Friday, 28 September 2012

ಗೆಲ್ಲದ ಅರಮನೆ

ನನ್ನ ಬರಡು ಮನಸಿನ ಮರುಭೂಮಿಯಲಿ ಅರಮನೆಯನು
ಕಟ್ಟುವ ಬೆಳಕು ಮೂಡಿತು.
ಅರಮನೆಯನ್ನು ಹಿಂದೆ ಮುಂದೆ ಯಾರು ನೋಡಿರಬಾರದು
ಎಂದು ಮನದಲ್ಲಿ ಅಂದುಕೊಂಡೆ.
ಚಿನ್ನದ ಇಟ್ಟಿಗೆಗಳೇ ಬೇಕಾದವು,ಅದರ ಅಡಿಪಾಯ ಹಾಗೂ ಗೋಡೆಗೆ
ಮುತ್ತುರತ್ನಪಚ್ಚೆಗಳೇ ಇದರ ರಂಗೋಲಿಯಾದವು.

ಛೇ..! ಅದೇಕೋ ಏನೋ , ಅರಮನೆಯ ಶಿಖರ ಕಡಿಮೆಯಾಯಿತೆನಿಸಿತು
ಅದನ್ನು ಬಾನೆತ್ತರಕ್ಕೆ ಮುಟ್ಟಿಸಿದೆ.
ವಿಶ್ವದ ಅದ್ಭುತ ವಿಸ್ಮಯಗಳುವಸ್ತುಗಳು ಮುತ್ತುರತ್ನ
ಕನಕಾದಿಗಳಿಂದ,ವಜ್ರವೈಢೂರ್ಯಗಳಿಂದ ನನ್ನ ಅರಮನೆಯ ತುಂಬಿಸಿದೆ.
ನನ್ನೆದೆಯಲ್ಲಿನ ನೋವು ನಲಿವು ಸವಿನೆನಪುಗಳೇ  ಭವ್ಯ ಅರಮನೆಯ
ಎಂಟುದಿಕ್ಕಗಳಿಗೂ ಆಧಾರಸ್ಥಂಭವಾದವು.
ನನ್ನ ಜಡದೇಹದ ಮನಸ್ಸೆಂಬ ರತ್ನಪಕ್ಷಿ ಇಲ್ಲಿ ಬಂದು ವಾಸಿಸತೊಡಗಿತು.
ಹುಣ್ಣಿಮೆಯ ಪೂಣಚಂದ್ರ,ಸೂರ್ಯಾದಿ ಮಿತ್ರರೇ ಬೇಕಾದರೂ  ಭವನವ ಬೆಳಗಲು...

ದಿನಕಳೆದಂತೆ  ಸ್ತಂಭಗಳಲ್ಲಿ ಬಿರುಕು ಮೂಡಿತು.
ಅರಮನೆಯು ತನ್ನ ಶೋಭೆಯನ್ನು ಕಳೆದುಕೊಳ್ಳಲಾರಂಭಿಸಿತು
ಯಾರಿಗೇ ತಾನೇ ತಿಳಿದಿತ್ತು ಭವ್ಯಭವನವು ಬದುಕೆಂಬ
ಸುಂಟರಗಾಳಿಯನ್ನು ಎದುರಿಸಲಾಗದೇ ಹೀಗೆ ಮರಳಿನಲ್ಲಿ
ಮುಚ್ಚಿಹೋಗುವುದೆಂದು,
ನನ್ನ ಮನಸ್ಸೆಂಬ ರತ್ನಪಕ್ಷಿ ಅನಾಮಿಕನಂತೆ ಓಡಿಹೋಯಿತು.

ಅಂದು ನಾನು ನಾನಾಗಿರಲಿಲ್ಲ.
ಆಗ ದೇವರನು ದ್ವೇಷಿಸಿದೆ,ಶಪಿಸಿದೆ.ಬಾಣದಿಂದ ಸಿಕ್ಕಿಹಾಕಿಕೊಂಡ
ಹೃದಯದ ಹಾಗೆ ದೇವರು ಬೆಸೆದ ಬಲೆಯಲಿ
ಸಿಲುಕಿಹಾಕಿಕೊಂಡಿದ್ದೆಇದಕ್ಕಾಗಿ  ದೇವರನು ಶಪಿಸಿದರೆ
ಮುಕ್ತಿ ಸಿಗದೆಂದು ಸುಮ್ಮನಾದೆ.
 
ಆ ಸ್ಥಿತಿಯನು ಹೇಳಲಾಗದು, ಒಂಥರಾ ತೀರದ ಒಣದಾಹ
ಅವ ನನಗಿಂತ ಬಲು ಛಾಲಾಕಿ
ನನಗೆ ಈಗಿನದು ಕಂಡರೆ ಆತನಿಗೆ ಅಂತ್ಯವೇ ಎದುರುಗಿರುತ್ತದೆ
ನಾ ಗೆಲ್ಲಲಿಲ್ಲ ನನ್ನರಮನೆ..!



Saturday, 15 September 2012

ಗಣೇಶನ ನೆನಪು!

ಪ್ರತಿವರ್ಷ ಗಣೇಶನ ಹಬ್ಬ ಬಂದಾಗೆಲ್ಲಾ ಆಗುವ ಸಂತೋಷ  ಅಷ್ಟಿಷ್ಟಲ್ಲ. ಇದಕ್ಕೆ ನೂರು ಕಾರಣಗಳಿವೆ, ಹತ್ತು ಹಲವು ನೆನಪುಗಳಿವೆ. ಅದರಲ್ಲಿ ಒಂದು ನೆನಪು ಫೋಟೋ.
ನಾನು ಧರ್ಮಸ್ಥಳದ ಉಜಿರೆಯಲ್ಲಿ ಪಿಯುಸಿ ಓದುತ್ತಿದ್ದಾಗ ಸಿದ್ದವನದಲ್ಲಿ ಉಳಿದುಕೊಂಡಿದ್ದೆ. ಸಿದ್ದವನದಲ್ಲಿ ಪ್ರತಿವರ್ಷ ಗಣೇಶನ ಮೂರ್ತಿಯನ್ನು ಅಲ್ಲಿದ್ದ ವಿಧ್ಯಾರ್ಥಿಗಳೇ ಮಾಡುತ್ತಿದ್ದರು. 2002 ನೇ ಇಸವಿಯಲ್ಲಿ ನಾನು ಸೆಕೆಂಡ್ ಪಿಯುಸಿ ಮಾಡುವಾಗ ಅಲ್ಲಿದ್ದ ಗಣೇಶ  ಮೂರ್ತಿಯನ್ನು ನಾನು ಮಾಡಿದ್ದೆ. ಸುಮಾರು ನಾಲ್ಕು ಅಡಿಯ ಗಣೇಶ್ ಮೂರ್ತಿಯನ್ನು ನಾನು ಒಬ್ಬನೇ ಮಾಡಿದ್ದೆ. ಇದು ನನ್ನ ಪಾಲಿಗೆ ಒಲಿದ ದೇವರ ಕೆಲಸವಾಗಿತ್ತು.
ಅಲ್ಲಿಯವರೆಗೆ ಚಿಕ್ಕ ಚಿಕ್ಕ ಗಣೇಶ ಮೂರ್ತಿಗಳನ್ನು ಮಾಡುತ್ತಿದ್ದ ನಾನು, ಇಷ್ಟು ದೊಡ್ಡ ಗಾತ್ರದ ಗಣಪತಿಯನ್ನು ಮಾಡಿದ್ದು ಇದೇ ಮೊದಲು. ನಿಜವಾಗಿಯೂ ದೊಡ್ಡ ಗಣೇಶನನ್ನು  ಚಿಕ್ಕವಯಸ್ಸಿನಲ್ಲಿ ನಾನು ಮಾಡಿದ್ದೆ  ಅನ್ನುವುದನ್ನು ಈಗ ನಂಬಲು ನನಗೆ ಕಷ್ಟವಾಗುತ್ತಿದೆ. ಖಂಡಿತ ಕೆಲಸಕ್ಕೆ ಗಣೇಶನ ಪ್ರೇರಣೆ ಇತ್ತು.

ನಾನು ಗಣೇಶನನ್ನು ಮಾಡಿದುದನ್ನು ಸಿಬಂತಿ ಪದ್ಮನಾಭನವರು ಕಾಲೇಜಿನ ವಾರ್ಷಿಕ ಪತ್ರಿಕೆಯಲ್ಲಿ  ನನ್ನ ಸಂದರ್ಶನ ಮಾಡಿದ್ದರು. ಸಂದರ್ಶನದ ಮೂಲಕ ಬನವಾಸಿಯ ಹುಡುಗನೊಬ್ಬ ಮಾಡಿದ  ಕೆಲಸ ಇಡೀ ಕಾಲೇಜಿಗೆ ಗೊತ್ತಾಗಿತ್ತು. ಸೈನ್ಸ್ ಸೆಕ್ಷನ್ನಲ್ಲಿ ನಾನು ಇದ್ದೇನೋ ಅನ್ನುವುದು  ನನ್ನ ಕ್ಲಾಸ್ ಮೇಟ್ ಗಳಿಗೂ ಗೊತ್ತಿರಲಿಲ್ಲ.ಆದರೆ ಮೂರ್ತಿ ಮಾಡಿದ  ಮೇಲೆ ಕ್ಲಾಸ್ ಮೇಟ್ಗಳೆಲ್ಲಾ ನನ್ನ ಮಾತನಾಡಿಸತೊಡಗಿದರು. ಆಗಲೇ ನಾನು ಅವರ ಜೊತೆ ಎರಡು ವರ್ಷ ಕ್ಲಾಸಲ್ಲಿ ಇದ್ದೆ ಎಂಬುದು ಕ್ಲಾಸ್ ಮೇಟ್ ಗಳಿಗೆ ಗೊತ್ತಾಗಿದ್ದು. ಗಣೇಶ ನನಗೆ ಸಿದ್ದವನ ಹಾಗೂ ಕಾಲೇಜಿನಲ್ಲಿ ಒಳ್ಳೆಯ ಹೆಸರು ತಂದುಕೊಟ್ಟಿದ್ದ.
 ಮಣ್ಣಿನಿಂದ ಗಣೇಶನನ್ನು ಮಾಡುವುದು ನಮ್ಮ ಕುಟುಂಬದಿಂದ ಬಂದ ನಮಗೆ ಕಲೆಯಾಗಿತ್ತು. ನಾನು ಮಾಡಿದ ಗಣೇಶ್ ಮೂರ್ತಿಯನ್ನು ನೋಡಿ ಮೆಚ್ಚಿ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹಗ್ಗೆಡೆಯವರು ಪಂಚಲೋಹದ ನಾಟ್ಯ ಗಣಪತಿಯನ್ನು ನನಗೆ ಉಡುಗೊರೆಯಾಗಿ ನೀಡಿದ್ದರು. ಅವರು ನೀಡಿದ ಉಡುಗೊರೆ ಇಂದಿಗೂ  ದೇವರಕೋಣೆಯಲ್ಲಿ  ಬೆಳಗುತ್ತಿದೆ. ವಿರೇಂದ್ರ ಹೆಗ್ಗರೆಯವರಿಗೆ ಸದಾ ಚಿರಋಣಿಯಾಗಿರುತ್ತೇನೆ.

Tuesday, 4 September 2012

ಅಮ್ಮ ಎಂಬ ಹುಣ್ಣಿಮೆ!



ನೋವಿನ ಮನೆಗೆ ನೂರೆಂಟು ಬಾಗಿಲುಗಳು
ಯಾವ ಬಾಗಿಲನು ನಾ ಮುಚ್ಚಲಿ...
ಬೆಳಕೆ ಬಾರದ ಕಿಟಕಿಯಲಿ ಏನೆಂದು ಕಾಣಲಿ..
ಮಗುವಿನ ಮನಸೊಳಗೆ ಬೇಡದ ಕನಸುಗಳು
ಬಾಳ ಚಿಗುರು ಅರಳುವ ಮುನ್ನ ಮಂಕಾಯಿತೇ ಸೊಬಗು
ಒಳಗಿನ ಮನಸ್ಸನ್ನು ಅರ್ಥಮಾಡಿಕೊಳ್ಳುವರು ಯಾರಿಹರು?
ಹೆತ್ತವಳೇ ಕರುಳ ಕುಡಿಯನ್ನು ಕಿತ್ತೆಸೆದಾಗ
ಎಲ್ಲಿ ಅಡಗಿಹುದು ತಾಯಿಯೆಂಬ ಮಮಕಾರ...!
ತಾಯಿ ಋಣವ ಏನಿತೋ ಅರಿಯೇ?
ಅಮ್ಮ ಎಂಬ ಹುಣ್ಣಿಮೆ ಚಂದ್ರಮನ ಕಾಣುವುದೆಲ್ಲಿಂದ ಬಂತು.
ಅಮ್ಮನ ನಿಲುವಿಗೆ ಪ್ರೀತಿಯ ಉತ್ತರ
ಹುಡುಕುತಿಹೆನು, ಅರಸುತಿಹೆನು.
ನೋವಿನ ಮನೆಗೆ ನೂರೆಂಟು ಬಾಗಿಲುಗಳು
ಯಾವ ಬಾಗಿಲನು ನಾ ಮುಚ್ಚಲಿ...|1|