕುಂಬಾರ ಶಿವಾನಂದಪ್ಪನವರೊಂದಿಗೆ ನಾಲ್ಕೈದು ದಶಕಗಳೊಂದಿಗೆ ಮಾಡುತ್ತಿದ್ದ ಮಣ್ಣಿನಿಂದ ಗಣಪತಿ ಮಾಡುವ ಪ್ರವೃತ್ತಿಯ ಜೊತೆಗೆ ಕಲೆಯೂ ಅವರೊಂದಿಗೆ ಹಾಗೆಯೇ ಕಣ್ಣು ಮುಚ್ಚಿತು. ಇದಕ್ಕೂ ಮೊದಲು ನಾವು ಮಾಡುತ್ತಿದ್ದ ಕುಂಬಾರಿಕೆಯ ವೃತ್ತಿಯೂ ಕೂಡ ನಮ್ಮ ತಾತ ಕುಂಬಾರ ಮಂಜಣ್ಣ, ಅಜ್ಜಿ ಹಿರಿಗಮ್ಮರು ತೀರಿಕೊಂಡ ಮೇಲೆ ಅದು ಕೂಡ ಮಣ್ಣು ಸೇರಿತು. ಈಗ ಮನೆತನದ ಕಲೆಯನ್ನು ಮುಂದುವರೆಸಿಕೊಂಡು ಹೋಗುವ ಮೊಮ್ಮಕ್ಕಳು ಯಾರೂ ಇಲ್ಲ. ಎಲ್ಲರೂ ಅವರವರ ಕೆಲಸಗಳೊಂದಿಗೆ ಬ್ಯುಸಿಯಾಗಿದ್ದಾರೆ. ಇವರಲ್ಲಿ ನಾನು ಕೂಡ ಸೇರುತ್ತೇನೆ. ನಾನು ಮನೆತನದ ಕಲೆಯನ್ನು ಕಲಿತಿದ್ದರೂ ಊರಿಗೆ ಹೋಗಿ ಮಾಡುವ ಪರಿಸ್ಥಿತಿಯಲ್ಲಿ ನಾನು ಇಲ್ಲ. ಎರಡು ತಿಂಗಳುಗಳ ಹಿಂದೆ ತೀರಿಕೊಂಡ ನಮ್ಮ ಮಾವನೊಂದಿಗೆ ವರ್ಷದ ಗಣೇಶ ಹಬ್ಬವೂ, ಹಿಂದಿನ ಅನೇಕ ವರ್ಷಗಳನ್ನು ನೆನಪು ಮಾಡುತ್ತಿತ್ತು.

ಮಣ್ಣಿನಿಂದ ಮಡಿಕೆ, ಕುಡಿಕೆ, ಗಣಪತಿಯ ಮೂರ್ತಿಗಳನ್ನು ಸುಮಾರು 40 ವರ್ಷಗಳಿಂದ ಮಾಡುತ್ತಾ ಬಂದಿರುವ ನಮ್ಮ ಕುಟುಂಬದವರಿಗೆ ಇದೊಂದು ವಿಶಿಷ್ಟ ಕಲೆಯಾಗಿತ್ತು ಅಂತ ಹೇಳಬಹುದು. ನಮ್ಮ ತಾತ ಕುಂಬಾರ ಮಂಜಣ್ಣರು ಪ್ರಾರಂಭಿಸಿದ್ದ ಮಣ್ಣಿನ ಕಲೆಯ ಕೆಲಸವನ್ನು ನಮ್ಮ ಮಾವ ಶಿವಾನಂದಪ್ಪನವರು ಮುಂದುವರೆಸಿಕೊಂಡಿದ್ದರು. ನಮ್ಮ ಮಾವನ ನಂತರ ಮನೆತನದ ಕಲೆಯನ್ನು ನನ್ನ ಹೊರತಾಗಿ ಬೇರೆ ಯಾವ ಮೊಮ್ಮಕ್ಕಳು ಕಲಿಯಲಿಲ್ಲ. ನಾನು ಕೂಡ ನನ್ನ ಮಾವನ ಜೊತೆಗೆ ಸುಮಾರು 16 ವರ್ಷಗಳಿಂದ  ಮಣ್ಣಿನ ಕೆಲಸದಲ್ಲಿ ಭಾಗಿಯಾಗಿ, ಪ್ರತಿವರ್ಷ ಗಣಪತಿಗಳನ್ನು  ಮಾಡಿ ಬರುತ್ತಿದ್ದೆ. ನಾನು ಮಣ್ಣಿನಲ್ಲಿ ಗಣಪತಿಗಳನ್ನು ಮಾಡಲಿಕ್ಕೆ, ಕಲೆ ನನಗೆ ಒಲಿಯಲಿಕ್ಕೆ ನನ್ನ ಮಾವ  ನನಗೆ ನೀಡಿದ ತರಬೇತಿಯೇ ಕಾರಣ. ಇದರ ಜೊತೆಗೆ ನನಗೂ ಚಿತ್ರಕಲೆ, ಮಣ್ಣಿನ ಕೆಲಸದಲ್ಲಿ ವಿಪರೀತ ಆಸಕ್ತಿಯಿದ್ದುದರಿಂದ ನಾನು ಮನೆತನದ ಕಲೆಯನ್ನು ಕಲಿತಿದ್ದೆ. ಬನವಾಸಿಯಲ್ಲಿ ಇರುವವರೆಗೂ ನಾನು ಪ್ರತಿವರ್ಷ ನಾನು ಮಾವನ ಜೊತೆ ಗಣಪತಿ ಮಾಡುವ ಕೆಲಸದಲ್ಲಿ ಭಾಗಿಯಾಗಿರುತ್ತಿದ್ದೆ ನಂತರ ನನ್ನ ವಿದ್ಯಾಭ್ಯಾಸ, ಉದ್ಯೋಗ ಅಂತ ಊರು ಬಿಟ್ಟ ಮೇಲೆ ಬನವಾಸಿಯಿಂದ ದೂರ ಇದ್ದರೂ, ಪ್ರತಿವರ್ಷ ಗಣೇಶನನ್ನು ಮಾಡಲೆಂತಲೇ ಊರಿಗೆ ಹೋಗಿ ಮಣ್ಣಿನಿಂದ ಕೆಲವು ಮೂರ್ತಿಗಳನ್ನು ಮಾಡಿ ಬರುತ್ತಿದ್ದೆ. ಮಣ್ಣಿನ ಮೂರ್ತಿಗಳಿಗೆ ಬಣ್ಣ ಹಚ್ಚುವಾಗಲೂ ನಾನು ಇರುತ್ತಿದ್ದೆ. ನನಗೆ ಬುದ್ದಿ ಬಂದಾಗಿನಿಂದಲೂ ಕಳೆದ ವರ್ಷದವರೆಗೂ ನಾನು ಮಣ್ಣಿನಿಂದ ಗಣಪತಿಯನ್ನು ಮಾಡುವುದನ್ನು ಬಿಟ್ಟಿರಲಿಲ್ಲ. ಕಳೆದ ಎರಡು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಮ್ಮ ಮಾವನಿಗೆ ಮೊದಲಿನಂತೆ ಕುಳಿತು ಮಣ್ಣಿನಿಂದ ಗಣಪತಿಗಳನ್ನು ಮಾಡಲು ಆಗುತ್ತಿರಲಿಲ್ಲ. ಕಳೆದ ವರ್ಷವೇ ಗಣಪತಿ ಮಾಡುವುದನ್ನು ನಿಲ್ಲಿಸಿಬಿಡೋಣ ಅಂತ ಹೇಳುತ್ತಲೇ ಇದ್ದ ಅವರಿಗೆ ನಾವೇ ಬಲವಂತವಾಗಿ ಕೊನೆ ವರ್ಷದವರೆಗೂ ಮಾಡುವಂತೆ ಮಾಡಿದ್ದೇವು. ವರ್ಷ ಸಾಧ್ಯವಾದರೆ ಮಾಡೋಣ, ಇಲ್ಲವಾದರೆ ಬಿಟ್ಟುಬಿಡೋಣ ಅಂತ ಹೇಳಿದ್ದ, ಅವರಿಗೆ ಕಳೆದ 6 ತಿಂಗಳಿಂದ ವಿಪರೀತ ಅನಾರೋಗ್ಯ ಕಾಡಿ, ಸಾವಿನೊಂದಿಗೆ ಅಂತ್ಯವಾಗಿತ್ತು. ನಮ್ಮ ಮಾವನ ನಂತರ ವೃತ್ತಿಯನ್ನು ಗಂಭೀರವಾಗಿ ಯಾರು ತೆಗೆದುಕೊಳ್ಳಲಿಲ್ಲ. ನನಗೆ ಆಸಕ್ತಿ ಇದೆ, ಆಸಕ್ತಿಯ ಶಕ್ತಿ ನಮ್ಮ ಮಾವನೊಂದಿಗೆ ಮಣ್ಣು ಸೇರಿತು

ನಮ್ಮ ಮಾವ, ಅಜ್ಜ ಗಣಪತಿ ಮಾಡುವಾಗ ಬನವಾಸಿಯ ಸುತ್ತಮುತ್ತಲಿನ ಹಳ್ಳಿಗಳಾದ ಕೆರೆಕೊಪ್ಪ, ಭಾಸಿ, ಎಡೂರಬೈಲು, ತಿಗಣಿ, ತೆಕ್ಕೂರು, ಜಡ್ಡಳ್ಳಿ, ನರೂರು, ಮದ್ರಳ್ಳಿ, ಸಂಪಗೋಡು, ಗುಡ್ನಾಪುರ, ಕಪಗೇರಿ ಹೀಗೆ ಇನ್ನು ಹಲವು ಹಳ್ಳಿಗಳಿಂದ ಜನರು ಬಂದು ಗಣಪತಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಪ್ರತಿವರ್ಷ ಗಣಪತಿ ಮಾಡುವಾಗ ಅವರೆಲ್ಲಾ ಬಂದು ಗಂಟೆಗಟ್ಟಲೇ ಹರಟುತ್ತಿದ್ದರು. ರೀತಿಯ ಲೋಕಾಭಿರೂಢಿ ಮಾತುಕತೆಯ ನಡುವೆ ಸಾಗುತ್ತಿದ್ದ ನಮ್ಮ ಕೆಲಸವನ್ನು ಈಗ ನೆನಪಿಸಿಕೊಂಡರೆ ತುಂಬಾ ಖುಷಿಯಾಗುತ್ತದೆಹೀಗೆ ಸುತ್ತಮುತ್ತಲೂ ಹಳ್ಳಿಗಳಿಂದ ಬರುತ್ತಿದ್ದವರು ನಮ್ಮ ಅಜ್ಜನ ಕಾಲದಿಂದಲೂ ಖಾಯಂ ಆಗಿ ನಮ್ಮ ಮನೆಯಿಂದ ಗಣಪತಿಗಳನ್ನು ಮಾಡಿಸಿಕೊಂಡು ಹೋಗುತ್ತಿದ್ದವರು.



ಮಣ್ಣಿನಿಂದ ಗಣಪತಿ ಮಾಡುವ ಕೆಲಸ ತಪಸ್ಸಿನಂತೆ

ಬನವಾಸಿಯಲ್ಲಿ ಮಣ್ಣಿನಿಂದ ಗಣಪತಿ ಮೂರ್ತಿಗಳನ್ನು ಮಾಡುವ ಒಳ್ಳೆಯ ಕಲಾವಿದರ ಕುಟುಂಬದವರಿದ್ದಾರೆ. ಮುಖ್ಯವಾಗಿ ಗುಡಿಗಾರರ ಕುಟುಂಬದವರನ್ನು ಮೊದಲನೆಯಾಗಿ ಹೆಸರಿಸಬಹುದು. ಇಂದು ಬಹಳಷ್ಟು ಕಲಾವಿದರು ಗಣಪತಿಗಳನ್ನು ಮಾಡುತ್ತಿದ್ದರೂ, ಅವರೆಲ್ಲಾ ಗುಡಿಗಾರರ ಹತ್ತಿರವೇ ಪಳಗಿದರು. ನಮ್ಮ ಮಾವ ಕೂಡ 40 ವರ್ಷಗಳ ಹಿಂದೆ ಗುಡಿಗಾರರಲ್ಲೇ ಪಳಗಿ, ನಂತರ ಸ್ವಂತವಾಗಿ ತಾವೇ ಗಣಪತಿ ಮಾಡುತ್ತಾ ಬಂದವರು. ನನ್ನ ಪ್ರಕಾರ ಈಗಲೂ ಗುಡಿಗಾರರೇ ಬನವಾಸಿಯಲ್ಲಿ ಹೆಚ್ಚು ಗಣಪತಿಗಳನ್ನು  ಮಾಡುತ್ತಿರಬಹುದುಹಳೆಯ ಕುಟುಂಬಗಳ ಹೊರತಾಗಿ ಮೈಸೂರಿನಲ್ಲಿ ಫೈನ್ ಆರ್ಟ್ಸ್ ಮತ್ತು ಆರ್ಟ್ ಕ್ರಾಫ್ಟ್ ತರಬೇತಿಯನ್ನು ಪಡೆದುಕೊಂಡು ಬಂದಿರುವ ಶ್ರೀಪಾದ ಪುರೋಹಿತ್ ಚಿಕ್ಕ ವಯಸ್ಸಿನಲ್ಲೇ ಬನವಾಸಿಯ ಸುತ್ತಮುತ್ತಲೂ ವಿಶಿಷ್ಟ ರೀತಿಯಲ್ಲಿ ಗಣಪತಿಗಳನ್ನು ಮಾಡುವ ಮೂಲಕ ತುಂಬಾ ಹೆಸರುವಾಸಿಯಾದವರು. ಸಾಂಪ್ರದಾಯಿಕ ಶೈಲಿಯಲ್ಲಿ ಕಾಣುವಂತೆಮಣ್ಣಿನಿಂದ ಗಣಪತಿ ಮೂರ್ತಿಗಳನ್ನು ಮಾಡುತ್ತಿದ್ದವರ ನಡುವೆ, ಶ್ರೀಪಾದ ಪುರೋಹಿತ್, ಆಧುನಿಕ ಶೈಲಿಯಲ್ಲಿ ಸುಂದರವಾದ ಪುಟ್ಟ ಪುಟ್ಟ ಗಣೇಶಗಳಿಂದ ಹಿಡಿದು ಹತ್ತು ಅಡಿ ಗಣೇಶನವರೆಗೂ ಮಾಡಿ ಎಲ್ಲರಿಂದ ಭೇಷ್ ಅನಿಸಿಕೊಂಡವರು. ಇಂದಿಗೂ ಶ್ರೀಪಾದ ಪುರೋಹಿತ್ರ ಪುಟ್ಟ ಗಣಪತಿಗಳಿಗೆ ಅಪಾರ ಬೇಡಿಕೆ ಇದೆ. ಹೊಸ ತಲೆಮಾರಿನ ಕಲಾವಿದರಲ್ಲಿ ಬನವಾಸಿಯ ಶ್ರೀಪಾದ ಪುರೋಹಿತ್ ಮತ್ತು ಮಂಜು ಗುಡಿಗಾರ್ ಅವರನ್ನು ಗುರುತಿಸಬಹುದು. ಅದರಂತೆ ಸುರೇಶ್ ಬಳೆಗಾರ, ನಾಗರಾಜ ಚಕ್ರಸಾಲಿ ಇನ್ನು ಕೆಲವರು ಮೂರ್ತಿಗಳನ್ನು ಪ್ರತಿವರ್ಷ ಮಾಡುತ್ತಾರೆ. ಮಣ್ಣಿನಿಂದ ಗಣಪತಿಗಳನ್ನು ಮಾಡುವುದು ಅತ್ಯಂತ ದಣಿವಿನ ಕೆಲಸ ಅಂತ ಹೇಳಬಹುದು. ಇದು ಸೂಕ್ಷ್ಮ ಕುಸುರಿ ಕೆಲಸವಾಗಿದ್ದರಿಂದ, ವಿಪರೀತ ತಾಳ್ಮೆ ಬೇಕು. ಒಂದು ಕಡೆ ಕೂತು ಅಲ್ಲಾಡದಂತೆ ಮಾಡಲು ದೈಹಿಕವಾಗಿ ಗಟ್ಟಿಯಾಗಿರಬೇಕು. ಏಕಾಗ್ರತೆ ಇದ್ದರೆ ಮಾತ್ರ ಇಂತಹ ಕೆಲಸ ಸಾಧ್ಯ ಅನ್ನುವುದು ನನ್ನ ಅನುಭವದ ಮಾತು. ಬೆಂಗಳೂರಿನಲ್ಲಿ ಸಿಗುವ ಅಚ್ಚಿನ ಸುಣ್ಣದ ಗಣಪತಿಗಳಂತೆ, ಒಂದೊಂದೆ ಮಣ್ಣಿನ ಗಣಪತಿಗಳನ್ನು ತಿದ್ದಿ ತೀಡಿ ಮಾಡುವುದು ತುಂಬಾ ಕಷ್ಟ. ಗಣಪತಿ ಮಾಡುವ ಮುನ್ನ ಅದಕ್ಕೆ ಬೇಕಾದ ಮಣ್ಣನ್ನು ಹದಮಾಡುವುದು ಕೂಡ ತುಂಬಾ ಶ್ರಮದಾಯಕ, ಅಷ್ಟೇ ಮಣ್ಣನ್ನು ಹದ ಮಾಡುವುದಕ್ಕೂ ಅಪಾರ ಅನುಭವ ಬೇಕಾಗುತ್ತದೆ. ಮಣ್ಣು ನಾದಿದಷ್ಟು ಗಣಪತಿ ಮಾಡುವಾಗ ಫಿನಿಶಿಂಗ್ ತುಂಬಾ ಚೆನ್ನಾಗಿ ಸಿಗುತ್ತದೆ.

ಎರಡು ತಿಂಗಳ ಹಿಂದೆ ತೀರಿಕೊಂಡ ನಮ್ಮ ಮಾವನ ನೆನಪಿನೊಂದಿಗೆ ವರ್ಷದ ಗಣೇಶ ಹಬ್ಬವನ್ನು ಮಾಡದೇ, ಕಳೆದ ವರ್ಷಗಳಲ್ಲಿ ಆಚರಿಸಿದ ಗಣೇಶ ಹಬ್ಬವನ್ನು ನೆನಪುಮಾಡಿಕೊಂಡು ಖುಷಿ ಪಡುವ ಸಣ್ಣಪ್ರಯತ್ನವಷ್ಟೇ .

ಎಲ್ಲರಿಗೂ ಗಣೇಶ ಚತುರ್ಥಿಯ ಶುಭಕಾಮನೆಗಳು. ಎಲ್ಲರಿಗೂ ಶುಭವಾಗಲಿ.

Some Photographs