Thursday, 11 August 2011

ಕಾಣದು..!

ನೋವಿನ ಬುತ್ತಿ ಉಂಡವನಿಗೆ
ಸುಖದ ಹಸಿವು ಎಂದು ಕಾಣದು..
ಕಾಣದ ಜಗತ್ತಿನ ಹುಡುಕಾಟದಲಿ
ಇರುವ  ಒಡಲಿನ ಬೆಳಕು ಎಂದು ಕಾಣದು..
ಜಗತ್ತಿನ ಉದ್ದಗಲದ ಹೊಸ್ತಿಲನು ಕಂಡವರ್ಯಾರು?
ಕಂಡಿದ್ದರೂ ಅದರ ವಿಸ್ತೀರ್ಣದ ಪರಿ ಕಾಣದು..
ಬೆಟ್ಟದಷ್ಟು ಪ್ರೀತಿ, ಸಾಗರದಷ್ಟು ವಾತ್ಸಲ್ಯ,ಮಿತಿಯಿಲ್ಲ
ಹೋಲಿಕೆ ಮಾಡದಷ್ಟು ಇರುವ ಸ್ವತ್ತು
ಅನುಭವಿಸದವರಿಗೆ ಎಂದು ಕಾಣದು..

`ನಾ’ನೆಂಬ ಭಿಕಾರಿ..!


ಬಾಳ ಕತ್ತಲೆಯ ಹಗಲು ರಾತ್ರಿಗಳ ಜೂಜಾಟದಲಿ
ಕೆಲವೊಮ್ಮೆ ಗೆಲುವು, ಅನೇಕ ಬಾರಿ `ಭಾರಿ’ ಸೋಲು
ದಿನಗಳು ಮುಂದೂಡುವವೂ,ಮನವರಿಕೆಯಾಗದಂತೆ
ಅಂದುಕೊಂಡಿದ್ದು ಆಗಿರುವುದಿಲ್ಲ
ಆಗುವಂತೆ ಆಣತಿ ನೀಡಲು ನಾವ್ಯಾರು?
ನಾನಾಗಬೇಕಾದವನು ನಾನಾಗಿರುವುದಿಲ್ಲ
ಅನ್ನದ ಋಣದ ಪರಿಯ ಭಿಕಾರಿಗಳು ನಾವು..
ಜೀವನದ ಪರಿಪಾಠವೇ ಸುಖದ ಅಲೆಮಾರಿತನ
ಕಳ್ಳುಬಳ್ಳಿಯ ಕಂಕುಳದ ತಲೆಮಾರು,ತಲೆಭಾರ
ಕೂಡಿಟ್ಟ ಕಳೆದಿಟ್ಟ ಸಂಬಳ ಗಿಂಬಳ ನಮ್ಮ ರಕ್ತದ ಬೆನ್ನೆತ್ತಿ
ನನ್ನದೆಂಬ ಸ್ವಂತಿಕೆಯ ಪ್ರವಹನ ಸೇರುವುದು ಮಸಣದಲಿ
ಏಳಿಗೆಯಿಲ್ಲದ ಬಾಳಿನ ಪರಿ
ಕಥೆಯಿಲ್ಲ,ಶ್ರತಿ ಸೇರಲಿಲ್ಲ.
ಮುಗಿಯಿತು  ಜೀವನದ ಪರಿಪಾಠ..!