ಬನವಾಸಿ ಅಂದರೆ ಹಸಿರು ಕಾಡು, ತುಂಬಿ ಹರಿಯುವ ವರದೆ, ಐತಿಹಾಸಿಕ ಶ್ರೀ ಮಧುಕೇಶ್ವರ ದೇವರು, ಅರಸರ ಕಾಲದ ಮುಚ್ಚಿಹೋಗಿರುವ ಕೋಟೆಗಳು ಇನ್ನು ಹತ್ತು ಹಲವು ವೈಶಿಷ್ಟ್ಯತೆಗಳಿಂದಾಗಿ ಬನವಾಸಿಯನ್ನು ಸುಂದರವಾಗಿ ಬಣ್ಣಿಸಬಹುದು. ಈ ಮಣ್ಣಿನ ನೆಲ ಐತಿಹಾಸಿಕ, ಸಾಮಾಜಿಕ, ಪ್ರಾಚೀನ ಸಮೃದ್ಧಿಯೆಲ್ಲ ಈ ಮಣ್ಣಿನ ನೆಲದಲ್ಲಿ ಹುದುಗಿ ಹೋಗಿದೆ. ಏಷ್ಟು ಅಗೆದರೂ ನಿಲುಕದ ರಹಸ್ಯಗಳು ಈ ಮಣ್ಣಿನ ನೆಲದಲ್ಲಿ ಅಡಗಿದೆ. ಅಡಗಿರುವ ರಹಸ್ಯವನ್ನು ಅಗೆಯಲು ನೀವು ಪಣ ತೊಟ್ಟು ನಿಂತರೆ ನಿಮಗೆ ಸಿಗುವ ಅಚ್ಚರಿಗಳು ನಿಮ್ಮನ್ನು ನಿಬ್ಬರಗಾಗಿಸುವುದು. ಮಾಡಲು ಶ್ರೀ ಮಧುಕೇಶ್ವರನ ಆಶೀರ್ವಾದ ಬೇಕು; ಮುಟ್ಟಲು ನಿಮ್ಮ ಗುಂಡಿಗೆ ಗಟ್ಟಿಯಾಗಿರಬೇಕು. ಧೈರ್ಯ ಬೇಕಷ್ಟೇ. ಎರಡು ಸಾವಿರ ಇತಿಹಾಸವಿರುವ ಇಲ್ಲಿಯ ನೆಲದಲ್ಲಿ ಬಾಳಿದ ಮನುಜರನ್ನು, ಪ್ರಾಣಿ, ಪಕ್ಷಿ, ತುಂಬಿದ ಕಾಡು, ವರದೆಯ ಪ್ರವಾಹ, ಹುಳಹಪ್ಪಡಿ, ನಡೆದ ಯುದ್ದಗಳು, ಶಾಂತಿ ಮಾತುಕತೆಗಳು, ಪೂಜೆ ಪುನಸ್ಕಾರ, ಹೋಮ-ಹವನ, ಜಾತ್ರೆ ಸಂತೆ, `ಹರಹರ ಮಹದೇವ್' ಎನ್ನುವ ಹುಡುಗರ ಕೂಗು, ಚೀರಾಟ, ಹೊಡೆದಾಟ ಎಲ್ಲವನ್ನು ಕದಂಬರ ಮನೆದೇವರು ಶ್ರೀಕ್ಷೇತ್ರದ ಓಡೆಯ ಮಾತಬರ ಶ್ರೀ ಮಧುಕೇಶ್ವರ ಸುಮಾರು ಎರಡು ಸಾವಿರ ವರ್ಷಗಳಿಂದ ನೋಡಿಕೊಂಡು ಬಂದಿದ್ದಾನೆ. ಇಂದಿನ ನಮ್ಮ ತಲೆಮಾರನ್ನು ಕೂಡ ನೋಡುತ್ತಿದ್ದಾನೆ. ಹೊಟ್ಟೆಪಾಡಿಗಾಗಿ ಜೀವನ ಅರೆಸುತ್ತಾ, ತಮ್ಮ ನೆಲೆಯ ಬೇಟೆಗೋಸ್ಕರ ಬೆಂಗಳೂರು, ಮಂಗಳೂರು, ಬಾಂಬೆ, ಪೂನಾ,ಯುಕೆ,ಯುಎಸ್ ಅಂತೆಲ್ಲಾ ಓಡಾಡುತ್ತಿರುವ ತನ್ನ ನೆಲದ ಮಕ್ಕಳನ್ನು ಬನವಾಸಿಯಲ್ಲಿ ಕುಳಿತುಕೊಂಡು ದೂರದಿಂದಲೇ ನೋಡುತ್ತಿದ್ದಾನೆ. ಆತನಿಗೆ ಎಲ್ಲವೂ ಗೊತ್ತು. ಒಡಲಿನಲ್ಲಿ ನೂರಾರು ನೆನಪುಗಳ ರಾಶಿಯನ್ನು ಆತನೂ ಇಟ್ಟುಕೊಂಡಿರಲೂಬಹುದು. ಹೀಗಿದ್ದರೂ ಪ್ರಸನ್ನವದನನಾಗಿ ತನಗೆ ಏನೂ ಗೊತ್ತಿಲ್ಲದಂತೆ ಕುಳಿತಿರುವ ಶ್ರೀ ಮಧುಕೇಶ್ವರನನ್ನು ನೋಡುವುದೇ ಸೊಗಸು. ಈಗಲೂ ವರದೆಯ ಪ್ರವಾಹ ಕಡಿಮೆಯಾಗಿಲ್ಲ. ಅವಳ ಪಾಡಿಗೆ ಅವಳು ಸುತ್ತಲಿನ ಹತ್ತು ಹಳ್ಳಿಗಳಿಗೆ ನೀರರೆಯುತ್ತಾ, ವರ್ಷಕ್ಕೊಮ್ಮೆಯಾದರೂ ಅವರಿಗೆ ಜಾಸ್ತಿ ನೀರು ಕುಡಿಸಿ, ಕೊನೆಗೆ ತೆಪ್ಪ ಹಾಕಿಸಿಕೊಂಡು ತನ್ನ ಸಿಟ್ಟನ್ನು ಕಡಿಮೆ ಮಾಡಿಕೊಂಡು ಮತ್ತೇ ಇಳಿಯುತ್ತಾಳೆ, ಮತ್ತೇ ಏರುತ್ತಾಳೆ. ತಂದೆ ಶ್ರೀಮಧುಕೇಶ್ವರ, ತಾಯಿ ಶ್ರೀವರದೆ ಎರಡು ಸಾವಿರ ವರ್ಷಗಳಿಂದಳೂ ಈ ನಾಡನ್ನು ನೋಡುತ್ತಿದ್ದಾರೆ. ಇವರಿಬ್ಬರೇ ಬನವಾಸಿ ನೆಲದ ಆದಿಪುರುಷರು! ಇವರಿಬ್ಬರೂ ಮುಂದಿನ ಸಾವಿರ ತಲೆಮಾರುಗಳು ಬಂದರೂ, ಇಲ್ಲಿಯ ನೆಲ ಬದಲಾಗಬಹುದು ಆದರೆ ಇವರಿಬ್ಬರು ಮಾತ್ರ ಹೀಗೆ ಇರುತ್ತಾರೆ. ಇದು ಚಿರಂತನ ಸತ್ಯ ಕೂಡ.
ಊರು ಬದಲಾಗಿದೆ, ಜನ ಬದಲಾಗಿದ್ದಾರೆ. ನಮ್ಮ ಅಮ್ಮ, ಅಜ್ಜರ ಕಾಲದಲ್ಲಿದ್ದ ಬನವಾಸಿಯ ವೈಭದ ಈಗ ಇಲ್ಲ. ನಮ್ಮ ಕಣ್ಣ ಮುಂದೆ ನಡೆಯುತ್ತಿದ್ದ ಈ ನೆಲದ ವೈಭೋಗ, ಜಾತ್ರೆ, ಆಚರಣೆ ಎಲ್ಲವೂ ತಮ್ಮ ಬಣ್ಣವನ್ನು ಕಳೆದುಕೊಳ್ಳುತ್ತಿವೆ. ಜನಜೀವನ ಬದಲಾವಣೆಯಾಗಿದೆ. ಊರಿನ ನೆಲದ ರೇಟು ಇಂದು ಬೆಂಗಳೂರನ್ನು ಮೀರಿಸುವಷ್ಟು ಬೆಳೆದುನಿಂತಿದೆ. ಇದು ಊರಿನ ಬೆಳವಣಿಗೆಯಾದರೂ ಏಲ್ಲೋ ಒಂದು ಕಡೆ ನಮ್ಮ ನೆಲದ ಕೆಲವು ವಿಶೇಷತೆಗಳು ಮಾಯವಾಗುತ್ತಿವೆ. ಕಾರಣಗಳೇನಿರಬಹುದು..ನಮ್ಮ ತಲೆಮಾರಿನ ವೈಭೋಗ ಇಂದು ನಮ್ಮ ಮುಂದಿನ ತಲೆಮಾರಿಗೆ ಉಳಿಯುವುದೇ? ನೋಡುವುದು ಏನುಂಟು, ಏನಿಲ್ಲ. ಉಳಿದದ್ದಾರೂ ಏನೂ? ಉಳಿಯಬೇಕಾದುದು ಯಾವುದು? ಹೀಗೆ ಇರಬೇಕೆ? ಇಲ್ಲವೇ ಉಳಿಸಬೇಕು ನೆಲದ ಕಂಪು ಹೀಗೆ ಉಳಿಯುವುದೇ? ಇವತ್ತು ಕಣ್ಣಿಗೆ ಕಂಡಿರುವುದು ನಾಳೆ ಕಾಣುವುದಿಲ್ಲ. ನಾಳೆ ಕಾಣುವುದು ಕೆಲವು ಸಾರಿ ಕಾಣದೇ ಇರಬಹುದು. ಇದು ಈ ಜಮಾನಾದ ಸತ್ಯವಾಗಿದ್ದರೂ ಬದಲಾವಣೆಯ ಸುಳಿಯಲ್ಲಿ ನಮ್ಮ ನೆಲೆಯ ಮೂಲ ಬೇರುಗಳ ಬುಡ ಸಡಿಲವಾಗುತ್ತಿರುವುದು ತುಂಬಾ ಬೇಸರದ ಸಂಗತಿ. ಈ ವಿಷಯದ ಸುಳಿಯಲ್ಲಿ ಬನವಾಸಿ ಕೂಡ ಸಿಕ್ಕಿರುವುದು ಕೂಡ ಅಷ್ಟೇ ದುರಾದೃಷ್ಟ !
ನನ್ನ ಪ್ರಕಾರ ಈ ಮೇಲಿನ ಎಲ್ಲ ಮಾತುಗಳು ನಮ್ಮ ಬನವಾಸಿಯ ಯೋನಿಜರಿಗೆ ಗೊತ್ತಿರುವುದೇ! ನಿಜವಾಗಿಯೂ ನಾನು ಹೇಳಬೇಕಾಗಿರುವುದು ಇದಲ್ಲ. ಏನೋ ಹೇಳಲಿಕ್ಕೆ ಹೋಗಿ, ಏನೋ ಹೇಳಿದೆ ಹಾಗಾಯ್ತು ನನ್ನ ಮಾತುಗಳು. ನಮ್ಮ ಅಜ್ಜ ಹಾಗೂ ಅಮ್ಮನ ತಲೆಮಾರನ್ನು ಬಿಟ್ಟು ನಮ್ಮ ತಲೆಮಾರಿನಲ್ಲಿ ನಾವು ನೋಡಿದ ಬನವಾಸಿ ಹೇಗಿತ್ತು? ನಾವು ಏನನ್ನ ಮಿಸ್ ಮಾಡಿಕೊಂಡೆವು ಅಂತ ನಾನು ಯೋಚಿಸುತ್ತಾ ಕುಳಿತಾಗ ನನಗೆ ಮೊದಲು ಕಂಡಿದ್ದೆ ನಮ್ಮೂರಿನಲ್ಲಿದ್ದ ನೂರಾರು `ರಣಹದ್ದುಗಳು' ಅದರ ಜೊತೆಗಿನ ಇನ್ನು ಹಲವು ಸಾಂಗತ್ಯಗಳು. ಈಗ ಅವು ಇಲ್ಲ. ಆದರೂ ನೆನಪಿಸಿಕೊಳ್ಳುತ್ತಿದ್ದೇನೆ. ನಿಮಗೂ ನೆನಪಿನಲ್ಲಿದ್ದರೆ ಇನ್ನೊಮ್ಮೆ ನೆನಪಿಸಿಕೊಳ್ಳಿ.
ಏಲ್ಲಿ ಮರೆಯಾದವು ರಣಹದ್ದುಗಳು
ಇಂದಿಗೂ ನನಗೆ ನೆನಪಿದೆ. ಸುಮಾರು 15 ವರ್ಷಗಳ ಹಿಂದೆ ನಮ್ಮ ಬನವಾಸಿಯಲ್ಲಿ ಸುಮಾರು ನೂರಕ್ಕೂ ಹೆಚ್ಚು ರಣಹದ್ದುಗಳು ವಾಸಿಸುತ್ತಿದ್ದವು ಅಂತ ನಾನು ಹೇಳಿದರೆ ನೀವು ನಂಬಲಿಕ್ಕಿಲ್ಲ. ಬನವಾಸಿ ಅಪರೂಪದ ಈ ರಣಹದ್ದುಗಳಿಗೆ ಆಶ್ರಯತಾಣವಾಗಿತ್ತು. ಗಂಟೆಗೆ ನೂರು ಕಿ.ಮೀ ವೇಗದಲ್ಲಿ ಹಾರುತ್ತಾ, ಬಾನಿನ ತುದಿಗೆ ಚುಂಬಿಸುತ್ತಾ, ಒಪ್ಪತ್ತಿನ ಕಾಲದವರೆಗೆ ಹಾರಾಡುತ್ತಿದ್ದ ಆ ಬಾಂದಣದ ಹಕ್ಕಿಗಳು ಈಗ ಭೂತಕನ್ನಡಿಯನ್ನು ಹಿಡಿದುಕೊಂಡು `ಭೂತ'ದ ತರಹ ಹುಡುಕಿದರೂ ನಿಮಗೆ ಕಾಣಸಿಗುವುದಿಲ್ಲ. ಹಾಗಾದರೆ ಊರಿನಲ್ಲಿ ದನಕರುಗಳು ಸಾಯುತ್ತಿಲ್ಲವೇ ಅಂತ ಕೇಳಬಹುದು. ಈಗಲೂ ಬನವಾಸಿಯಲ್ಲಿ ವರ್ಷಕ್ಕೆ ಏಷ್ಟು ದನಗಳು ಸಾಯುತ್ತಿದ್ದವೋ, ಅದಕ್ಕಿಂತ ಸ್ವಲ್ಪ ಪ್ರಮಾಣದಲ್ಲಿ ಸಾಯುತ್ತಿರಬಹುದು. ಸತ್ತ ದನ ಎಮ್ಮೆಗಳನ್ನು ಎಳೆದು ಹಾಕುತ್ತಿದ್ದ ಜಾಗವೂ ಕೂಡ ಹಾಗೆ ಇದೆ. ಇಂದಿಗೂ ಆ ಜಾಗದಲ್ಲಿ ಅನೇಕ ಪ್ರಾಣಿಗಳ ಮೂಳೆ ಊರುಗಳು ಕಾಣಸಿಗುತ್ತವೆ. ಆದರೆ ಇಂದು ಸತ್ತ ದನಗಳನ್ನು ತಿನ್ನಲು ಮಾತ್ರ ರಣಹದ್ದುಗಳು ಬರುತ್ತಿಲ್ಲ. ಇರುವ ನಾಡಾಡಿ ನಾಯಿಗಳನ್ನು ಬಿಟ್ಟರೆ ಸತ್ತ ದನ ಎಮ್ಮೆಗಳಿಗೆ ಮೋಕ್ಷ ಕಾಣಿಸುವವರು ಯಾರು ಇಲ್ಲ. ಮೊನ್ನೆ ಊರಿಗೆ ಹೋದಾಗಲೂ ನಾನು ಅಮ್ಮನಿಗೆ ಕೇಳಿದ ಪ್ರಶ್ನೆ ಕೂಡ ಇದೆ. `ಅಮ್ಮ ಅಷ್ಟೋಂದು ರಣಹದ್ದುಗಳು ಊರಲ್ಲಿ ಇದ್ದವಲ್ಲ ಏನಾದವು?' ಅಮ್ಮ, `ನಂಗೂ ಗೊತ್ತಿಲ್ಲ ಅವೆಲ್ಲಾ ಎಲ್ಲಿ ಹೋದವು' ಹೀಗೆ ಮಗುವಿನಂತೆ ಕೇಳಿದ ನನ್ನ ಪ್ರಶ್ನೆಗೆ ಅಮ್ಮ ಕೂಡ ಮುಗ್ಧತೆಯಿಂದಲೇ ಉತ್ತರಿಸಿದ್ದಳು. ನಾವು ಉಪ್ಪಾರ ಕೇರಿಯಲ್ಲಿ ಮನೆಮಾಡಿಕೊಂಡಾಗ ತುಂಬಾ ಹತ್ತಿರದಿಂದಲೇ ಬೃಹದಾಕಾರ ರಣಹದ್ದನ್ನು ನೋಡಿದ್ದೆ. ಅಬ್ಬಾ ಏಷ್ಟು ದೊಡ್ಡ ಗಾತ್ರ ! ಅಂಗಳದಂತಹ ನಮ್ಮ ದೇಹವನ್ನೇ ಮುಚ್ಚುವ, ಎತ್ತಿಕೊಂಡು ಹೋಗುವ, ಏಂತಹ ಪ್ರಬಲ ವೈರಿಯಾದರೂ ಒಂದು ಕೈ ನೋಡೇ ಬಿಡುವ ಎನ್ನುವ ಶಕ್ತಿಯುತ ಪಕ್ಷಿ ಈ ರಣಹದ್ದು. ಮೋಡಗಳ ಅಂಚಿನಲ್ಲಿ ಹಾರುವಾಗ ಮನೆಯ ರಂಗೋಲಿ ಚುಕ್ಕಿಯಷ್ಟು ಕಾಣುತ್ತಿದ್ದ ಈ ಹದ್ದುಗಳು ಹೆಚ್ಚಾಗಿ ನಮ್ಮ ಪಂಪವನ, ನಿಂಗನಮಟ್ಟಿ ಸುತ್ತಲಿನ ಬಿದರಮಟ್ಟಿ, ಬನವಾಸಿ-ಸೊರಬ ರೋಡಿನ ಅಕ್ಕಪಕ್ಕದ ಕಾಡಿನ ಗಗನ ಚುಂಬಿಸುವಂತಹ ಮರಗಳಲ್ಲಿ ವಾಸಿಸುತ್ತಿದ್ದವು. ಊರಿನಲ್ಲಿ ಯಾವುದಾದರೂ ಎಮ್ಮೆ ದನ ಸತ್ತಾಗ ಹಿಂಡು ಹಿಂಡಾಗಿ ಬಂದು ಮೌಂಸದ ತುಣುಕುಗಳನ್ನು ಕಚ್ಚಿಕೊಂಡು ಅಲ್ಲೇ ತಿಂದು ಉಪ್ಪಾರ ಕೇರಿ, ಎಡೂರ್ಬೈಲ್,ಕಪಗೇರಿ ಇನ್ನು ಹಲವೆಡೆಗಳ ತೆಂಗಿನಮರಗಳಲ್ಲಿ ಇವುಗಳು ವಿಶ್ರಾಂತಿಯನ್ನು ಪಡೆಯುತ್ತಿದ್ದವು.
ಒಂದು ನೆನಪು ಈಗಲೂ ನನ್ನ ಕಣ್ಣ ಮುಂದಿದೆ. ನಾನು ಹೈಸ್ಕೂಲ್ ಓದುವಾಗ ಓದಲಿಕ್ಕೆ ಪಂಪವನಕ್ಕೆ ಹೋಗುತ್ತಿದ್ದೆ. ಆಗ ಊರಿನಲ್ಲಿ ಸತ್ತಿದ್ದ ಒಂದು ಎಮ್ಮೆಯನ್ನು ತಿಂದು ಆಗಸದಲ್ಲಿ ವರ್ತುಲಾಕಾರದಲ್ಲ ಹಾರಾಡುತ್ತಿದ್ದ ನೂರಾರು ರಣಹದ್ದುಗಳು ಬನವಾಸಿಯ ಅಂದಿನ ದಿನಗಳ ಬಹುದೊಡ್ಡ ನೆನಪಿಗೆ ಸಾಕ್ಷಿಯಾಗಿದ್ದವು. ಈಗ ನೀವು ಬನವಾಸಿ ಕಡೆ ಹೋದಾಗಲೆಲ್ಲ ಅಪರೂಪಕ್ಕೆ ಅಲ್ಲೇ ಏಲ್ಲೋ ಕೆಲವು ರಣಹದ್ದುಗಳನ್ನು ಕಾಣಬಹುದಷ್ಟೇ. ಅಂದು ಬನವಾಸಿಯನ್ನು ವಾಸಸ್ಥಳವಾಗಿ ಮಾಡಿಕೊಂಡಿದ್ದ ಈ ಹದ್ದುಗಳು ಬೇರೆ ಕಡೆ ಹೋಗಿರಬಹುದು, ಇಲ್ಲವೇ ಅವಸಾನ ಹೊಂದಿರಲೂಬಹುದು. ಏಕೆಂದರೆ ಭಾರತದಲ್ಲಿ ಈ ರಣಹದ್ದುಗಳು ನಶಿಸಿಹೋಗುತ್ತಿರುವ ಪಕ್ಷಿಗಳ ಸಂಖ್ಯೆಗೆ ಸೇರಿಕೊಂಡಿವೆ. ನನ್ನ ವೀಕ್ಷಣೆಯ ಪ್ರಕಾರ ಬನವಾಸಿಯನ್ನು ಬಿಟ್ಟು ಹೋಗಲಿಕ್ಕೆ ಕೆಲವು ಕಾರಣಗಳಿರಬಹುದು. ಮುಖ್ಯವಾಗಿ ಆಹಾರದ ಸಮಸ್ಯೆ ಕಾಡಿರಬಹುದು. ಸಮಾನ್ಯವಾಗಿ ಒಂದು ರಣಹದ್ದು ತನ್ನ ಬೇಟೆಯನ್ನು ಅರಸುತ್ತಾ ಸಾವಿರಾರು ಕಿ.ಮೀ ಹಾರುತ್ತಲೇ ಇರುತ್ತದೆ. ಆಹಾರ, ಜೊತೆಗೆ ಹವಾಗುಣ ಎಲ್ಲವೂ ಅದಕ್ಕೆ ತಕ್ಕ ಹಾಗೆ ಸರಿಹೊಂದಿದ್ದರೆ ಈ ಪಕ್ಷಿಗಳು ಅಲ್ಲೇ ನೆಲೆ ನಿಲ್ಲುತ್ತವೆ. ಬನವಾಸಿಗೆ ಈ ರಣಹದ್ದುಗಳು ಬಂದು ನೆಲೆಸಿದ್ದು ಇದೇ ಕಾರಣದಿಂದಲೇ. ಹೆಚ್ಚಿನಂಶ ಅದಕ್ಕೆ ಆಹಾರ, ಹವಾಗುಣದ ವ್ಯತ್ಯಾಸ ಬನವಾಸಿಯಲ್ಲಿ ಕಂಡುಬಂದುದರಿಂದ ಅದು ಬೇರೆ ಕಡೆ ಹೋಗಿರಬಹುದು. ಅದಲ್ಲದೇ ಮೊದಲೆಲ್ಲಾ ತಮ್ಮ ಮನೆಯಲ್ಲಿ ಎಮ್ಮೆ ದನಗಳು ಸತ್ತರೆ ಹರಿಜನರಿಗೆ ಹೇಳಿ ತೆಗೆಸುತ್ತಿದ್ದರು. ನಾಲ್ಕೈದು ಹರಿಜನರು ಬಂದು ಸತ್ತ ಹೆಣದಂತೆ ಅವುಗಳನ್ನು ನಾಲ್ಕು ಕಡೆ ಕಟ್ಟಿ ಎತ್ತಿಕೊಂಡು ಅಗಳೇರಿ ತಪ್ಪಲಿನಲ್ಲಿ ಎಸೆದು, ತಮಗೆ ಬೇಕಾದ ಚರ್ಮವನ್ನು ಸುಲಿದುಕೊಂಡು, ಉಳಿದ ಮಾಂಸವನ್ನು ಈ ರಣಹದ್ದುಗಳಿಗೆ ಬಿಟ್ಟುಹೋಗುತ್ತಿದ್ದರು. ಈಗ ಸತ್ತ ದನಗಳನ್ನು ಎಸೆಯುವ ಪದ್ಧತಿ ಕಡಿಮೆಯಾಗಿದೆ. ಮೊದಲಿನಂತೆ ಎಸೆಯುವ ಕೂಡ ಹಾಗಿಲ. ರೋಗರುಜಿನಗಳು ಬರಬಹುದೆಂಬ ಆಜ್ಞೆ ಪಂಚಾಯ್ತಿ ಕಟ್ಟೆಯಿಂದ. ಎಲ್ಲವನ್ನು ನೆಲದಲ್ಲಿ ಹೂಳುತ್ತಿದ್ದಾರೆ. ಸತ್ತ ದನದ ಮಾಂಸವನ್ನು ತಿನ್ನುವ ಯೋಗ ಭೂಮಿಪುತ್ರದಾಗಿರುವ ಹುಳಗಳಿಗೆ ಸಂದಿದೆ. ಪಾಪ ಬಾನಸ ರಾಯರಾಗಿರುವ ರಣಹದ್ದುಗಳು ಇದರಿಂದ ಮುನಿಸಿಕೊಂಡು ಬನವಾಸಿ ಬಿಟ್ಟು ಹೋಗಿರಬಹುದು. ರಣಹದ್ದುಗಳಿಗೆ ತಕ್ಕುದಾದ ಹವಾಗುಣ ಮತ್ತೇ ನಮ್ಮ ಬನವಾಸಿಗೆ ಮುಂದೊಂದು ದಿನ ಬರಬಹುದು. ಮತ್ತೇ ರಣಹದ್ದುಗಳು ನಮ್ಮೂರಿಗೆ ಬರಬಹುದು. ಹಳೆಯ ದಿನಗಳಲ್ಲಿ ನೋಡಿ, ನನ್ನ ಅಕ್ಷಿಪಟಲದ ಹಾಡರ್್ವೇರ್ನಲ್ಲಿ ಉಳಿದ ಆ ನೆನಪುಗಳು ಮತ್ತೇ ಮರುಕರುಳಿಸುವ ದಿನಗಳಿಗೆ ಕಾಯುತ್ತೇನೆ.
ವೈಭವದ ಮಠದ ಜಾತ್ರೆ
ನಾನು ಚಿಕ್ಕವನಾಗಿದ್ದಾಗ ನೋಡುತ್ತಿದ್ದ ನಮ್ಮ ಕೇರಿಯ ಹೊಳೆಮಠದ ಜಾತ್ರೆಯ ವೈಭವ ಈಗಲೂ ಕಣ್ಣಮುಂದಿದೆ. ಹೊಳೆಮಠದ ಜಾತ್ರೆ ಸುಮಾರು ಮಧುಕೇಶ್ವರ ಜಾತ್ರೆಗಿಂತ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿತ್ತು. ಸುತ್ತಮುತ್ತಲಿನ ತಿಗಣಿ, ಭಾಷಿ, ಸಂಪಗೋಡ್, ನರೂರು, ಮದ್ರಳ್ಳಿ, ತೆಕ್ಕೂರು, ಅಜ್ಜರಣಿ, ಕಪಗೇರಿ, ಗುಡ್ನಾಪುರ, ಅಂಡಗಿ, ಜಡೆ ಇನ್ನು ಹತ್ತು ಹಲವು ಹಳ್ಳಿಗಳಿಂದ ಜನರು (ವಿಶೇಷವಾಗಿ ಗೌಡ್ರ ಲಿಂಗಾಯತ) ಬರುತ್ತಿದ್ದರು. ಅಂದೆಲ್ಲಾ ಎತ್ತಿನ ಗಾಡಿಗಳದ್ದೇ ಕಾರುಬಾರು. ಸುಮಾರು 50ಕ್ಕೂ ಹೆಚ್ಚು ಎತ್ತಿನ ಗಾಡಿಗಳು ನಮ್ಮ ಕೇರಿಯ ಪಕ್ಕ ನಿಂತಿರುವುದನ್ನು ನೋಡಿದ ನೆನಪು ನನ್ನ ಕಣ್ಣಮುಂದಿದೆ. ಅಂದು ಕಾಲುದಾರಿಯಾಗಿದ್ದ ಅಗಳೇರಿ ರಸ್ತೆ ಕೊನೆಗೆ ಅಕ್ಕಪಕ್ಕದ ಜಾಗವನ್ನು ತೆಗೆದುಕೊಂಡು ಎತ್ತಿನ ಗಾಡಿಗಳು ಓಡಾಡುವಷ್ಟು ಅಗಲವಾಯಿತು. ಕಾಲುದಾರಿಯಾಗಿದ್ದ ಅಗಲೇರಿ ಅಗಲದಾರಿಯಾಗಿದ್ದು ಇದೇ ಜಾತ್ರೆಯ ದಿನಗಳಲ್ಲಿ.
ಜಾತ್ರೆಗೆ ಹಾಕುತ್ತಿದ್ದ ಪೇಡಾ ಅಂಗಡಿಗಳು ನಮ್ಮ ಕಾಮನಗಲ್ಲಿಯವರೆಗೆ ಸೇರುತ್ತಿದ್ದವು. ಅನ್ನದಾಸೋಹ ನಡೆಯುತ್ತಿತ್ತು. ಪ್ರವಚನ, ಸಂಗೀತ ಕಛೇರಿ, ಬೇರೆ ಬೇರೆ ಮಠಗಳ ಸ್ವಾಮೀಜಿಗಳ ಮಾತುಗಳು ಎಲ್ಲವೂ ತುಂಬಾ ಚೆನ್ನಾಗಿತ್ತು. ನಮ್ಮ ಊರಿನ ಜನ ಕೂಡ ತಮ್ಮದೇ ಮನೆಯ ಹಬ್ಬ ಅಂತೆಲ್ಲಾ ಸೇರಿ ಭಾಗವಹಿಸುತ್ತಿದ್ದರು. ಸಾಯಂಕಾಲವಾಯಿತು ಅಂದರೆ ಮಠಕ್ಕೆ ಸಂತೆಪೇಟೆ, ಪ್ಯಾಟೇ, ಉಪ್ಪಾರ ಕೇರಿಯಿಂದ ಜನಗಳು ಬಂದು ಸೇರುತ್ತಿದ್ದರು. ದಿನನಿತ್ಯ ಪ್ರವಚನ ಇರುತ್ತಿತ್ತು. ಓಡಾಡುತ್ತಿದ್ದ ಜನಗಳ ಸಂಖ್ಯೆ ಕೂಡ ಕಡಿಮೆ ಇರಲಿಲ್ಲ. ನಾವೆಲ್ಲಾ ಚಿಕ್ಕವರು, ಮನೆಯ ಹತ್ತಿರದಲ್ಲೇ ಇದ್ದ ಈ ಮಠಕ್ಕೆ ಹೋಗಿ ಒಂದು ರೌಂಡು ಅಡ್ಡಾಡಿಕೊಂಡು, ಸ್ವಾಮಿಗಳ ಕಾಲಿಗೆ `ಒಂದು ಹೆದರಿಕೆಯ ನಮಸ್ಕಾರ' ಅಂತ ಹಾಕಿ ಬರುತ್ತಿದ್ದೇವು. ನಾನು ಎಸ್ಸಸ್ಸೆಲ್ಸಿಯಲ್ಲಿ 90 ಪರ್ಸೆಂಟೇಜ್ ಮಾಡಲು ಮುಖ್ಯ ಕಾರಣ ಕೂಡ, ಮಠದ ಗದ್ದುಗೆಯಲ್ಲಿ ನಿಶ್ಯಬ್ಧದ ಅಂಗಳದಲ್ಲಿ ಸಾಗುತ್ತಿದ್ದ ನನ್ನ ಅಧ್ಯಯನ. ನಾವು ಚಿಕ್ಕವರಾಗಿದ್ದಾಗ ಬನವಾಸಿ ಮಠದ ಹಿರಿಯ ಸ್ವಾಮೀಜಿಗಳು, ಮಠದ ಅಂಗಳದಲ್ಲೇ ಲಿಂಗಕ್ಯರಾಗಿದ್ದ ಶಿವಯೋಗಿ ಸ್ವಾಮಿಗಳ ಪವಾಡದ ಕಥೆಗಳು, ನಡೆದ ಘಟನೆಗಳನ್ನು ಹೇಳುತ್ತಿದ್ದರು. ಪವಾಡಗಳ ಕೆಲವು ಘಟನೆಗಳು ಕೆವು ಮನಸ್ಸಿನಲ್ಲಿವೆ, ಕೆಲವು ಅಳಸಿಹೋಗಿವೆ. ಸುಮಾರು ನೂರು ವರ್ಷ ಬದುಕು ಬಾಳಿದ ಶ್ರೀ ಶಿವಯೋಗಿ ಸ್ವಾಮಿಗಳು ಗದ್ದುಗೆಯಲ್ಲಿದ್ದಾರೆ. ಇಂದಿಗೂ ಮಠದ ಆವರಣದಲ್ಲಿ ಅವರ ಆತ್ಮ ಓಡಾಡುತ್ತಿದೆ ಅಂತ ಅವರನ್ನು ನೋಡಿದ್ದ ನಮ್ಮಜ್ಜಿಯ ಮಾತುಗಳನ್ನು ವಿಜ್ಞಾನ ಹಾಗೂ ತಂತ್ರಜ್ಞಾನ ಕಲಿತಿರುವ ನನಗೆ ಅದು ಟೊಳ್ಳಾಗಿ ಕಂಡರೂ, ಶಿವಯೋಗಿ ಸ್ವಾಮಿಗಳನ್ನು ನೋಡಿದವರಿಗೆ ಅದು ಖಂಡಿತ ನಿಜ. ನೋಡಿದ್ದವರಿಗೆ ಅದು ನಿಜ. ಅವರು ಲಿಂಗಕ್ಯರಾಗಿ ಒಂದುವರೆ ದಶಕಗಳ ನಂತರ ಹುಟ್ಟಿರುವ ನನಗೆ ಅವರು ಶ್ರೀಧರ್ ಸ್ವಾಮಿ , ವಿವೇಕಾನಂದ, ಮಹಾತ್ಮರ ತರಹ ದೊಡ್ಡ ವ್ಯಕ್ತಿಯಾಗಿ ಕಾಣುವುದಂತೂ ನಿಜ.
ಕಳೆದುಹೋದ ವೈಭವದ ದಿನಗಳ ಇವೆರಡರ ಮಾತುಗಳೇ ಇಷ್ಟೋಂದು ಇರುವಾಗ ಇನ್ನು ಅನೇಕ ಸಾಂಗತ್ಯಗಳ ಸುದ್ದಿಯನ್ನು ಬಿಡಲಾದೀತೇ! ಬರೆದ ನನಗೆ ಇವೆರಡರ ವಿಷಯಗಳ ಬಗ್ಗೆಯೇ ಇಷ್ಟೊಂದು ನೆನಪಿನರಾಶಿ ಇರುವಾಗ ಬನವಾಸಿಯಲ್ಲಿದ್ದ ಬೇರೆ ಸಂಗತಿಗಳ ಬಗ್ಗೆಯೂ ಬರೆಯುವುದು ಸಾಕಷ್ಟಿದೆ. ಅದೊಂತರ ಬೆಟ್ಟದಂತಿರುವ ನೆನಪುಗಳನ್ನು ಅಂಗೈ ಬೊಗಸೆಯಲ್ಲಿ ತೋರಿಸುವ ಪ್ರಯತ್ನ ಇಷ್ಟೇ. ನಾವೆಲ್ಲಾ ಮಿಸ್ ಮಾಡಿಕೊಂಡಿರುವ ಭೂಮಿ ಹುಣ್ಣಿಮೆ, ಕಾಮಣ್ಣನ ಹಬ್ಬ, ಗಣೇಶ್ ಚೌತಿ, ಜಾತ್ರೆ, ಆಡಿದ ಬಗುರಿ ಆಟ, ಚಿನ್ನಿದಾಂಡು, ಲಗೋರಿ. ಈಗ ಎಲ್ಲವೂ ಕೆಲವು ನೆನಪಷ್ಟೇ. ಈಗ ಕೆಲವೊಂದು ಕಡೆ ಇವೆಲ್ಲಾ ನಾವು ನೀವು ಆಚರಣೆ ಮಾಡುತ್ತಿದ್ದರೂ ನಮ್ಮ ತಲೆಮಾರಿನಲ್ಲಿ ನಾವು ಕಂಡ ಸುಂದರ ನೆನಪುಗಳು ಈಗ ಮುಂದಿನ ದಿನಗಳಲ್ಲಿ ಹೇಗೋ ಗೊತ್ತಿಲ್ಲ. ಇದರ ನೆನಪಿನ ಕೆಲವು ಮಾತುಗಳು ಇಷ್ಟೇ. ಇನ್ನೊಮ್ಮೆ ನವು ಮಿಸ್ ಮಾಡಿಕೊಳ್ಳುತ್ತಿರುವ ನಮ್ಮೂರು ಬನವಾಸಿ ಸಾಂಗತ್ಯದ ಉಳಿದ ವಿಷಯಗಳ ಬಗ್ಗೆ ಬರೆಯುತ್ತೇನೆ.
ಲೇಖನ ಓದಿದ ಮೇಲೆ ನಿಮ್ಮ ನೆನಪಿನ ಮೂಟೆಯಲ್ಲಿ ಅಡಗಿರುವ ವಿಷಯಗಳನ್ನು ಹಂಚಿಕೊಳ್ಳಲು ಮರೆಯದಿರಿ. ಇದೊಂದು ಸಣ್ಣ ಪೀಠಿಕೆ ಅಷ್ಟೇ.